ಸಾಗರ ಬಳಿ ಬಸ್ ಪಲ್ಟಿ:ಮೂವರು ಸಾವು,20 ಜನರಿಗೆ ಗಂಭೀರ ಗಾಯ
ಸಾಗರ, ಏಪ್ರಿಲ್ 18: ಸಾಗರದಿಂದ ಬೆಂಗಳೂರಿಗೆ ಹೊರಟಿದ್ದ ಕೆ.ಎ 01. ಎಎ 2045 ಸಂಖ್ಯೆಯ 'ಸೀ ಬರ್ಡ್' ಎಂಬ ಖಾಸಗಿ ಬಸ್ ಸಾಗರ ತಾಲೂಕಿನ ಉಳ್ಳೂರು ಬಳಿ ನಿನ್ನೆ ತಡ ರಾತ್ರಿ ಪಲ್ಟಿ ಹೊಡೆದಿದೆ. ಬಸ್ ಪಲ್ಟಿಯಾದ ಪರಿಣಾಮ 20 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ಮೂವರು ಮೃತಪಟ್ಟಿದ್ದಾರೆ.
ಕೀರ್ತನಾ(12), ಸುಜಾತ (40 ವರ್ಷ), ಮಹಮದ್ ಯಾಸಿನ್ (16) ಮೃತಪಟ್ಟ ದುರ್ದೈವಿಗಳು. ಗಾಯಾಳುಗಳನ್ನು ಸಾಗರ ಉಪವಿಭಾಗೀಯ ಆಸ್ಪತ್ರೆ ಹಾಗೂ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೆರವಿಗೆ ಧಾವಿಸಿದ ಸೋಶಿಯಲ್ ಮೂಮೆಂಟ್
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಾಗರದ ಕರ್ನಾಟಕ ಸೋಶಿಯಲ್ ಮೂಮೆಂಟ್ ಸಂಘಟನೆ ಬಸ್ಸಿನೊಳಗೆ ಸಿಕ್ಕಿ ಹಾಕಿಕೊಂಡ ಎಲ್ಲರನ್ನು ಹೊರಗೆ ತರುವಲ್ಲಿ ಯಶಸ್ವಿಯಾಗಿದ್ದು, ಗಾಯಾಳುಗಳನ್ನು ಆಂಬುಲೆನ್ಸ್ ನಲ್ಲಿ ಸಾಗಿಸಲು ನೆರವಾದರು.

ಬಸ್ಸು ಪಲ್ಟಿಯಾಗಿದ್ದರಿಂದ ಮುಖ್ಯ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಜೆಸಿಬಿ, ಕ್ರೇನ್ ಮೂಲಕ ಬಸ್ಸನ್ನು ನಿಲ್ಲಿಸಿ, ರಸ್ತೆಯಿಂದ ಬದಿಗೆ ಸರಿಸಿ ಸಂಚಾರ ಮುಕ್ತಗೊಳಿಸಿದರು. ಬಸ್ಸಿನೊಳಗಿದ್ದ ಬೆಲೆಬಾಳುವ ಬಂಗಾರದ ಆಭರಣದ ಬ್ಯಾಗ್ ಗಳನ್ನು ಪೋಲಿಸರ ಸಮ್ಮುಖದಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಜಮಾಯಿಸಿದ್ದರು. ಬೆರಳಣಿಕೆಯಷ್ಟು ಜನರು ಮಾತ್ರ ಸಂಘಟನೆಯೊಂದಿಗೆ ಕೈ ಜೋಡಿಸಿದರು.ಸಂಘಟನೆ ಕಾರ್ಯವನ್ನು ಹತ್ತಿರದಿಂದ ಗಮನಿಸಿದ ಸಾಗರದ ಎ.ಎಸ್.ಪಿ ಯತೀಶ್ ಮೆಚ್ಚುಗೆ ವ್ಯಕ್ತಪಡಿಸಿ, ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ಸಂಘದ ಫಯಾಜ್, ಸಮೀರ್, ಸಫ್ವಾನ್, ತೌಸಿಫ್ ಪ್ರಮುಖವಾಗಿ ರಕ್ಷಣಾ ಕಾರ್ಯದಲ್ಲಿದ್ದರು.












Click it and Unblock the Notifications