Government Employee: ಸರ್ಕಾರಿ ನೌಕರರಿಗೆ ಖಡಕ್ ಸೂಚನೆ ಕೊಟ್ಟ ಉಪ ಲೋಕಾಯುಕ್ತರು
ಶಿವಮೊಗ್ಗ, ಮಾರ್ಚ್ 19: ಶಿವಮೊಗ್ಗ ನಗರ ಪ್ರವಾಸದಲ್ಲಿರುವ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ದೂರು ಸ್ವೀಕಾರ, ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮ ನಡೆಸಿದರು. ನಗರದ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ ಅವರು, ನಿಗದಿಪಡಿಸಿದ ಕಾಲಮಿತಿಯಲ್ಲಿ ಸಂಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಶಿವಮೊಗ್ಗ ನಗರದ ಗಾಂಧಿ ಉದ್ಯಾನವನ, ತುಂಗಾನಾಲೆ, ಇಂದಿರಾ ಕ್ಯಾಂಟೀನ್, ನವುಲೆ ಕೆರೆ ಪ್ರದೇಶಗಳಿಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

"ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ/ ಸಿಬ್ಬಂದಿಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಸೇವೆ ಬಯಸಿ ಬರುವ ಸಾರ್ವಜನಿಕರಿಗೆ ಅನವಶ್ಯಕ ವಿಳಂಬಕ್ಕೆ ಅವಕಾಶವಿಲ್ಲದಂತೆ ಸೇವೆ ಒದಗಿಸಿಕೊಡುವ ಮೂಲಕ ಜನಸ್ನೇಹಿಯಾಗಿ ನಡೆದುಕೊಳ್ಳಬೇಕು" ಎಂದು ಉಪಲೋಕಾಯುಕ್ತರು ತಿಳಿಸಿದರು.
ವಿವಿಧ ಕಾಮಗಾರಿಗಳ ವೀಕ್ಷಣೆ: ಗಾಂಧಿ ಉದ್ಯಾನವನಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ಪಾದಚಾರಿಗಳು ಮಾಡಿದ ಸಾಮಾನ್ಯ ಮತ್ತು ಗಂಭೀರ ಸ್ವರೂಪದ ಆರೋಪಗಳನ್ನು ಆಲಿಸಿದರು. ಮುಂದಿನ 20 ದಿನಗಳಲ್ಲಿ ವಾಯುವಿಹಾರಿಗಳಿಗೆ ಅನುಕೂಲವಾಗುವಂತೆ ಉದ್ಯಾನವನದ ಆಯ್ದ ನಾಲ್ಕು ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯ, ಬೆಳಕು, ಒದಗಿಸುವುದರ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ನಿರ್ದೇಶನ ನೀಡಿದರು.
ನಿಗದಿಪಡಿಸಿದ ಕಾಲಮಿತಿಯಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಬೇಕು. ಅಲ್ಲಿಯವರೆಗೂ ಪಾಲಿಕೆ ಆಯುಕ್ತರ ವಿರುದ್ಧ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಳ್ಳಲಾಗುವುದು. ಸಮಸ್ಯೆಗಳಿಗೆ ಪರಿಹಾರ ದೊರಕಿದ ಮಾಹಿತಿ ನೀಡಿದ ನಂತರ ದಾಖಲಿಸಿಕೊಳ್ಳಲಾದ ದೂರನ್ನು ವಿಲೇವಾರಿ ಮಾಡಲಾಗುವುದು ಎಂದು ಹೇಳಿದರು.
