ಜೋಗದಲ್ಲಿ ಟೆಕ್ಕಿ ಕುಟುಂಬದ ಆತ್ಮಹತ್ಯೆ ಯತ್ನ
ಶಿವಮೊಗ್ಗ, ಅ, 29 : ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ತನ್ನ ತಂದೆ, ತಾಯಿಯೊಂದಿಗೆ ಜೋಗದ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ತಂದೆ ಸಾವನ್ನಪ್ಪಿದ್ದು, ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಸಾಫ್ಟ್‌ವೇರ್ ಇಂಜಿನಿಯರ್ ನಾಪತ್ತೆಯಾಗಿದ್ದು, ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ.
ಬೆಂಗಳೂರಿನ ಕೋರಮಂಗಲದ ನಿವಾಸಿಗಳಾದ ನಾಗ ನಂದನ್ ತಮ್ಮ ತಂದೆ ಕಸ್ತೂರಿ ರಂಗನ್ (72), ತಾಯಿ ರಮಾ ಜೊತೆ ಸೋಮವಾರ ರಾತ್ರಿ ಜೋಗ ಸಮೀಪದ ವರದಶ್ರೀ ಲಾಡ್ಜ್ ನಲ್ಲಿ ತಂಗಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಕಸ್ತೂರಿ ರಂಗನ್ ಸಾವನ್ನಪ್ಪಿದ್ದು, ರಮಾ ಅವರು ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆದರೆ, ನಾಗ ನಂದನ್ ಸ್ಥಳದಿಂದ ನಾಪತ್ತೆಯಾಗಿದ್ದಾರೆ.

ಲಾಡ್ಜ್ ಕೆಲಸಗಾರರು ಪ್ರಜ್ಞಾ ಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ ರಮಾ ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ನಾಗ ನಂದನ್ ಎಲ್ಲಿ ಎಂಬ ಪ್ರಶ್ನೆಗೆ ಉತ್ತರ ದೊರಕಿಲ್ಲ. ಇದೊಂದು ಆತ್ಮಹತ್ಯೆ ಪ್ರಯತ್ನ ಎಂದು ಪ್ರಾಥಮಿಕ ತನಿಖೆಯಿಂದ ಪೊಲೀಸರು ತಿಳಿಸಿದ್ದಾರೆ.
ಸಾಲದ ಹೊರೆ ತಂದ ಸಾವು : ನಾಗ ನಂದನ್ ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕೆಲವು ದಿನಗಳ ಹಿಂದೆ ಅವರು ಕೆಲಸ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದರು. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಬೆಂಗಳೂರಿನಿಂದ ಸಾಗರಕ್ಕೆ ಆಗಮಿಸಿದ್ದರು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮಾ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೋಮವಾರ ಮಧ್ಯರಾತ್ರಿ ವೇಳೆಗೆ ತಂದೆ ಕಸ್ತೂರಿ ರಂಗನ್ ಅವರನ್ನು ನಾಗ ನಂದನ್ ಉಸಿರುಗಟ್ಟಿಸಿ ಕೊಂದು ಹಾಕಿದ್ದಾರೆ. ನಂತರ ಚಾಕುವಿನಿಂದ ತಾಯಿಯ ಕುತ್ತಿಗೆ ಕೊಯ್ದು ಸಾಯಿಸಲು ಪ್ರಯತ್ನಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ತಾಯಿಯನ್ನು ಕಂಡು ಸಾವನ್ನಪ್ಪಿರಬಹುದೆಂದು ಶಂಕಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ನಾಗ ನಂದನ್ ಸಹ ಆತ್ಮಹತ್ಯೆ ಮಾಡಿಕೊಂಡರೆ ಅಥವ ಸ್ಥಳದಿಂದ ಪರಾರಿಯಾದರೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದುವರೆಗೂ ಅವರು ಪತ್ತೆಯಾಗಿಲ್ಲ.
ನಾಗ ನಂದನ್ ಒಂದು ವರ್ಷದ ಹಿಂದೆ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದರು. ಎಂಬಿಎ ಓದಿದ್ದ ಅವರ ಪತ್ನಿ ಉನ್ನತ ವ್ಯಾಸಂಗ ಮಾಡಲು ಇಚ್ಛಿಸಿದ್ದರು. ಇದಕ್ಕಾಗಿ ನಾಗ ನಂದನ್ ಲಕ್ಷಾಂತರ ರೂ. ಸಾಲ ಮಾಡಿದ್ದರು. ಆದರೆ, ಕೆಲಸ ಕಳೆದುಕೊಂಡಿದ್ದರಿಂದ ಸಾಲ ತೀರಿಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದರು ಎಂದು ತಿಳಿದು ಬಂದಿದೆ. ಆದರೆ, ನಾಗನಂದ್ ಪತ್ನಿ ಸಾಗರಕ್ಕೆ ಆಗಮಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಲದ ಸುಳಿಗೆ ಸಿಲುಕಿದ್ದ ಕುಟುಂಬ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿತ್ತು ಸಾಗರಕ್ಕೆ ಆಗಮಿಸಿತ್ತು ಎಂದು ತಿಳಿದು ಬಂದಿದೆ. ನಾಗ ನಂದನ್ ತಂದೆ ಕಸ್ತೂರಿ ರಂಗನ್ ಬೆಮಲ್ ಕಂಪನಿ ನಿವೃತ್ತ ಉದ್ಯೋಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ನಾಗನಂದನ್ ಗಾಗಿ ಸಾಗರ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.












Click it and Unblock the Notifications