ಶಿವಮೊಗ್ಗ ಬೈಪಾಸ್‌ನ ನೂತನ ಸೇತುವೆ ಲೋಕಾರ್ಪಣೆ
ಶಿವಮೊಗ್ಗ, ಡಿಸೆಂಬರ್ 18; ಶಿವಮೊಗ್ಗ ನಗರದ ಬೈಪಾಸ್ ರಸ್ತೆಯಲ್ಲಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ನೂತನ ಸೇತುವೆ ಲೋಕಾರ್ಪಣೆಯಾಗಿದೆ. ಈ ರಸ್ತೆಯಲ್ಲಿದ್ದ ಹಳೆಯ ಸೇತುವೆ ಪಕ್ಕದಲ್ಲಿಯೇ ಮತ್ತೊಂದು ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ.
ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಬೈಪಾಸ್ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ನೂತನ ಸೇತುವೆ ಉದ್ಘಾಟಿಸಿದರು. ಶಿವಮೊಗ್ಗ ನಗರ ಶಾಸಕ ಎಸ್. ಎನ್. ಚನ್ನಬಸಪ್ಪ ಮುಂತಾದವರು ಉಪಸ್ಥಿತರಿದ್ದರು.

ಈ ಸೇತುವೆಯನ್ನು ಸುಮಾರು 20.12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಬೈಪಾಸ್ ರಸ್ತೆಯಲ್ಲಿ ಈಗ ತುಂಗಾ ನದಿಗೆ ಎರಡು ಸೇತುವೆಗಳಿವೆ. ಹಳೆಯ ಸೇತುವೆ ಪಕ್ಕದಲ್ಲಿಯೇ ನಡೆಯುತ್ತಿದ್ದ ಹೊಸ ಸೇತುವೆ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಂಡಿದೆ.
ವಾಹನ ಸಂಚಾರ ಆರಂಭ; ಬೈಪಾಸ್ ರಸ್ತೆಯಲ್ಲಿ ಹೊಸ ಸೇತುವೆ ಉದ್ಘಾಟನೆಯಾದ ಬಳಿಕ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬೈಪಾಸ್ ರಸ್ತೆಯಲ್ಲಿನ ವಾಹನ ಸಂಚಾರ ದಟ್ಟಣೆಯ ಕಾರಣ ಹೊಸ ಸೇತುವೆ ವಾಹನ ಸವಾರರಿಗೆ ಅನುಕೂಲವಾಗಲಿದೆ.
ನಗರದ ಹೊಳೆ ಬಸ್ ಸ್ಟಾಪ್ ಸಮೀಪವೂ ಸಹ ತುಂಗಾ ನದಿಗೆ ಅಡ್ಡವಾಗಿ ಎರಡು ಸೇತುವೆ ಇದೆ. ಅಲ್ಲದೇ ಅಲ್ಲಿ ರೈಲ್ವೆ ಸೇತುವೆಯೂ ಇದೆ. ಬೈಪಾಸ್ ರಸ್ತೆಯ ಹೊಸ ಸೇತುವೆ ಎನ್. ಟಿ. ರಸ್ತೆಯಿಂದ ಸಹ್ಯಾದ್ರಿ ಕಾಲೇಜು ಹಿಂಭಾಗದ ಮೂಲಕ ನೇರವಾಗಿ ಎಂಆರ್‌ಎಸ್ ಸರ್ಕಲ್‌ಗೆ ಸಂಪರ್ಕ ಕಲ್ಪಿಸುತ್ತದೆ.