20 ಜಿಲ್ಲೆಗಳಲ್ಲಿ ಸಾರ್ವಜನಿಕರಿಂದ ಕುಂದುಕೊರತೆಗಳ ಬಗ್ಗೆ ದೂರು ಸ್ವೀಕಾರ, ವಿಲೇವಾರಿ ಸಭೆ ಮಾಡಿದ್ದೇವೆ. ಉತ್ತಮ ಫಲಿತಾಂಶ ಸಿಕ್ಕಿದೆ. 1984ರಲ್ಲಿ ಆರಂಭವಾದ ಈ ಸಂಸ್ಥೆ, ಇದರಿಂದ ಸಾರ್ವಜನಿಕರಿಗೆ ಇರುವ ಅನುಕೂಲಗಳೇನು, ಧ್ಯೇಯೋದ್ದೇಶಗಳೇನು, ಯಾವ ರೀತಿ ದೂರು ಸಲ್ಲಿಸಬಹುದು ಹಾಗೂ ಪರಿಹಾರ ಪಡೆಯಬಹು ಎಂದು ತಿಳಿಸುತ್ತಾ, ಸಾರ್ವಜನಿಕರ ತೊಂದರೆಗಳನ್ನು ನಿವಾರಿಸುತ್ತಾ ಬರಲಾಗಿದೆ ಎಂದರು.
ಸರ್ಕಾರಿ ಅಧಿಕಾರಿಗಳು ಕಾಲಮಿತಿಯೊಳಗೆ ಸಾರ್ವಜನಿಕರ ಕೆಲಸ ಮಾಡಿಕೊಡಬೇಕು. ಸರಿಯಾದ ಸಮಯದಲ್ಲಿ ಕೆಲಸ ಮಾಡದಿದ್ದರೆ ಸಮಾಜ, ಜನ ಅಕ್ರಮ ದಾರಿ ಹಿಡಿಯಬಹುದು ಅಥವಾ ತೀವ್ರ ತೊಂದರೆಗೆ ಒಳಗಾಗಬಹುದು. ಆದ್ದರಿಂದ ಸರ್ಕಾರಿ ಕರ್ತವ್ಯ ನಿರ್ವಹಿಸುವಲ್ಲಿ ಬೇಜವಾಬ್ದಾರಿತನ ತೋರದೆ ನಿರ್ಲಕ್ಷ್ಯ, ಅನಗತ್ಯ ವಿಳಂಬ ಮಾಡದೇ ಕೆಲಸ ಮಾಡಿಕೊಡಬೇಕು. ಮಾಡಬೇಕಾದ ಕೆಲಸ ಮಾಡದಿರುವುದು, ಲಂಚಕ್ಕೆ ಬೇಡಿಕೆ ಇಡುವುದು, ಜಾತಿ ಪಕ್ಷಪಾತ ಮಾಡುವುದು ಅಪರಾಧವಾಗುತ್ತದೆ ಎಂದು ಹೇಳಿದರು.
ಸರ್ವರಿಗೂ ಸಮಬಾಳು ನೀಡುವ ಸದುದ್ದೇಶದಿಂದ ಸರ್ಕಾರ ಜಾರಿಗೆ ಬಂದಿದೆ. ನಮ್ಮ ದೇಶ ಮತ್ತು ಕಾನೂನು ರಕ್ಷಣೆ ನಾವೇ ಮಾಡಿಕೊಳ್ಳಬೇಕು. ದೇಶದ ಮೂಲೆ ಮೂಲೆಯಲ್ಲಿರುವ ಜನರಿಗೂ ರಕ್ಷಣಾತ್ಮಕ ಕಾನೂನುಗಳು, ಸೌಲಭ್ಯಗಳು ತಲುಪಬೇಕು. ಶಾಸಕಾಂಗ ರೂಪಿಸಿರುವ ಕಾಯ್ದೆ, ಕಾನೂನು ಮತ್ತು ಸೌಲಭ್ಯಗಳನ್ನು ಜನರಿಗೆ ಕಾರ್ಯಾಂಗ ತಲುಪಿಸುತ್ತಿದೆ. ಇವನ್ನು ಸಂರಕ್ಷಿಸುವ ಕೆಲಸ ಆಗಬೇಕಿದೆ ಎಂದು ಕರೆ ನೀಡಿದರು.
