ಬಿಜೆಪಿ ಎಂಎಲ್‌ಸಿ ಹೆಸರಲ್ಲಿ ವಿಷದ ಸ್ವೀಟ್ ಬಾಕ್ಸ್ ಕಳಿಸಿದ್ದವ ಅರೆಸ್ಟ್, ಕಾರಣ ಕೇಳಿ ಎಲ್ಲರೂ ಶಾಕ್
ಬಿಜೆಪಿ ವಿಧಾನ ಪರಿಷತ್ ಸದಸ್ಯ ಧನಂಜಯ್ ಸರ್ಜಿ ಅವರ ಹೆಸರಿನಲ್ಲಿ ಕಿಡಿಗೇಡಿಗಳು ವಿಷಪೂರಿತ ಸ್ವೀಟ್ ಬಾಕ್ಸ್‌ಗಳನ್ನು ಕೊರಿಯರ್ ಮೂಲಕ ಕಳಿಸಿಕೊಟ್ಟಿದ್ದ ವಿಚಾರ ಬೆಳಕಿಗೆ ಬಂದಿತ್ತು. ಸದ್ಯ ಈ ಕೃತ್ಯ ಎಸಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಷಪೂರಿತ ಸ್ವೀಟ್‌ಗಳನ್ನು ಕಳಿಸಿದ ಕಾರಣ ಕೇಳಿ ಬೆಚ್ಚಿಬಿದ್ದಿದ್ದಾರೆ.
ಹೊಸ ವರ್ಷದ ಅಂಗವಾಗಿ ಶಿವಮೊಗ್ಗದ ಮೂವರು ಗಣ್ಯ ವ್ಯಕ್ತಿಗಳಿಗೆ ಕೊರಿಯರ್‌ನಲ್ಲಿ ಸ್ವೀಟ್ ಬಾಕ್ಸ್ ಬಂದಿತ್ತು. ವೈದ್ಯರಿಗೂ ಸಹ ಈ ಪಾರ್ಸೆಲ್ ಬಂದಿತ್ತು. ಇದನ್ನು ಬಿಜೆಪಿ ಎಂಎಲ್‌ಸಿ ಡಾ.ಧನಂಜಯ್ ಸರ್ಜಿ ಅವರ ಹೆಸರಿನಲ್ಲಿ ಕಳಿಸಲಾಗಿತ್ತು. ಆದರೆ ಇದನ್ನು ತಿಂದವರೊಬ್ಬರಿಗೆ ಕಹಿಯಾದ ಅನುಭವವಾಗಿ, ವಿಷ ಬೆರೆಸಿರುವ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ಕೊನೆಗೆ ಆರೋಪಿಯನ್ನು ಬಂಧಿಸಿದ್ದಾರೆ.

