ಕೆಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು!
ಶಿವಮೊಗ್ಗ, ಜನವರಿ 07 : ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕೆಎಎಸ್ ಅಧಿಕಾರಿ ಪ್ರಕಾಶ್ ಪತ್ನಿ ಸುಮಾ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಶಿವಮೊಗ್ಗದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾ (45) ಡಿಸೆಂಬರ್ 24ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.ಮಕ್ಕಳಾಗಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿತ್ತು.
ಸುಮಾ ಅವರ ಮೊಬೈಲ್ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಸುಮಾ ಅವರ ಮೊಬೈಲ್ ಸಂಭಾಷಣೆ ಆಧಾರದ ಮೇಲೆ ಶಿಕ್ಷಕಿಯೊಬ್ಬರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಸುಮಾ ಅವರಿಗೆ ಶಿಕ್ಷಕಿಯೊಬ್ಬರು ಕಿರುಕುಳ ನೀಡುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಇನ್ನೊಬ್ಬರು ಶಿಕ್ಷಕಿ ಜೊತೆಗೆ ಸುಮಾ ಈ ಬಗ್ಗೆ ಮಾತನಾಡಿರುವ ದೂರವಾಣಿ ಕರೆಯ ರೆಕಾರ್ಡ್ ಸಿಕ್ಕಿದೆ. ಈ ಆಧಾರದ ಮೇಲೆ ಎಫ್‌ಐಆರ್ ಹಾಕಲಾಗಿದೆ.
ಮೊದಲು ಸುಮಾ ಭದ್ರಾವತಿಯ ಸಂಚಿ ಹೊನ್ನಮ್ಮ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಶಿವಮೊಗ್ಗದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಗೆ ವರ್ಗಾವಣೆಗೊಂಡಿದ್ದರು. ಕೆಲಸದಲ್ಲಿನ ಹೊಂದಾಣಿಕೆ ವಿಚಾರಕ್ಕೆ ಶಿಕ್ಷಕಿಯೊಬ್ಬರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಶಿಕ್ಷಕಿಯೊಬ್ಬರ ಜೊತೆ ಮಾತನಾಡುವಾಗ ಕಿರುಕುಳದ ವಿಷಯ ಪ್ರಸ್ತಾಪಿಸಿದ್ದ ಸುಮಾ, "ಕೊಠಡಿಯಲ್ಲಿ ಏನಾದರೂ ಮಾಡಿಕೊಳ್ಳಬೇಕು ಎಂದು ಅನ್ನಿಸುತ್ತಿದೆ" ಎಂದು ಹೇಳಿದ್ದರು. ನಿಸರ್ಗ ಲೇಔಟ್‌ನಲ್ಲಿರುವ ಮನೆಯಲ್ಲಿ ಡಿಸೆಂಬರ್ 24ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪತಿ ಪ್ರಕಾಶ್ ಅವರ ಜೊತೆ ಸಹ ಸುಮಾ ಕಿರುಕುಳದ ಬಗ್ಗೆ ಪ್ರಸ್ತಾಪಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications