ಕುವೆಂಪು ವಿವಿ ಘಟಿಕೋತ್ಸವ: ಮಾರ್ಕ್ಸ್ ಕಾರ್ಡ್ ಇಲ್ಲದೆ ಕಂಗಾಲಾದ ವಿದ್ಯಾರ್ಥಿಗಳು ನಿಟ್ಟುಸಿರು
ಶಿವಮೊಗ್ಗ, ಜೂ 11: ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಎರಡು ಶೈಕ್ಷಣಿಕ ವರ್ಷದ ಘಟಿಕೋತ್ಸವಗಳನ್ನು ಒಂದೇ ದಿನ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮುಖ್ಯ ಅತಿಥಿಯಾಗಿ ಕರೆಯಿಸಬೇಕು ಎಂದು ಬಿಗಿಪಟ್ಟು ಹಿಡಿದಿದ್ದ ವಿವಿ ಆಡಳಿತಕ್ಕೆ ನಿರಾಸೆ ಉಂಟಾಗಿದೆ.
ಶಂಕರ ಘಟ್ಟದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್'ನಲ್ಲಿ ಎರಡು ವರ್ಷದ ಘಟಿಕೋತ್ಸವ ನಡೆಸಲಾಗುತ್ತಿದೆ. ಜೂನ್ 16ರಂದು ಘಟಿಕೋತ್ಸವ ನಿಗದಿಯಾಗಿದೆ. ಇದರ ಅಧಿಕೃತ ಪ್ರಕಟಣೆ ಬಾಕಿ ಇದೆ. ಎರಡು ವರ್ಷದ ಘಟಿ ಕೋತ್ಸವ ಕಳೆದ ಎರಡು ವರ್ಷ ಕುವೆಂಪು ವಿವಿಯಲ್ಲಿ ಘಟಿಕೋತ್ಸವ ನಡೆದಿರಲಿಲ್ಲ. ಹಾಗಾಗಿ 31 ಮತ್ತು 32ನೇ ಘಟಿಕೋತ್ಸವವನ್ನು ಒಟ್ಟಿಗೆ ಆಯೋಜಿಸಲಾಗಿದೆ. ಕುವೆಂಪು ವಿವಿಯ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಎರಡು ಘಟಿಕೋತ್ಸವಗಳನ್ನು ಒಟ್ಟಿಗೆ ಮಾಡಲಾಗುತ್ತಿದೆ.
ಕೊರೊನಾ, ಲಾಕ್‌ಡೌನ್, ಬಳಿಕ ಕೇಂದ್ರ ಸಚಿವರಿಂದ ನಿಗದಿಯಾಗದ ದಿನಾಂಕ ಹೀಗೆ ನಾನಾ ಸಬೂಬುಗಳನ್ನು ಹೇಳಿ ಎರಡು ವರ್ಷದಿಂದ ಘಟಿಕೋತ್ಸವವನ್ನು ಮುಂದೂಡುತ್ತಲೇ ಇತ್ತು. ಈ ಮಧ್ಯೆ ಘಟಿಕೋತ್ಸವ ವಿಳಂಬ ಆದಷ್ಟೂ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕುತ್ತಲೇ ಇದ್ದರು. ಅಧಿಕೃತ ಪ್ರಮಾಣ ಪತ್ರಗಳು ಸಿಗದೆ ಉದ್ಯೋಗ ಅರಸಿ ಮುಂದೆ ಹೋಗಬೇಕಾಗಿದ್ದ ವಿದ್ಯಾರ್ಥಿಗಳು ಇವರು ಯಾವಾಗಪ್ಪಾ ಘಟಿಕೋತ್ಸವ ಮಾಡುತ್ತಾರೆ ಎಂದು ಕಾದು ಕುಳಿತಿದ್ದರು.

ಎರಡು ಘಟಿಕೋತ್ಸವ ಒಟ್ಟಿಗೆ
ಕಾರಣ 1 - ಕೋವಿಡ್ ಆತಂಕದಿಂದ ಘಟಿಕೋತ್ಸವ ಮುಂದೂಡಲಾಗಿತ್ತು. ಹೆಚ್ಚು ಜನರನ್ನು ಒಂದೆಡೆ ಸೇರಿಸದಂತೆ ಸರ್ಕಾರ ಗೈಡ್ ಲೈನ್ ಹೊರಡಿಸಿತ್ತು. ಈ ಹಿನ್ನೆಲೆ ಘಟಿಕೋತ್ಸವ ಆಯೋಜಿಸಿರಲಿಲ್ಲ. ಕಾರಣ 2 - ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದಲೆ ಘಟಿಕೋತ್ಸವ ಉದ್ಘಾಟನೆ ಮಾಡಿಸಬೇಕು ಎಂದು ವಿವಿಯ ಆಡಳಿತ ಬಿಗಿ ಪಟ್ಟು ಹಿಡಿದಿತ್ತು. 2021ರ ಅಕ್ಟೋಬರ್ ತಿಂಗಳಲ್ಲಿ ಘಟಿಕೋತ್ಸವ ನಿಗದಿಯಾಗಿತ್ತು. ಸಚಿವರು ಸಮಯ ಕೊಡದ ಹಿನ್ನೆಲೆ ಹಲವು ಭಾರಿ ಮುಂದೂಡಲಾಗಿತ್ತು.

