ಮೂರು ವಲಯವಾಗಿ ವಿಂಗಡನೆಯಾದ ಶಿವಮೊಗ್ಗ ಮಹಾನಗರ ಪಾಲಿಕೆ
ಶಿವಮೊಗ್ಗ, ಮಾರ್ಚ್ 18: ಜನಸ್ನೇಹಿ ಆಡಳಿತಕ್ಕಾಗಿ ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ಮೂರು ವಲಯವಾಗಿ ವಿಭಾಗ ಮಾಡಲಾಗಿದೆ. ಮೂರು ವಲಯಗಳಿಗೆ ಪ್ರತ್ಯೇಕ ಕಛೇರಿಯನ್ನು ಸ್ಥಾಪನೆ ಮಾಡಲಾಗಿದೆ. ಆದ್ದರಿಂದ ಇನ್ನು ಮುಂದೆ ಜನರ ಪಾಲಿಕೆಯ ಕೆಲಸಗಳಿಗಾಗಿ ತಮ್ಮ ವಯಲದ ಕಛೇರಿಗೆ ಭೇಟಿ ನೀಡಬಹುದು. ಪ್ರತಿಯೊಂದು ಕೆಲಸಕ್ಕೂ ಶಿವಮೊಗ್ಗ ಮಹಾನಗರ ಪಾಲಿಕೆಯ ಮುಖ್ಯ ಕಛೇರಿಗೆ ಹೋಗುವುದು ತಪ್ಪಲಿದ್ದು ಹಣ, ಸಮಯ ಉಳಿತಾಯವಾಗಿದೆ.
ಮಾರ್ಚ್ 17ರಿಂದಲೇ ಜಾರಿಗೆ ಬರುವಂತೆ ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ಕೇಂದ್ರ, ಉತ್ತರ ಮತ್ತು ದಕ್ಷಿಣ ವಲಯ ಎಂದು ಮೂರು ವಲಯ ಮಾಡಲಾಗಿದೆ. ಪ್ರತಿ ವಲಯಕ್ಕೆ ಸಹ ಪ್ರತ್ಯೇಕ ಕಛೇರಿಯನ್ನು ಸ್ಥಾಪನೆ ಮಾಡಲಾಗಿದೆ. ಇಷ್ಟು ದಿನ ಶಿವಮೊಗ್ಗ ಮಹಾನಗರ ಪಾಲಿಕೆ ಒಂದೇ ಕಛೇರಿಯನ್ನು ಹೊಂದಿದ್ದು, ಕೇಂದ್ರ ಕಛೇರಿಯಲ್ಲಿಯೇ ಎಲ್ಲಾ ಕೆಲಸಗಳು ನಡೆಯುತ್ತಿದ್ದವು.

ಮೂರು ಕಛೇರಿಗಳ ಸ್ಥಾಪನೆ: 2013ರಲ್ಲಿ ಕರ್ನಾಟಕ ಸರ್ಕಾರ ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ಘೋಷಣೆ ಮಾಡಿತು. ಈಗ ಮೊದಲ ಬಾರಿಗೆ ಮಹಾನಗರ ಪಾಲಿಕೆಯನ್ನು ವಲಯಗಳಾಗಿ ವಿಂಗಡನೆ ಮಾಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾದರಿಯಲ್ಲಿ ಮಹಾನಗರ ಪಾಲಿಕೆಯನ್ನು ವಲಯವಾಗಿ ವಿಂಗಡನೆ ಮಾಡಿಕೊಂಡು ಆಡಳಿತ ನಡೆಸಲಾಗುತ್ತದೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ಉತ್ತರ ವಲಯದ ಕಛೇರಿಯನ್ನು ವಿನೋಬ ನಗರದ ಶುಭಮಂಗಳ ಕಲ್ಯಾಣ ಮಂದಿರದ ಪಾಲಿಕೆ ಕಟ್ಟಡದ ಬಳಿ ತೆರೆಯಲಾಗಿದೆ. ಸುತ್ತಮುತ್ತಲಿನ ಜನರು ಕೇಂದ್ರ ಕಛೇರಿಗೆ ಹೋಗುವ ಬದಲು ವಲಯ ಕಛೇರಿಗೆ ಭೇಟಿ ನೀಡಬಹುದು.
