ಶಿವಮೊಗ್ಗ: ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಸಂಘ ಪರಿವಾರದ ವಿಶೇಷ ಪೂಜೆ
ಶಿವಮೊಗ್ಗ, ಆಗಸ್ಟ್ 05: ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ಹಾಕುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಿವಮೊಗ್ಗದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಭಜರಂಗದಳ, ಆರ್.ಎಸ್.ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ಭರ್ಜರಿ ಹೋಮ-ಹವನ ನಡೆಸಿದವು.
ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೊದಲು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್ ಬಾಬು ಹಾಗೂ ಪತ್ನಿ ಶ್ರೀರಾಮ ಮತ್ತು ಆಂಜನೇಯ ಸ್ವಾಮಿಗೆ ಪ್ರದಕ್ಷಿಣೆ ಹಾಕಿ ಪೂಜೆ ನಡೆಸಿದರು. ನಂತರ ಪೂರ್ಣಾಹುತಿ ಹೋಮಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಭೇಟಿ ನೀಡಿರುವುದು ವಿಶೇಷವಾಗಿತ್ತು. ಸಚಿವ ಈಶ್ವರಪ್ಪ ಹಾಗೂ ಅವರ ಕುಟುಂಬ ಪೂರ್ಣಾಹುತಿಯಲ್ಲಿ ಭಾಗಿಯಾದರು. ಈ ವೇಳೆ ಜೈ ಶ್ರೀರಾಮ್, ಜೈ ಜೈ ಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತ್ತು.

ನಂತರ ಆರ್.ಎಸ್.ಎಸ್ ನಿಂದ ಲಯಬದ್ಧವಾದ ಬ್ಯಾಂಡ್ ಬಾರಿಸಿದ್ದು ಸಹ ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು. ಸಂಘ ಪರಿವಾರದ ಅನೇಕ ಕಾರ್ಯಕರ್ತರು ಕೇಸರಿ ಪೇಟ ಧರಿಸಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ ಸಂಘ ಪರಿವಾರದವರ ಬಲಿದಾನ ಹಾಗೂ ಹೋರಾಟದ ಫಲದಿಂದ ಇಂದು ಈ ಸುವರ್ಣ ಸಂದರ್ಭ ಒದಗಿ ಬಂದಿದೆ. ಅನೇಕ ವರ್ಷಗಳ ಹಿಂದೂಗಳ ಕನಸು ಇಂದು ನನಸಾಗುತ್ತಿದೆ. ಈ ಸಂದರ್ಭ ಖುಷಿ ನೀಡುತ್ತಿದೆ ಎಂದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇಂದು ಚಾಲನೆ ನೀಡುವ ಹಿನ್ನೆಲೆಯಲ್ಲಿ ಇಂದು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಧರ್ಮ ಸಭೆಯಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಮಾತನಾಡಿ, ಕಾಶಿ ವಿಶ್ವನಾಥ ದೇವಾಲಯ ಹಾಗೂ ಮಥುರಾ ಶ್ರೀಕೃಷ್ಣ ದೇವಾಲಯವನ್ನು ಕಟ್ಟುವ ಬಗ್ಗೆ ಮಾತನಾಡಿದರು.

ನಮ್ಮ ಬಹುದಿನದ ಕನಸು ಇಂದು ನನಸಾಗುತ್ತಿದೆ. ಅಯೋಧ್ಯೆಯಲ್ಲಿ ಇಂದು ಶ್ರೀರಾಮನ ಮಂದಿರದ ಕಾಮಗಾರಿಗೆ ಚಾಲನೆ ದೊರೆಯುತ್ತಿರುವ ಸುವರ್ಣ ಕ್ಷಣಕ್ಕೆ ಸಮಸ್ತ ಹಿಂದೂಗಳ ಹೋರಾಟ ಬಲಿದಾನವಿದೆ.

ಅಯೋಧ್ಯೆಯ ರೀತಿಯಲ್ಲಿಯೇ ಕಾಶಿ ಮತ್ತು ಮಥುರಾದಲ್ಲಿರುವ ಮಸೀದಿಗಳನ್ನು ಕೂಡ ಧ್ವಂಸ ಮಾಡಬೇಕಿದೆ. ಅಲ್ಲಿ ದೇವರ ದರ್ಶನಕ್ಕೆ ತೆರಳಿದರೆ, ನಾವು ಗುಲಾಮರಂತೆ ಭಾಸವಾಗುತ್ತದೆ. ಅಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಲು ಆಗದ ಪರಿಸ್ಥಿತಿ ಇದೆ. ಅಲ್ಲಿರುವ ಮಸೀದಿಗಳು ನಮ್ಮನ್ನು ಗುಲಾಮರು ಎಂಬಂತೆ ಬಿಂಬಿಸುತ್ತವೆ ಎಂದು ತಿಳಿಸಿದರು.












Click it and Unblock the Notifications