ಶಿವಮೊಗ್ಗ; ತೀರ್ಥಹಳ್ಳಿ ಬಳಿ ಲಾರಿ ಪಲ್ಟಿ; 10 ಹಸು ಸಾವು
ಮಂಗಳೂರು, ಡಿಸೆಂಬರ್ 11 : ಹಸುಗಳನ್ನು ಸಾಗಣೆ ಮಾಡುತ್ತಿದ್ದ ಐಶರ್ ಕಂಟೈನರ್ ಲಾರಿ ಪಲ್ಟಿ ಹೊಡೆದ ಘಟನೆ ನಡೆದಿದೆ. ಲಾರಿಯಲ್ಲಿದ್ದ 16 ಹಸುಗಳ ಪೈಕಿ 10 ಹಸುಗಳು ಸಾವನ್ನಪ್ಪಿದ್ದು, ವಾಹನದಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿಯ ಬೆಜ್ಜವಳ್ಳಿಯಲ್ಲಿ ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. ಕಂಟೈನರ್ ಲಾರಿ ಚಾಲಕ ಗಾಯಗೊಂಡಿದ್ದು, ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದಾವಣಗೆರೆಯಿಂದ ಮಂಗಳೂರಿಗೆ ಐಶರ್ ವಾಹನ ಸಂಖ್ಯೆ ಕೆಎ 17 ಬಿ 6471 ಸಾಗುತ್ತಿತ್ತು. ಅತಿಯಾದ ವೇಗ ಮತ್ತು ಇಬ್ಬನಿಯ ಪರಿಣಾಮ ವಾಹನ ಚಾಲಕನ ನಿಯಂತ್ರಣ ತಪ್ಪಿ ಬೆಜ್ಜವಳ್ಳಿಯ ಬಳಿ ಪಲ್ಟಿಯಾಗಿದೆ.

ವಾಹನದಲ್ಲಿ 16 ಹಸುಗಳನ್ನು ಸಾಗಣೆ ಮಾಡಲಾಗುತ್ತಿತ್ತು. ವಾಹನ ಪಲ್ಟಿಯಾಗಿದ್ದರಿಂದ 10 ಹಸುಗಳು ಮೃತಪಟ್ಟಿವೆ. ಸ್ಥಳೀಯರು ತಕ್ಷಣ ಸ್ಥಳಕ್ಕೆ ಆಗಮಿಸಿ ಬದುಕಿದ್ದ ಹಸುಗಳನ್ನು ರಕ್ಷಣೆ ಮಾಡಿ ಹುಲ್ಲು, ನೀರು ಕೊಟ್ಟು ಆರೈಕೆ ಮಾಡಿದರು.
ವಾಹನದಲ್ಲಿ ಹಲಗೆ ಹಾಸಿ, ಅದರೊಂದಿಗೆ ಹಸುಗಳನ್ನು ಸಾಗಣೆ ಮಾಡಲಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಅಪಘಾತ ನಡೆದ ಬಳಿಕ ಲಾರಿಯಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ. ಚಾಲಕ ಆಸ್ಪತ್ರೆಯಲ್ಲಿದ್ದಾನೆ.

ಪ್ರಾಥಮಿಕವಾಗಿ ಇದುದ ಅಕ್ರಮ ಗೋ ಸಾಗಣೆ ಪ್ರಕರಣ ಎಂದು ಆರೋಪಿಸಲಾಗಿದೆ. ಆದರೆ, ಚಾಲಕ ಇದನ್ನು ನಿರಾಕರಿಸಿದ್ದಾನೆ. ವಾಹನದಲ್ಲಿದ್ದ ಹಸುಗಳು ಆರೋಗ್ಯವಂತವಾಗಿದ್ದು, ಮಾರಾಟಕ್ಕಾಗಿ ಸಾಗಣೆ ಮಾಡಲಾಗುತ್ತಿತ್ತೆ? ಎಂಬ ಪ್ರಶ್ನೆ ಎದ್ದಿದೆ.
ಮಾಳೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ತನಿಖೆ ಬಳಿಕ ಘಟನೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಈ ರಸ್ತೆಯಲ್ಲಿ ಅಕ್ರಮ ಗೋ ಸಾಗಟ ನಡೆಯುತ್ತದೆ ಎಂದು ಜನರು ಆರೋಪಿಸಿದ್ದಾರೆ.












Click it and Unblock the Notifications