ಮಂಡಗದ್ದೆ ಬಳಿಯ ಚಂದ್ರಶೇಖರ ಗುರೂಜಿ ಹೆಂಡತಿ ಮನೆಯಲ್ಲಿ ನೀರವ ಮೌನ
ಶಿವಮೊಗ್ಗ, ಜು5: ಸರಳ ವಾಸ್ತು ಚಂದ್ರಶೇಖರ ಗುರೂಜಿ ಅವರ ಹತ್ಯೆ ವಿಚಾರ ತಿಳಿದು, ಮಂಡಗದ್ದೆ ಸಮೀಪ ಇರುವ ಅವರ ಹೆಂಡತಿ ಮನೆಯಲ್ಲಿ ನೀರವ ಮೌನ ಆವರಿಸಿದೆ. ಒಂದು ತಿಂಗಳ ಹಿಂದೆಯಷ್ಟೆ ಪತ್ನಿಯೊಂದಿಗೆ ಚಂದ್ರಶೇಖರ ಗುರೂಜಿ ಅವರು ಇಲ್ಲಿಗೆ ಬಂದಿದ್ದರು.
ಚಂದ್ರಶೇಖರ ಗುರೂಜಿ ಅವರ ಪತ್ನಿ ಅಂಕಿತಾ ಅವರು, ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಸಮೀಪದ ಹೆಮ್ಮಕ್ಕಿ ಗ್ರಾಮದವರು. ಮೂರು ವರ್ಷದ ಹಿಂದೆ ಚಂದ್ರಶೇಖರ ಗುರೂಜಿ ಅವರು ಹೆಮ್ಮಕ್ಕಿ ಅಂಕಿತಾ ಅವರನ್ನ ವಿವಾಹವಾಗಿದ್ದರು.
ಕಳೆದ ತಿಂಗಳು ಬಂದಿದ್ದರು
ಚಂದ್ರಶೇಖರ ಗುರೂಜಿ ಅವರು ಕಳೆದ ತಿಂಗಳು ಪತ್ನಿ ಅಂಕಿತಾ ಮನೆಗೆ ಬಂದಿದ್ದರು. ಪತ್ನಿಯೊಂದಿಗೆ ಇಲ್ಲಿಯೆ ನಾಲ್ಕಾರು ದಿನ ಉಳಿದಿದ್ದರು ಎಂದು ಅಂಕಿತಾ ಅವರ ಅಜ್ಜಿ ಸಾವಿತ್ರಮ್ಮ ತಿಳಿಸಿದ್ದಾರೆ.

ಚಂದ್ರಶೇಖರ ಗುರೂಜಿ ಅವರು ಪತ್ನಿ ಅಂಕಿತಾ ಅವರೊಂದಿಗೆ ಮುಂಬೈನಲ್ಲಿ ನೆಲೆಸಿದ್ದರು. ಹೆಮ್ಮಕ್ಕಿಗೆ ಬಂದಾಗ ಚಂದ್ರಶೇಖರ ಗುರೂಜಿ ಅವರು ಎಲ್ಲರೊಂದಿಗೆ ಬೆರೆಯುತ್ತಿದ್ದರು. ಪ್ರೀತಿ, ಸ್ನೇಹದಿಂದ ಎಲ್ಲರನ್ನು ಮಾತನಾಡಿಸುತ್ತಿದ್ದರು ಎಂದು ಸಾವಿತ್ರಮ್ಮ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮನೆಯಲ್ಲಿ ನೀರವ ಮೌನ
ಚಂದ್ರಶೇಖರ ಗುರೂಜಿ ಅವರ ಹತ್ಯೆಯಾದ ವಿಚಾರ ತಿಳಿಯುತ್ತಿದ್ದಂತೆ ಹೆಮ್ಮಕ್ಕಿಯಲ್ಲಿದ್ದ ಅಂಕಿತಾ ಅವರ ತಂದೆ ರಮೇಶ್ ಮತ್ತು ತಾಯಿ ಶೈಲಾ ಅವರು ಹುಬ್ಬಳಿಗೆ ತೆರಳಿದ್ದಾರೆ. ಅಂಕಿತಾ ಅವರ ಮನೆಯಲ್ಲಿ ನೀರವ ಮೌನ ಆವರಿಸಿದೆ. ಹೆಮ್ಮಕ್ಕಿ ಗ್ರಾಮದಲ್ಲಿ ಗುರೂಜಿಯೊಂದಿಗೆ ಸ್ನೇಹದಿಂದ ಬೆರೆತವರು ಈಗ ಅವರನ್ನು ನೆನೆದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications