ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮ: ಪ್ರವಾಸಿಗರ ಸಂಖ್ಯೆ ಹೆಚ್ಚಳ
ಶಿವಮೊಗ್ಗ, ಏಪ್ರಿಲ್ 01: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ವಿವಿಧ ಪ್ರವಾಸಿ ತಾಣಗಳಿವೆ. ಇವುಗಳಲ್ಲಿ ಶಿವಮೊಗ್ಗ ನಗರದ ಹತ್ತಿರವಿರುವ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಸಹ ಒಂದು. ಪ್ರತಿದಿನ ನೂರಾರು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ದೇಶ-ವಿದೇಶದ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದು, ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.
ಕರ್ನಾಟಕದ ಮೃಗಾಲಯ ಪ್ರಾಧಿಕಾರದ ಅಧೀನದಲ್ಲಿ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮ ಕಾರ್ಯ ನಿರ್ವಹಣೆ ಮಾಡುತ್ತಿದೆ. ಮೈಸೂರಿನಲ್ಲಿ ಮೃಗಾಲಯ ಮಾತ್ರವಿದೆ. ಆದರೆ ತ್ಯಾವರೆಕೊಪ್ಪದಲ್ಲಿ ಹುಲಿ ಮತ್ತು ಸಿಂಹಧಾಮದ ಜೊತೆಗ ಸಫಾರಿಯೂ ಇದ್ದು, ಹೆಚ್ಚು ಪ್ರವಾಸಿಗರನ್ನು ಇದು ಆಕರ್ಷಿಸುತ್ತಿದೆ.

ಮಾಹಿತಿಗಳ ಪ್ರಕಾರ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ವಾರ್ಷಿಕ 3 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ವಾರ್ಷಿಕ 5 ಕೋಟಿ ರೂ. ಆದಾಯ ಬರುತ್ತಿದ್ದು, ಈ ಹಣದಲ್ಲಿಯೇ ಇಲ್ಲಿನ ಪ್ರಾಣಿಗಳ ಆಹಾರ, ಔಷಧ, ಸಿಬ್ಬಂದಿಗಳ ವೇತನದ ಖರ್ಚು ಭರಿಸಲಾಗುತ್ತಿದೆ.
ಪ್ರತ್ಯೇಕ ಬಜೆಟ್: ಕರ್ನಾಟಕದ ಮೃಗಾಲಯ ಪ್ರಾಧಿಕಾರ ಇದರ ನಿರ್ವಹಣೆ ಮಾಡುತ್ತಿದೆ. ಆದರೆ ತ್ಯಾವರೆಕೊಪ್ಪದಲ್ಲಿ ಹುಲಿ ಮತ್ತು ಸಿಂಹಧಾಮಕ್ಕೆ ವಾರ್ಷಿಕ ಬಜೆಟ್ ಮಾಡಿಕೊಂಡು ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಸಫಾರಿ ಹೋಗಿ ಹುಲಿ ಮತ್ತು ಸಿಂಹವನ್ನು ವೀಕ್ಷಣೆ ಮಾಡುವುದು ಇಷ್ಟಪಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಸಿಇಒ ಅಮರಾಕ್ಷರ, "ಈ ವರ್ಷ ಹುಲಿ ಮತ್ತು ಸಿಂಹಧಾಮಕ್ಕೆ 3 ಲಕ್ಷ ಪ್ರವಾಸಿಗರು ಆಗಮಿಸಿದ್ದಾರೆ. ಇದರಿಂದಾಗಿ 5 ಕೋಟಿ ರೂ. ಆದಾಯ ಬಂದಿದೆ. ಸಫಾರಿ ಹೋಗುವುದರಿಂದ ಹತ್ತಿರದಿಂದ ಪ್ರಾಣಿಗಳನ್ನು ನೋಡಬಹುದು. ಅದಕ್ಕಾಗಿ ಹೆಚ್ಚಿನ ಜನರು ಇಲ್ಲಿಗೆ ಆಗಮಿಸುತ್ತಿದ್ದು, ಆದಾಯವೂ ಹೆಚ್ಚಾಗುತ್ತಿದೆ" ಎಂದು ತಿಳಿಸಿದ್ದಾರೆ.
