ಶಿವಮೊಗ್ಗ: ಆಸ್ತಿಕೊಳ್ಳುವ ಜನರಿಗೆ ಮಹತ್ವದ ಮಾಹಿತಿ
ಶಿವಮೊಗ್ಗ, ಜನವರಿ 13: ಶಿವಮೊಗ್ಗ ನಗರದಲ್ಲಿ ಆಸ್ತಿ ಮಾಡಬೇಕು, ಸೈಟು ಕೊಳ್ಳಬೇಕು, ಹೂಡಿಕೆ ಮಾಡಬೇಕು ಎಂದು ಹಲವಾರು ಜನರು ಯೋಜನೆ ರೂಪಿಸುತ್ತಾರೆ. ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ಸಹ ನಗರದ ಹೊರ ಭಾಗದಲ್ಲಿ ನಿವೇಶನಗಳನ್ನು ಜನರಿಗೆ ಹಂಚಿಕೆ ಮಾಡುತ್ತದೆ. ಆದರೆ ನಗರದಲ್ಲಿ ಆಸ್ತಿ ಕೊಳ್ಳುವ ಜನರಿಗೆ ಸೂಡಾ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ನಿವೇಶನದ ಹೆಸರಿನಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದಿರುವಂತೆ ಸೂಡಾ ಎಚ್ಚರಿಕೆಯನ್ನು ನೀಡಿದೆ. ಕೆಲವು ವ್ಯಕ್ತಿಗಳು ಸೂಡಾ ನಿವೇಶನ ಮಂಜೂರು ಮಾಡಿಕೊಡುವುದಾಗಿ ಹಣದ ಬೇಡಿಕೆ ಇಡುತ್ತಿದ್ದು ಇಂತಹ ಯಾವುದೇ ಆಮಿಷಕ್ಕೆ ಸಾರ್ವಜನಿಕರು ಒಳಗಾಗದೇ ಇರುವಂತೆ ಸೂಡಾ ತಿಳಿಸಿದೆ.

ವಂಚನೆ ಮಾಡುವ ಪ್ರಕರಣ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದಿಂದ ಊರಗಡೂರು ವಸತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಕುರಿತು ಪ್ರಕಟಣೆ ಹೊರಡಿಸಿ 2024ರ ಡಿಸೆಂಬರ್ 5ರ ತನಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.
ಅರ್ಜಿ ಸಲ್ಲಿಸುವ ಅವಧಿ ಈಗಾಗಲೇ ಮುಗಿದಿರುತ್ತದೆ. ನಿವೇಶನ ಹಂಚಿಕೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪ್ರಾಧಿಕಾರದಿಂದ ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ ನಿವೇಶನ ಹಂಚಿಕೆ ನಿಯಮದಂತೆ ಪರಿಶೀಲಿಸಲು ಕ್ರಮ ಕೈಗೊಳ್ಳಲಾಗಿದೆ.
ಆದರೆ ಕೆಲವು ವ್ಯಕ್ತಿಗಳು ಸಾರ್ವಜನಿಕರಿಗೆ ನಿವೇಶನಗಳನ್ನು ಮಂಜೂರಾತಿ ಮಾಡಿಕೊಡುವುದಾಗಿ ಹಣದ ಬೇಡಿಕೆ ಇಡುತ್ತಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿರುತ್ತದೆ ಎಂದು ಸೂಡಾ ಹೇಳಿದೆ.
ಇಂತಹ ಹಣ/ ಯಾವುದೇ ಆಮಿಷಗಳಿಗೆ ಒಳಗಾಗದೇ ಇರಲು ಪ್ರಾಧಿಕಾರ ತಿಳಿಸಿದೆ. ಒಂದು ವೇಳೆ ಇಂತಹ ಯಾವುದೇ ಆಮಿಷಗಳಿಗೆ ತಾವು ಒಳಗಾದಲ್ಲಿ ಈ ಪ್ರಾಧಿಕಾರವು ಜವಾಬ್ದಾರಿಯಾಗಿರುವುದಿಲ್ಲವೆಂದು ಸೂಡಾ ಅಧ್ಯಕ್ಷರಾದ ಹೆಚ್. ಎಸ್. ಸುಂದರೇಶ್ ಮತ್ತು ಆಯುಕ್ತರಾದ ವಿಶ್ವನಾಥ ಮುದಜ್ಜಿ ತಿಳಿಸಿದ್ದಾರೆ.
ಹೊಸ ಬಡಾವಣೆ ನಿರ್ಮಾಣ: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ನೂತನ ಬಡಾವಣೆಯೊಂದನ್ನು ನಿರ್ಮಾಣ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಶಿವಮೊಗ್ಗ ತಾಲೂಕು ಸೋಗಾನೆ ಗ್ರಾಮದಲ್ಲಿ ಹೊಸ ಬಡಾವಣೆ ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ ರೈತರ ಜೊತೆ ಈಗಾಗಲೇ ಮಾತುಕತೆ ನಡೆಸಲಾಗುತ್ತಿದೆ.
ಸೋಗಾನೆ ಗ್ರಾಮದ ಸರ್ವೆ ನಂಬರ್ 156ರ ಪ್ರದೇಶದಲ್ಲಿ ಸೂಡಾ ಲೇಔಟ್ ನಿರ್ಮಿಸಲಾಗುತ್ತಿದೆ. ಹೊಸ ಬಡಾವಣೆ ನಿರ್ಮಾಣಕ್ಕೆ ಜಾಗ ಒದಗಿಸಲು ಜಿಲ್ಲಾಧಿಕಾರಿಗಳು ಮತ್ತು ಎಸಿ ಯವರಿಗೆ ಪತ್ರೆ ಬರೆದು 200 ಎಕರೆ ಜಾಗ ಮಂಜೂರು ಮಾಡುವಂತೆ ಸೂಡ ಮನವಿ ಮಾಡಿತ್ತು. ಅದರೆಂತೆ ನಿವೇಶನ ನಿರ್ಮಿಸಲು ಸರ್ವೇ ನಂಬರ್ 156ರ 96 ಎಕರೆ ಜಾಗ ಮಂಜೂರಾಗಿದೆ. ಈಗಾಗಲೇ ಅಲ್ಲಿ 600 ಎಕರೆ ಕೆಐಎಡಿಬಿ ವಶದಲ್ಲಿದೆ.
ಹೊಸ ಲೇಔಟ್ ನಿರ್ಮಾಣ ಮಾಡಿದರೆ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ರೈತರು ಮನವಿ ಮಾಡಿದ್ದಾರೆ. ಕೆಲವು ಭೂಮಿಯಲ್ಲಿ ರೈತರು ಸಾಗುವಳಿ ಮಾಡುತ್ತಿದ್ದಾರೆ, ಬಗರ್ ಹುಕುಂ ಅಡಿಯಲ್ಲಿ ಎಷ್ಟು ಜನ ರೈತರು ಅರ್ಜಿ ಸಲ್ಲಿಸಿದ್ದಾರೆ ಎಂಬ ನಿಖರ ಮಾಹಿತಿಯೊಂದಿಗೆ ಸಭೆ ನಡೆಸಬೇಕು, ಅರ್ಹರಿಗೆ ಹಕ್ಕುಪತ್ರವನ್ನು ನೀಡಬೇಕು ಎಂದು ಸಭೆಯಲ್ಲಿ ಸೂಡಾ ತೀರ್ಮಾನಿಸಿದೆ.












Click it and Unblock the Notifications