Monsoon Rain: ತುಂಗಾ ಮೇಲ್ದಂಡೆ ಮುಖ್ಯ ಕಾಲುವೆ ನೀರು, ವೇಳಾಪಟ್ಟಿ
ಶಿವಮೊಗ್ಗ, ಜುಲೈ 02: ಮಲೆನಾಡು ಭಾಗದಲ್ಲಿ ನೈಋತ್ಯ ಮುಂಗಾರು ಮಳೆ ಅಬ್ಬರಿಸುತ್ತಿದೆ. ತುಂಗಾ ನದಿ ತುಂಬಿ ಹರಿಯುತ್ತಿದ್ದು, ಶಿವಮೊಗ್ಗದ ಗಾಜನೂರಿನಲ್ಲಿರುವ ತುಂಗಾ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಈ ಹಿನ್ನಲೆಯಲ್ಲಿ ತುಂಗಾ ಮೇಲ್ದಂಡೆ ಮುಖ್ಯಕಾಲುವೆಯಲ್ಲಿ ನೀರು ಹರಿಸುವ ಎಚ್ಚರಿಕೆಯನ್ನು ನೀಡಲಾಗಿದೆ.
ಕರ್ನಾಟಕ ನೀರಾವರಿ ನಿಗಮ ನಿಯಮಿತದ ತುಂಗಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. ಕರ್ನಾಟಕದ ಅತಿ ಚಿಕ್ಕ ಹಾಗೂ ಮೊದಲು ಭರ್ತಿಯಾಗುವ ಡ್ಯಾಂ ಗಾಜನೂರಿನಲ್ಲಿರುವ ತುಂಗಾ ಡ್ಯಾಂ ಆಗಿದೆ.

ಈ ಡ್ಯಾಂ ಗರಿಷ್ಠ ನೀರಿನ ಸಂಗ್ರಹ ಮಟ್ಟ 588.24 ಅಡಿಗಳು. ಸದ್ಯ ತುಂಗಾ ಜಲಾಶಯದ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಒಳಹರಿವು ಹೆಚ್ಚಾಗಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ 2 ಕ್ರಸ್ಟ್‌ಗೇಟ್‌ಗಳನ್ನು ತೆರೆದು ನದಿಗೆ ನೀರು ಹರಿಸಲಾಗುತ್ತಿದೆ.
ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಗೆ ನೀರು: ತುಂಗಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಯಲ್ಲಿ 2024-25ನೇ ಸಾಲಿನ ಮುಂಗಾರು ಹಂಗಾಮಿಗೆ ದಿನಾಂಕ 3/7/2024 ರಿಂದ 10/11/2024ರ ವರೆಗೆ ಜಲಾಶಯದಲ್ಲಿ ನೀರಿನ ಲಭ್ಯತೆ ಅನುಸಾರ ನೀರು ಹರಿಸಲಾಗುವುದು ಎಂದು ಕಾರ್ಯಪಾಲಕ ಇಂಜಿನಿಯರ್ ಹೇಳಿದ್ದಾರೆ.
ಆದ್ದರಿಂದ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ನಾಲೆ ಹಾಗೂ ಉಪನಾಲೆಗಳಲ್ಲಿ ಅಚ್ಚುಕಟ್ಟು ರೈತರು ಹಾಗೂ ಸಾರ್ವಜನಿಕರು, ಜಾನುವಾರುಗಳೊಂದಿಗೆ ಯಾವುದೇ ಚಟುವಟಿಕೆಗಳನ್ನು ಮಾಡದೇ ಮುನ್ನೆಚ್ಚರಿಕೆಯಿಂದಿರಬೇಕೆಂದು ಎಂದು ಎಚ್ಚರಿಕೆ ನೀಡಲಾಗಿದೆ.
ಕಳೆದೆ ಎರಡು ವಾರಗಳಿಂದ ತುಂಗಾ ಜಲಾನಯನ ಪ್ರದೇಶವಾದ ತೀರ್ಥಹಳ್ಳಿ, ಆಗುಂಬೆ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ಗಾಜನೂರಿನ ಡ್ಯಾಂಗೆ ಒಳಹರಿವು ನಿರಂತರವಾಗಿ ಏರಿಕೆಯಾಗುತ್ತಿದೆ. ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟು ನೀರನ್ನು ನದಿಗೆ, ಕಾಲುವೆಗೆ ಹರಿಸಲಾಗುತ್ತದೆ.