"ಈ ಹುಲಿ ಮತ್ತು ಸಿಂಹಧಾಮ ನೈಸರ್ಗಿಕವಾದ ಕಾಡಿನಲ್ಲಿದೆ. ಆದ್ದರಿಂದ ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ. ಇಲ್ಲಿ ಹೊಸ ಮಾದರಿ ಗೇಜ್‌ಗಳನ್ನು ಮಾಡಲಾಗುತ್ತಿದೆ. ಕೇರಳದಿಂದ ಗರಿಯಾಲ್ ಮತ್ತು ರಿಯಾ ಎಂಬ ಪ್ರಾಣಿಯನ್ನು ತರಲಾಗಿದೆ. ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದಿಂದ ಪ್ರಾಣಿಗಳನ್ನು ವಿನಿಯಮ ಮಾಡಿಕೊಳ್ಳುವ ಕುರಿತು ಚರ್ಚೆಗಳು ನಡೆಯುತ್ತಿವೆ" ಎಂದು ಹೇಳಿದ್ದಾರೆ.
ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಮೊದಲು ಜಿಂಕೆ ಸಫಾರಿ ಇದೆ. ನಂತರ ಹುಲಿ ಮತ್ತು ಸಿಂಹವನ್ನು ನೋಡಬಹುದು. ಸಫಾರಿಯ ಅಂತಿಮದಲ್ಲಿ ಕಾಡುಕೋಣವನ್ನು ಪ್ರವಾಸಿಗರು ವೀಕ್ಷಣೆ ಮಾಡಲು ಅನುಕೂಲವಿದೆ.
ನೈಸರ್ಗಿಕವಾಗಿ ಬೆಳೆದ ಕಾಡಿನಲ್ಲಿಯೇ ಇಲ್ಲಿ ಪ್ರಾಣಿಗಳನ್ನು ಸಾಕಲಾಗುತ್ತಿದೆ. ಹುಲಿ ಮತ್ತು ಸಿಂಹಧಾಮದಲ್ಲಿ ಪ್ರಾಣಿಗಳಿಗೆ ನೀರು ಒದಗಿಸಲು 10 ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಇದರಿಂದಾಗಿ ಕನಿಷ್ಠ 5 ಕೋಟಿ ಲೀಟರ್ ನೀರಿನ ಸಂಗ್ರಹವಾಗುತ್ತಿದೆ.
ಇದು ಶಿವಮೊಗ್ಗ ನಗರಕ್ಕೆ ಹತ್ತಿರದಲಿದ್ದು, ಪ್ರವಾಸಿಗರು ಭೇಟಿ ನೀಡಲು ಅನುಕೂಲವಾದ ಸ್ಥಳದಲ್ಲಿದೆ. ಶಿವಮೊಗ್ಗ ತಾಲೂಕು ತ್ಯಾವರೆಕೊಪ್ಪ ಗ್ರಾಮದಲ್ಲಿ ಇದು ಇದ್ದು, ಶಿವಮೊಗ್ಗ ನಗರದಿಂದ ಸಾಗರ ರಸ್ತೆಯ ಮೂಲಕ 10 ಕಿ. ಮೀ. ಸಾಗಬೇಕು. ಸಾಗರ, ಹೊಸನಗರ, ಆಯನೂರು ಕಡೆ ಸಂಚಾರ ನಡೆಸುವ ಬಸ್‌ಗಳು ತ್ಯಾವರೆಕೊಪ್ಪದಲ್ಲಿ ನಿಲುಗಡೆ ಹೊಂದಿದ್ದು, ಸಾರಿಗೆ ಸಂಪರ್ಕ ಉತ್ತಮವಾಗಿದೆ.












Click it and Unblock the Notifications