ಪಾಗಲ್ ಪ್ರೇಮಿಯೊಬ್ಬ ಈ ದುಷ್ಕೃತ್ಯ ಎಸಗಿರುವುದು ಪೊಲೀಸರಿಗೆ ತಿಳಿದಿದೆ. ಭದ್ರಾವತಿ ಮೂಲದ ಸೌಹಾರ್ದ ಪಟೇಲ್ ಎಂಬಾತ ಈ ಕೃತ್ಯ ಮಾಡಿದ್ದಾನೆ ಎನ್ನಲಾಗಿದೆ. ಈ ಹಿಂದೆ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ಈತ ವೈದ್ಯೆಯೊಬ್ಬರ ಪುತ್ರಿಯನ್ನು ಲವ್ ಮಾಡುತ್ತಿದ್ದ. ಆದರೆ ಇದು ಸಕ್ಸಸ್ ಆಗಿರಲಿಲ್ಲ. ಈ ವಿಚಾರ ಗೊತ್ತಾಗಿ ಆತನಿಗೆ ಕಾಲೇಜಿನವರು ಕ್ಲಾಸ್ ಕೂಡ ತೆಗೆದುಕೊಂಡು ಬುದ್ಧಿ ಹೇಳಿದ್ದರು. ಇದರಿಂದಾಗಿ ಪಟೇಲ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ.
ಕೊನೆಗೆ ಸೇಡು ತೀರಿಸಿಕೊಳ್ಳಬೇಕು ಎನ್ನುವ ಉದ್ದೇಶದೊಂದಿಗೆ ಸೌಹಾರ್ದ ಪಟೇಲ್ ಇಂತಹ ಕೆಲಸ ಮಾಡಿದ್ದಾನೆ ಎಂದು ತಿಳಿದುಬಂದಿದೆ. ತನಗೆ ಬುದ್ಧಿ ಹೇಳಿದವರು ಹಾಗೂ ವೈದ್ಯರಿಗೆ ಈ ರೀತಿ ವಿಷಪೂರಿತ ಸ್ವೀಟ್ ಬಾಕ್ಸ್‌ಗಳನ್ನು ಕೊರಿಯರ್‌ನಲ್ಲಿ ಕಳುಹಿಸಿದ್ದ. ಲಡ್ಡುಗಳಿಗೆ ಮಾತ್ರೆ ಹಾಗೂ ಬೇವಿನ ರಸ ಸೇರಿ ಇನ್ನಿತರೆ ಮಿಶ್ರಣ ಬೆರೆಸಿದ್ದ. ಬಳಿಕ ಆ ಲಡ್ಡುಗಳನ್ನು ಬಾಕ್ಸ್‌ನಲ್ಲಿ ತುಂಬಿ ಈ ಮೂವರ ವಿಳಾಸಕ್ಕೆ ಕೊರಿಯರ್ ಮೂಲಕ ಕಳಿಸಿಕೊಟ್ಟಿದ್ದ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ತನ್ನ ಲವ್ ಬ್ರೇಕ್‌ಅಪ್‌ಗೆ ಕಾರಣವಾದವರ ಮೇಲೆ ಈತ ಈ ರೀತಿ ಸೇಡು ತೀರಿಸಿಕೊಂಡಿದ್ದಾನೆ ಎನ್ನಲಾಗಿದೆ. ಅಚ್ಚರಿ ವಿಚಾರವೆಂದರೆ ಮನೋರೋಗದಿಂದ ಬಳಲುತ್ತಿದ್ದ ಈತನಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೂ ಕೂಡ ವಿಷದ ಸ್ವೀಟ್ ಬಾಕ್ಸ್ ಕಳಿಸಿಕೊಟ್ಟಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ವೈದ್ಯರು ಈತನಿಗೆ ಪ್ರತಿದಿನ ಹೆಚ್ಚು ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಪೀಡಿಸುತ್ತಿದ್ದರು. ಕೊನೆಗೆ ತನಗೆ ಕೋಪವಿದ್ದ ಮೂವರು ಕೂಡ ಎಂಎಲ್‌ಸಿ ಡಾ.ಧನಂಜಯ್ ಸರ್ಜಿ ಅವರಿಗೆ ಪರಿಚಿತರು ಎಂದು ಪತ್ತೆ ಹಚ್ಚಿ ಈ ಕೃತ್ಯ ಮಾಡಿದ್ದಾನೆ ಎಂಬುದು ಗೊತ್ತಾಗಿದೆ.

ಈ ಪಾಗಲ್ ಪ್ರೇಮಿಯು ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದು ಸ್ವೀಟ್ ಬಾಕ್ಸ್‌ಗಳನ್ನು ಕೊರಿಯರ್ ಮಾಡಿದ್ದಾನೆ. ಬಳಿಕ ದೂರದ ಭದ್ರಾ ನದಿಗೆ ಬಟ್ಟೆ ಬಿಸಾಡಿ ಹೋಗಿದ್ದ. ಕೊರಿಯರ್ ಸ್ಥಳದ ಅಕ್ಕಪಕ್ಕದ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಪಾಗಲ್ ಪ್ರೇಮಿ ಸಿಕ್ಕಿಬಿದ್ದಿದ್ದಾನೆ. ಕೊನೆಗೆ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.












Click it and Unblock the Notifications