ಪ್ರತಿವರ್ಷ ಮುಂಗಾರು ಆರಂಭವಾಗುತ್ತಿದ್ದಂತೆಯೇ ತುಂಗಾ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿ ಡ್ಯಾಂಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತದೆ. ಆದ್ದರಿಂದ ಜೂನ್‌ನಲ್ಲಿಯೇ ಡ್ಯಾಂನ ಕಾಲುವೆಗಳ ಮೂಲಕ ನೀರು ಹರಿಸಲಾಗುತ್ತದೆ.
ಆದರೆ 2023ರಲ್ಲಿ ಮಳೆ ಕೊರತೆಯ ಕಾರಣ ಡ್ಯಾಂ ಬೇಗ ಭರ್ತಿಯಾಗಿರಲಿಲ್ಲ. ಆದ್ದರಿಂದ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ನಾಲೆ ಹಾಗೂ ಉಪನಾಲೆಗೆ ಜೂನ್‌ನಲ್ಲಿ ನೀರು ಹರಿದು ಬಂದಿರಲಿಲ್ಲ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು.
ಈ ಬಾರಿ ಜೂನ್‌ನಲ್ಲಿ ಮಳೆ ಅಬ್ಬರಿಸದಿದ್ದರೂ ಸಹ ಸಾಧಾರಣವಾಗಿ ಸುರಿಯುತ್ತಿದೆ. ತುಂಗಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದು, ಗಾಜನೂರು ಡ್ಯಾಂಗೆ ಹೆಚ್ಚು ನೀರು ಹರಿದು ಬರುತ್ತಿದೆ. ಆದ್ದರಿಂದ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ನಾಲೆಗೆ ನೀರು ಹರಿಸುವ ಪ್ರಕಟಣೆ ಹೊರಡಿಸಲಾಗಿದೆ.
ಶಿವಮೊಗ್ಗದ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ನಾಲೆ ಹಾಗೂ ಉಪನಾಲೆಗೆ ನೀರು ಹರಿಸಲು ಪ್ರಾರಂಭವಾದರೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಾಯಕವಾಗಲಿದೆ. ಅಲ್ಲದೇ ಕೆರೆ-ಕಟ್ಟೆಗಳಿಗೆ ನೀರು ಹರಿದು ಅವುಗಳು ಸಹ ತುಂಬುತ್ತವೆ.
ತುಂಗಾ ಡ್ಯಾಂನಿಂದ ನದಿಗೆ ನೀರು ಬಿಟ್ಟರೆ ಅದು ಶಿವಮೊಗ್ಗ ನಗರದ ಮೂಲಕ ಸಾಗಿ ಕೂಡಲಿಯಲ್ಲಿ ಭದ್ರಾ ನದಿಯನ್ನು ಸೇರುತ್ತದೆ. ಮುಂದೆ ದಾವಣಗೆರೆ, ಹಾವೇರಿ ಮೂಲಕ ತುಂಗಭದ್ರಾನದಿ ಸಾಗಿ ಬಳ್ಳಾರಿಯಲ್ಲಿರುವ ತುಂಗಭದ್ರಾ ಡ್ಯಾಂ ತಲುಪುತ್ತದೆ.
ಭದ್ರಾ ನದಿಯ ನೀರಿನ ಮಟ್ಟ ಕಡಿಮೆ ಇದೆ. ಆದ್ದರಿಂದ ಭದ್ರಾ ಡ್ಯಾಂ ಇನ್ನೂ ಭರ್ತಿಯಾಗಿಲ್ಲ. ಆದರೆ ತುಂಗಾ ನದಿ ಪಾತ್ರದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಡ್ಯಾಂ ಭರ್ತಿಯಾಗಿದ್ದು, ನದಿ ಮತ್ತು ಕಾಲುವೆಗೆ ನೀರನ್ನು ಹರಿಸಲಾಗುತ್ತಿದೆ. ಮಳೆಯ ಪ್ರಮಾಣ ಹೆಚ್ಚಾದರೆ ನದಿಗೆ ಹರಿಸುವ ನೀರಿನ ಮಟ್ಟದಲ್ಲೂ ಏರಿಕೆಯಾಗಲಿದೆ.












Click it and Unblock the Notifications