ನಿಟ್ಟುಸಿರು ಬಿಟ್ಟ ವಿದ್ಯಾರ್ಥಿಗಳು
ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಘಟಿಕೋತ್ಸವದ ಉದ್ಘಾಟನೆಗೆ ಕರೆಯಿಸಲು ನಿರ್ಧರಿಸಲಾಗಿತ್ತು. ಅವರಿಗೆ ಆಹ್ವಾನವನ್ನೂ ನೀಡಲಾಗಿತ್ತು. ನಿರ್ಮಲಾ ಸೀತಾರಾಮನ್ ಅವರು ಸಮಯ ನೀಡದ ಕಾರಣ ಹಲವು ಭಾರಿ ಘಟಿಕೋತ್ಸವವನ್ನು ಮುಂದೂಡಲಾಯಿತು. ಆದರೆ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಅವರು ವಿವಿ ಆಡಳಿತದ ಆಸೆಗೆ ತಣ್ಣೀರು ಎರಚಿದ್ದಾರೆ. ಅನಿವಾರ್ಯವಾಗಿ ಘಟಿಕೋತ್ಸವ ನಡೆಸಬೇಕಾಗಿದೆ.

25 ಸಾವಿರ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು
ಕುವೆಂಪು ವಿವಿ ಘಟಿಕೋತ್ಸವ ಆಯೋಜಿಸುತ್ತಿರುವುದು ವಿಚಾರ ತಿಳಿದು ವಿದ್ಯಾರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಘಟಿಕೋತ್ಸವ ನಡೆಯದೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿಲ್ಲ. ಪದವಿ ಮುಗಿದು ಉದ್ಯೋಗಕ್ಕೆ ತೆರಳುವ ಅಭ್ಯರ್ಥಿಗಳಿಗೆ ಅಂಕ ಪಟ್ಟಿ ಮತ್ತು ಪ್ರಮಾಣ ಪತ್ರ ಮುಖ್ಯವಾಗುತ್ತದೆ. ಸರ್ಕಾರಿ ಉದ್ಯೋಗಕ್ಕೆ ಪ್ರಮಾಣ ಪತ್ರ ಅತ್ಯಗತ್ಯ. ಹಲವು ಖಾಸಗಿ ಕಂಪನಿಗಳು ಕೂಡ ಪ್ರಮಾಣ ಪತ್ರ ಕಡ್ಡಾಯಗೊಳಿಸಿವೆ. ಆದರೆ ಘಟಿಕೋತ್ಸವ ವಿಳಂಬದಿಂದ ಸುಮಾರು 25 ಸಾವಿರ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು.

ಹೇಗಿರುತ್ತೆ ಈ ಭಾರಿ ಘಟಿಕೋತ್ಸವ?
ಎರಡು ಘಟಿಕೋತ್ಸವವನ್ನು ಒಟ್ಟಿಗೆ ಆಯೋಜನೆ ಮಾಡಲಾಗಿದೆ. ಗಣ್ಯರನ್ನು ಆಹ್ವಾನಿಸಲಾಗಿದೆ. ಈಗಾಗಲೇ ಗೌರವ ಡಾಕ್ಟರೇಟ್ ನೀಡುವವರ ಹೆಸರುಗಳು ಅಂತಿಮವಾಗಿದೆ.ರ್‍ಯಾಂಕ್ ಪಡೆದ ವಿದ್ಯಾರ್ಥಿಗಳು, ಪಿ.ಹೆಚ್.ಡಿ ಪಡೆಯಲಿರುವ ಸಂಶೋಧನಾರ್ಥಿಗಳಿಗೆ ಈಗಾಗಲೆ ಮಾಹಿತಿ ರವಾನಿಸಲಾಗಿದೆ. ಎರಡು ಘಟಿಕೋತ್ಸವವನ್ನ ಒಟ್ಟಿಗೆ ಆಯೋಜನೆ ಮಾಡಿ, ಪದವಿ ಪ್ರಧಾನ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.












Click it and Unblock the Notifications