ಸಮಸ್ಯೆಗಳ ಪರಿಹಾರಕ್ಕೆ ಪ್ರಾಧಾನ್ಯತೆ ನೀಡಿ, ದುರುದ್ದೇಶದಿಂದ ಕರ್ತವ್ಯಲೋಪವಾಗಿದ್ದರೆ ತಕ್ಕ ಪಾಠವಾಗಬೇಕು ಎಂಬ ಉದ್ದೇಶದಿಂದ ಲೋಕಾಯುಕ್ತ ರಚನೆಯಾಯಿತು. ಸರ್ಕಾರದ ಲೋಪದೋಷವಿದ್ದರೂ ಅದನ್ನು ಹೊರಗೆಳೆದು ಶಿಕ್ಷಿಸುವ ಉದ್ದೇಶದಿಂದ ಈ ಸ್ವಾಯತ್ತ ಸಂಸ್ಥೆ ರಚನೆಯಾಗಿದೆ. ಸಮಸ್ಯೆ ಪರಿಹಾರಕ್ಕೆ ಮೊದಲ ಪ್ರಾಧಾನ್ಯತೆ ನೀಡಿ ನಂತರ ಸಮಸ್ಯೆಗೆ ಕಾರಣ ಕುರಿತು ಪರಿಶೀಲನೆ ಮಾಡಿ, ಇಲಾಖಾ ವಿಚಾರಣೆ ನಡೆಸಿ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ನಂತರ ಸೂಕ್ತ ಕ್ರಮ ಜರುಗಿಸುತ್ತದೆ. ಲೋಕಾಯುಕ್ತದಲ್ಲಿ 40 ನ್ಯಾಯಾಧೀಶರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಯಾವುದೇ ಸಾರ್ವಜನಿಕರು ಕರ್ತವ್ಯ ಲೋಪವೆಸಗಿದ ಸರ್ಕಾರಿ ಅಧಿಕಾರಿ/ ನೌಕರರ ವಿರುದ್ದ ದೂರು ನೀಡಬಹುದು. ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು ಕಂಡುಬಂದಲ್ಲಿ ಲೋಕಾಯುಕ್ತ ಸ್ವಯಂ ಪ್ರೇರಿತ ದೂರನ್ನು ನೋಂದಾಯಿಸಿಕೊಳ್ಳಬಹುದು. ಸರ್ಕಾರ ತನ್ನ ಗಮನಕ್ಕೆ ಬಂದದ್ದನ್ನು ಸಹ ಲೋಕಾಯುಕ್ತ ಪರಿಶೀಲಿಸಿ ವರದಿ ಸಲ್ಲಿಸಲು ತಿಳಿಸಬಹುದು ಎಂದು ವಿವರಣೆ ನೀಡಿದರು.
ಸುಳ್ಳು ದೂರು ನೀಡಿದಲ್ಲಿ ದೂರುದಾರರಿಗೂ ಶಿಕ್ಷೆ ಇದೆ. ನಮ್ಮ ವ್ಯಾಪ್ತಿಗೆ ಬರುವ ಪ್ರಕರಣಗಳನ್ನು ಕೂಲಂಕುಷ ತನಿಖೆಗೊಳಪಡಿಸಿ, ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ. ನಮ್ಮ ವ್ಯಾಪ್ತಿಗೊಳಪಡದ ದೂರುಗಳನ್ನು ಎಲ್ಲಿಗೆ ಹೋಗಬೇಕೆಂದು ನಿರ್ದೇಶನ, ಮಾರ್ಗದರ್ಶನ, ಸಲಹೆ ನೀಡಲಾಗುವುದು. ರೂ. 3 ಲಕ್ಷದೊಳಗಿನ ಆದಾಯ ಹೊಂದಿರುವವರಿಗೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸಲಹೆ ನೆರವು ನೀಡಲಾಗುವುದು ಎಂದು ಉಪ ಲೋಕಾಯುಕ್ತರು ವಿವರಣೆ ನೀಡಿದರು.












Click it and Unblock the Notifications