ಸೇತುವೆ ಉದ್ಘಾಟನೆ ಮಾಡಿ ಮಾತನಾಡಿದ ಬಿ. ವೈ. ರಾಘವೇಂದ್ರ, "ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಈ ಭಾಗಕ್ಕೆ ಸೇತುವೆಯ ಅಗತ್ಯವಿತ್ತು. ಹಿಂದೆ ಒಂದು ಸರ್ಕಾರ ಬಂದಾಗ ಶಂಕುಸ್ಥಾಪನೆ ಮಾಡಿದರೆ ಮತ್ತೊಂದು ಸರ್ಕಾರ ಬಂದಾಗ ಉದ್ಘಾಟನೆಯಾಗುತ್ತಿತ್ತು. ಈಗ ಗುತ್ತಿಗೆದಾರರು ಬೇಗ ಕಾಮಗಾರಿ ಮುಗಿಸಿದರೆ ಬೋನಸ್ ಸಿಗುತ್ತದೆ. ಆದ್ದರಿಂದ ಕಾಮಗಾರಿಗೆ ವೇಗ ಸಿಕ್ಕಿದೆ" ಎಂದರು.
ಶಿವಮೊಗ್ಗ ನಗರ ಶಾಸಕ ಎಸ್. ಎನ್. ಚನ್ನಬಸಪ್ಪ ಮಾತನಾಡಿ, "ಯಡಿಯೂರಪ್ಪ ಮತ್ತು ರಾಘವೇಂದ್ರ ಅವರು ಶಿವಮೊಗ್ಗ ನಗರದ ಜನರು ಕಂಡ ಅಭಿವೃದ್ಧಿಯ ಕನಸು ನನಸು ಮಾಡಿದ್ದಾರೆ. ಬಹುವರ್ಷದಿಂದ ಇಲ್ಲಿಗೆ ಸೇತುವೆಯ ಬೇಡಿಕೆ ಇತ್ತು. ಅದನ್ನು ಸಂಸದರು ಈಡೇರಿಸಿದ್ದಾರೆ" ಎಂದು ಹೇಳಿದರು.
ವಿಶಾಲವಾದ ರಸ್ತೆ, ವಾಕಿಂಗ್ ಪಥವನ್ನು ಸಹ ನೂತನ ಸೇತುವೆ ಒಳಗೊಂಡಿದೆ. ಸೇತುವೆ ಉದ್ಘಾಟನೆ ಬಳಿಕ ರಾಘವೇಂದ್ರ ಮತ್ತು ಇತರರು ಸೇತುವೆ ಮೇಲೆ ಸಂಚಾರ ನಡೆಸಿ ಎಲ್ಲಾ ಕಾಮಗಾರಿಗಳ ಮಾಹಿತಿಯನ್ನು ಪಡೆದರು. ಬಳಿಕ ವಾಹನ ಸಂಚಾರವೂ ಆರಂಭವಾಗಿದೆ.
ಸಿಗಂದೂರು ಸೇತುವೆಯ ಮಾಹಿತಿ; ಸಂಸದ ಬಿ. ವೈ. ರಾಘವೇಂದ್ರ ಸಾಗರದ ಸಿಗಂದೂರು ಸೇತುವೆಯ ಬಗ್ಗೆಯೂ ಮಾತನಾಡಿದರು. "ಇದೇ ತಿಂಗಳು ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಶರಾವತಿ ಹಿನ್ನೀರು ಪ್ರದೇಶದಲ್ಲಿ ನೀರಿನ ಪ್ರಮಾಣ ಹೆಚ್ಚು ಕಡಿಮೆಯಾಗುವ ಕಾರಣಕ್ಕೆ ಕಾಮವಾರಿ ವಿಳಂಬವಾಗಿದೆ. ಕಾಮಗಾರಿ ಇನ್ನೂ ಒಂದು ವರ್ಷ ವಿಳಂಬವಾಗಲಿದೆ" ಎಂದರು.
"ಜನವರಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಕಾಮಗಾರಿಗೆ ವೇಗ ನೀಡಲು ಏನೆಲ್ಲ ಮಾಡಲು ಸಾಧ್ಯ ಎಂಬ ಬಗ್ಗೆ ಚರ್ಚಿಸಲಾಗುತ್ತದೆ. ಈ ಸೇತುವೆ ಹಲವು ವರ್ಷಗಳ ಕನಸಾಗಿದೆ. ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುತ್ತದೆ" ಎಂದು ಹೇಳಿದರು.












Click it and Unblock the Notifications