Jog Falls: ಪ್ರವಾಸ ಹೋಗುವ ಮುನ್ನ ತಿಳಿಯಿರಿ, ಜೋಗಕ್ಕೆ ಪ್ರವಾಸಿಗರ ಭೇಟಿ ನಿರ್ಬಂಧ
ಶಿವಮೊಗ್ಗ, ಡಿಸೆಂಬರ್ 16: ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ ಮಹತ್ವದ ಮಾಹಿತಿಯೊಂದಿದೆ. 2025ನೇ ವರ್ಷದ ಮೊದಲ ದಿನದಿಂದಲೇ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿಗಳು ಈ ಕುರಿತು ಆದೇಶವನ್ನು ಹೊರಡಿಸಿದ್ದು, ಪ್ರವಾಸಿಗರು ಜಿಲ್ಲಾಡಳಿತದ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಜೋಗ ಜಲಪಾತದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಸಲುವಾಗಿ ಸುಮಾರು ಎರಡೂವರೆ ತಿಂಗಳ ಕಾಲ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.

ಪ್ರವಾಸಿಗರಿಗೆ ನಿರ್ಬಂಧ: ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಜನವರಿ 1 ರಿಂದ ಮಾರ್ಚ್ 15ರ ತನಕ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿ ನಡೆಯುವ ಕಾರಣ ಈ ಸಂದರ್ಭದಲ್ಲಿ ಪ್ರವಾಸಿಗರಿಗೆ ತೊಂದರೆ ಉಂಟಾಗಬಾರದು ಎಂದು ಭೇಟಿಗೆ ನಿರ್ಬಂಧ ಹಾಕಲಾಗಿದೆ.
ಜೋಗ ಮುಖ್ಯದ್ವಾರ ಮತ್ತು ಇತರ ಮೂಲ ಸೌಕರ್ಯವನ್ನು ಕಲ್ಪಿಸುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಪ್ರವಾಸಿಗರು ಆಗಮಿಸಿದರೆ ಅವರಿಗೆ ಅಡಚಣೆ ಉಂಟಾಗಲಿದೆ. ಆದ್ದರಿಂದ ಭೇಟಿಗೆ ನಿರ್ಬಂಧ ಹೇರಲಾಗಿದೆ. ಹೆಚ್ಚಿನ ಮಾಹಿತಿಗೆ 08182-251444 ಸಂಖ್ಯೆಗೆ ಕರೆ ಮಾಡಬಹುದು.
ಸುಮಾರು 185 ಕೋಟಿ ರೂ.ಗಳಲ್ಲಿ ಜೋಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸರ್ವ ಋತು ಜೋಗ ಎಂಬ ಪರಿಕಲ್ಪನೆಯಲ್ಲಿ ವಿವಿಧ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಎಲ್ಲಾ ಕೋನಗಳಿಂದ ಜಲಪಾತ ವೀಕ್ಷಣೆ ಮಾಡಲು ಅನುಕೂಲವಾಗುವಂತೆ ಡಕ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, "ಜೋಗ ಜಲಪಾತವನ್ನು ಸುಂದರ ಪ್ರವಾಸಿತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. 185 ಕೋಟಿ ಯೋಜನೆಯ ಕಾಮಗಾರಿ ಚಾಲನೆಯಲ್ಲಿದ್ದು ಸರ್ಕಾರದಿಂದ 30 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು" ಎಂದು ಹೇಳಿದ್ದರು. .
"ಜೋಗದ ವೀಕ್ಷಣೆ ಆಗಮಿಸುವ ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಜೊತೆ ಮನರಂಜನೆಯನ್ನು ಒದಗಿಸಲು ಹೈದರಾಬಾದ್‌ನ ರಾಮೋಜಿ ಸಿಟಿ ಹಾಗೂ ಬಾಂಬೆ ಅಧ್ಯಯನ ಪ್ರವಾಸ ನಡೆಸಲಾಗುವುದು" ಎಂದು ಶಾಸಕರು ತಿಳಿಸಿದ್ದರು.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮಾತನಾಡಿ, "ಜೋಗ ಜಲಪಾತದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈಗಾಗಲೇ 120 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಿದ್ದು, ಎಲ್ಲಾ ಮೂಲಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಇದನ್ನು ಅಂತಾರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ರೂಪಿಸಬೇಕಾಗಿದೆ" ಎಂದು ಹೇಳಿದ್ದರು.
