Bhadra Dam: ಭದ್ರಾ ಡ್ಯಾಂ ನೀರಿನ ಸೋರಿಕೆಗೆ ತಡೆ, ನಿಟ್ಟುಸಿರು ಬಿಟ್ಟ ರೈತರು
ಶಿವಮೊಗ್ಗ, ಜುಲೈ 07: ನೈಋತ್ಯ ಮುಂಗಾರು ಮಳೆ ಅವಧಿಯಲ್ಲಿ ಶಿವಮೊಗ್ಗದ ಭದ್ರಾ ಡ್ಯಾಂನಲ್ಲಿ ನೀರಿನ ಸೋರಿಕೆ ಅಧಿಕಾರಿಗಳು, ರೈತರ ಆತಂಕಕ್ಕೆ ಕಾರಣವಾಗಿತ್ತು. ಈಗ ತಾಂತ್ರಿಕ ತೊಂದರೆ ಸರಿಪಡಿಸಲಾಗಿದ್ದು, ನೀರಿನ ಸೋರಿಕೆ ನಿಂತಿದೆ. ಜಲಾಶಯದ ಗರಿಷ್ಟ ಮಟ್ಟ 186 ಅಡಿ, ಇಂದಿನ ನೀರಿನ ಮಟ್ಟ 131.10 ಅಡಿಗಳು.
ಕಳೆದ 6 ದಿನಗಳಿಂದ ಮಳೆಗಾಲದಲ್ಲಿ ಭದ್ರಾ ಡ್ಯಾಂನಿಂದ ನೀರು ಸೋರಿಕೆಯಾಗಿ ಪೋಲಾಗುತ್ತಿತ್ತು. ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಸ್ಲೂಯಿಸ್ (ರಿವರ್) ಗೇಟ್‌ನಿಂದ ನೀರು ನದಿಗೆ ಸೇರುತ್ತಿತ್ತು. ಈಗ ಇಂಜಿನಿಯರ್‌ಗಳ ತಂಡ, ಡ್ಯಾಂನ ತಾಂತ್ರಿಕ ಸಿಬ್ಬಂದಿ ತಾಂತ್ರಿಕ ದೋಷ ಸರಿಪಡಿಸಿದ್ದಾರೆ.

ರಿವರ್ ಗೇಟ್‌ನಿಂದ ಪೋಲಾಗುತ್ತಿದ್ದ ನೀರಿನ ಸೋರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಕಳೆದ ಆರು ದಿನಗಳಿಂದ ನೂರಾರು ಕ್ಯೂಸೆಕ್ ನೀರು ಸೋರಿಕೆಯಾಗಿ, ಭದ್ರಾ ಜಲಾಶಯದಿಂದ ನದಿಗೆ ಸೇರಿದೆ. ಮಳೆಗಾಲದಲ್ಲಿ ರಿವರ್ ಗೇಟ್ ರಿಪೇರಿ ಮಾಡುವಾಗ ಆಗಿದ್ದ ಎಡವಟ್ಟು ಕಾರಣ ನೀರು ಸೋರಿಕೆಯಾಗುತ್ತಿತ್ತು.
ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಭದ್ರಾ ಡ್ಯಾಂ ಅಚ್ಚುಕಟ್ಟು ಭಾಗದ ರೈತರು ಆತಂಕಗೊಂಡಿದ್ದರು. ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಧಿಕಾರಿಗಳ ಉಸ್ತುವಾರಿಯಲ್ಲಿ 48 ಗಂಟೆಗಳ ಕಾಲ ಕಾರ್ಯಾಚರಣೆ ನಂತರ ಪೋಲಾಗುತ್ತಿದ್ದ ನೀರು ಬಂದ್ ಮಾಡಲಾಗಿದೆ.
ಗುತ್ತಿಗೆದಾರ ವೇದಮೂರ್ತಿ, ಅನುಭವಿ ತಾಂತ್ರಿಕ ತಂಡದಿಂದ ರಿವರ್ ಗೇಟ್ ಬಂದ್ ಮಾಡಲಾಗಿದೆ. ನೀರಿನ ಸೋರಿಕೆ ನಿಂತ ಬಳಿಕ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ನೀರು ಸೋರಿಕೆ ಮುಂದುವರೆದಿದ್ದರೆ ಅಧಿಕಾರಿಗಳನ್ನು ಅಮಾನತುಗೊಳಿಸುವ ಎಚ್ಚರಿಕೆಯನ್ನು ನೀಡಲಾಗಿತ್ತು.