ಗೋಪಿ ವೃತ್ತದ ಬಳಿಯ ದೇವರಾಜ ಅರಸು ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಕೇಂದ್ರ ವಲಯದ ಕಛೇರಿಯನ್ನು ತೆರೆಯಲಾಗಿದೆ.
ಶಿವಮೊಗ್ಗ ಮಹಾನಗರ ಪಾಲಿಕೆಯ ದಕ್ಷಿಣ ವಲಯದ ಕಛೇರಿಯನ್ನು ಇಮಾಮ್ ಬಾಡಾ ಬಳಿಯ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿಗೊಳಿಸಲಾದ ಕಟ್ಟಡದಲ್ಲಿ ತೆರೆಯಲಾಗಿದೆ. ಜನರು ಈ ಕಛೇರಿಗಳಿಗೆ ಭೇಟಿ ನೀಡಬಹುದು.
ಶಿವಮೊಗ್ಗ ಮಹಾನಗರ ಪಾಲಿಕೆ ಕೇಂದ್ರ ಕಛೇರಿಯಾಗಿ ಮಾತ್ರ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಕಾರಣ ಅಧಿಕಾರಿಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿತ್ತು. ಅಲ್ಲದೇ ಜನರು ಸಹ ತಮ್ಮ ಕೆಲಸಗಳಿಗೆ ದೂರ ಪ್ರದೇಶಗಳಿಂದ ಮುಖ್ಯ ಕಛೇರಿಗೆ ಬರಬೇಕಿತ್ತು.
ಆದ್ದರಿಂದ ಶಿವಮೊಗ್ಗ ಮಹಾನಗರ ಪಾಲಿಕೆಯನ್ನು ವಲಯವಾಗಿ ವಿಂಗಡನೆ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಈಗ ಮೂರು ವಿಭಾಗವಾಗಿ ಮಾಡಿ, ವಲಯ ಕಛೇರಿಗಳನ್ನು ತೆರೆಯಲಾಗಿದೆ.
ಈ ಕುರಿತು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಕವಿತಾ ಯೋಗಪ್ಪನವರ್ ಮಾತನಾಡಿದ್ದು, "ಶಿವಮೊಗ್ಗ ಮಹಾನಗರ ಪಾಲಿಕೆ ಕಛೇರಿಯನ್ನು ಮೂರು ವಲಯವಾಗಿ ವಿಭಾಗ ಮಾಡಲಾಗಿದೆ. ವಲಯವಾಗಿ ವಿಭಾಗ ಮಾಡಿರುವುದರಿಂದ ಜನರ ಅಲೆದಾಟ ತಪ್ಪಲಿದೆ" ಎಂದು ಹೇಳಿದ್ದಾರೆ.
ಕರ್ನಾಟಕ ಸರ್ಕಾರ 2013ರಲ್ಲಿ ಶಿವಮೊಗ್ಗ, ವಿಜಯಪುರ ಮತ್ತು ತುಮಕೂರು ನಗರಸಭೆಯನ್ನು ಮಹಾನಗರ ಪಾಲಿಕೆಗಳಾಗಿ ಘೋಷಣೆ ಮಾಡಿತು. ಬಳಿಕ ಶಿವಮೊಗ್ಗ ಮಹಾನಗರ ಪಾಲಿಕೆ ಕೇಂದ್ರ ಕಛೇರಿಯಲ್ಲಿಯೇ ಎಲ್ಲಾ ಕೆಲಸಗಳು ನಡೆಯುತ್ತಿದ್ದವು. ಪಾಲಿಕೆಯನ್ನು ವಲಯವಾಗಿ ವಿಭಾಗ ಮಾಡಬೇಕು ಎಂದು ಬೇಡಿಕೆ ಇಡಲಾಗಿತ್ತು. ಅದು ಈಗ ಜಾರಿಗೆ ಬಂದಿದೆ.












Click it and Unblock the Notifications