"ಜೋಗದಲ್ಲಿ ಪ್ರವಾಸಿಗರು ಕನಿಷ್ಠ ಒಂದು ಇಡೀ ರಜಾದಿನ ಆಸ್ವಾದಿಸಲು ಅವಕಾಶ ಕಲ್ಪಿಸಬೇಕಾಗಿದೆ. ಈಗಿರುವ ಸೌಲಭ್ಯಗಳನ್ನು ಉತ್ತಮಪಡಿಸುವ ಜತೆಗೆ ಇನ್ನಷ್ಟು ಹೊಸ ಮೂಲಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಮಾತ್ರವಲ್ಲದೆ ಕೆಪಿಟಿಸಿಎಲ್ ಪಾತ್ರವೂ ಬಹಳ ಮುಖ್ಯವಾಗಿದೆ" ಎಂದು ತಿಳಿಸಿದ್ದರು.
ಜೋಗ ಅಭಿವೃದ್ಧಿ ನಿಟ್ಟಿನಲ್ಲಿ ಸಭೆಗಳನ್ನು ಮಾಡಲಾಗಿದೆ. ತಜ್ಞರ ಸಲಹೆಗಳನ್ನು ಪಡೆಯಲಾಗಿದೆ. ಇಲ್ಲಿನ 22 ಎಕರೆ ಪ್ರದೇಶದಲ್ಲಿ ವೀಕ್ಷಣಾ ಗೋಪುರ, ಕಾರಂಜಿಗಳ ನಿರ್ಮಾಣ, ವಿಶ್ರಾಂತಿ ಗೃಹಗಳು, ಉದ್ಯಾನವನ, ವಿದ್ಯುದಾಗಾರಕ್ಕೆ ಪ್ರವಾಸಿಗರಿಗೆ ವೀಕ್ಷಣಾ ಅವಕಾಶ, ಮಳೆಗಾಲ ಹೊರತುಪಡಿಸಿ ಪ್ರತಿ ಶನಿವಾರ ಮತ್ತು ಭಾನುವಾರ ಜಲಪಾತಕ್ಕೆ ನೀರು ಹರಿಸುವ ಪ್ರಸ್ತಾವನೆಗಳಿಗೆ ಅಂತಿಮ ಚಿತ್ರಣವನ್ನು ಇನ್ನೂ ನೀಡಬೇಕಾಗಿದೆ.
ಜೋಗದ ಅಭಿವೃದ್ಧಿಗೆ ಕೆಪಿಟಿಸಿಲ್ ಸಹ ಸಹಕಾರ ನೀಡುತ್ತಿದೆ. ಜೋಗದಲ್ಲಿ ಕೆಪಿಟಿಸಿಎಲ್‍ಗೆ ಸೇರಿದ ಹಲವು ಆಸ್ತಿಗಳಿವೆ. ಪ್ರವಾಸೋದ್ಯಮಕ್ಕೆ ಪೂರಕವಾಗಿ ಪವರ್ ಸ್ಟೇಷನ್, ಆಸ್ಪತ್ರೆ ಇತ್ಯಾದಿ ಕಟ್ಟಡಗಳನ್ನು ಬಳಸಿಕೊಳ್ಳಬಹುದಾಗಿದ್ದು, ಕೆಪಿಟಿಸಿಎಲ್ ಎಲ್ಲಾ ಸಹಕಾರ ನೀಡಲಿದೆ.












Click it and Unblock the Notifications