ಆತಂಕಗೊಂಡಿದ್ದ ಅಧಿಕಾರಿಗಳು: ಕಳೆದ ಬಾರಿಯ ಮಳೆ ಕೊರತೆ, ಈ ಬಾರಿ ಬಿರು ಬೇಸಿಗೆಯ ಪರಿಣಾಮ ಭದ್ರಾ ಡ್ಯಾಂ ನೀರಿನ ಮಟ್ಟ ಕುಸಿತಗೊಂಡಿತ್ತು. ಇಂತಹ ಸಮಯದಲ್ಲಿ ಡ್ಯಾಂನಿಂದ ನೀರಿನ ಸೋರಿಕೆ ಕಂಡು ಅಧಿಕಾರಿಗಳು, ರೈತರು ಆತಂಕಗೊಂಡಿದ್ದರು.
ನೀರು ಪೋಲಾಗುತ್ತಿದ್ದರೂ ಸಹ ತಾಂತ್ರಿಕ ದೋಷ ಸರಿಪಡಿಸಲು ಅಧಿಕಾರಿಗಳು ಪ್ರಯತ್ನಿಸುತ್ತಲೇ ಇದ್ದರು. ತಾಂತ್ರಿಕ ಅನುಭವ ಇಲ್ಲದ ಕಂಪನಿಗೆ ಗೇಟ್ ಕೂರಿಸುವ ಗುತ್ತಿಗೆ ನೀಡಿದ್ದರಿಂದ ನೀರು ಪೋಲಾಗುತ್ತಿದೆ, ತಾಂತ್ರಿಕ ದೋಷ ಸರಿಯಾಗುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದರು.
ಡ್ಯಾಂ ಗೇಟ್ ನಿರ್ವಹಣೆಯನ್ನು ಗುತ್ತಿಗೆದಾರರು ಬೇಸಿಗೆಯಲ್ಲಿ ನಿರ್ವಹಿಸಬೇಕಿತ್ತು. ಆದರೆ ಮಳೆಗಾಲದಲ್ಲಿ ಈ ಕೆಲಸವನ್ನು ಕೈಗೊಂಡಿದ್ದಕ್ಕೆ ಡ್ಯಾಂನ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರೈತರು ದೂರಿದ್ದರು. ಎರಡು ಮೂರು ವರ್ಷದಿಂದ ಭರ್ತಿಯಾಗದ ಭದ್ರಾ ಡ್ಯಾಂನಲ್ಲಿರುವ ನೀರು ಸಹ ವ್ಯರ್ಥವಾಗಿ ನದಿ ಸೇರುತ್ತಿತ್ತು.
ಈ ಬಾರಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಮಾತ್ರ ಭದ್ರಾ ಡ್ಯಾಂ ನೀರು ಬಳಕೆ ಮಾಡಬೇಕು ಎಂದು ಕಾಯ್ದಿರಿಸಲಾಗಿತ್ತು. ಡ್ಯಾಂನ ಸ್ಲೋಯಿಸ್ ಗೇಟ್ ಅನ್ನು ತುರ್ತು ಸಂದರ್ಭದಲ್ಲಿ ಮಾತ್ರ ತೆರೆಯಬೇಕಾಗಿತ್ತು. ಆದರೆ ನಿರ್ವಹಣೆ ನೆಪದಲ್ಲಿ ಗೇಟ್ ತೆಗೆದಿದ್ದರಿಂದ ತಾಂತ್ರಿಕ ದೋಷ ಉಂಟಾಗಿ, ನೀರು ಪೋಲಾಗಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಬಿಆರ್‌ಪಿಯಲ್ಲಿ ಭದ್ರಾ ಜಲಾಶಯವಿದೆ.
ಸದ್ಯ ಜಲಾಶಯಕ್ಕೆ ಒಳ ಹರಿವು 8,689 ಕ್ಯೂಸೆಕ್. ಹೊರ ಹರಿವು 553 ಕ್ಯೂಸೆಕ್ ಆಗಿದೆ. ಡ್ಯಾಂ ಒಟ್ಟು ಸಂಗ್ರಹ ಸಾಮರ್ಥ್ಯ 71.5 ಟಿಎಂಸಿ ಅಡಿ, ಇಂದಿನ ನೀರಿನ ಮಟ್ಟ 21.691 ಟಿಎಂಸಿ ಅಡಿಗಳು.












Click it and Unblock the Notifications