ಶಿವಮೊಗ್ಗ ಉಪ ಚುನಾವಣೆ : ಜಾತಿ ಲೆಕ್ಕಾಚಾರದಲ್ಲಿ ನಾಯಕರು
ಶಿವಮೊಗ್ಗ, ಅಕ್ಟೋಬರ್ 31 : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಎರಡು ದಿನಗಳು ಬಾಕಿ ಇವೆ. ಶಿವಮೊಗ್ಗದಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಿವೆ. ನವೆಂಬರ್ 3ರಂದು ಮತದಾನ ನಡೆಯಲಿದೆ.
ಮೂವರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಶಿವಮೊಗ್ಗ ಲೋಕಸಭಾ ಉಪ ಚುನಾವಣೆ ಕಣದಲ್ಲಿದ್ದಾರೆ. ಆದ್ದರಿಂದ, ಕದನ ಕುತೂಹಲ ಮೂಡಿಸಿದೆ. ಆದರೆ, ಬಿ.ವೈ.ರಾಘವೇಂದ್ರ ಮತ್ತು ಮಧು ಬಂಗಾರಪ್ಪ ನಡುವೆ ಪ್ರಬಲ ಪೈಪೋಟಿ ಇದೆ.
ಶಿವಮೊಗ್ಗ ಸಂಸದರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದ್ದರಿಂದ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಉಪ ಚುನಾವಣೆ ಎದುರಾಗಿದೆ.
ಚುನಾವಣಾ ಪ್ರಚಾರದ ತುಂಬಾ ಎಸ್.ಬಂಗಾರಪ್ಪ ಅವರ ಹೆಸರು ಕೇಳಿ ಬಂದಿತ್ತು. ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರವೂ ಪ್ರಮುಖವಾಗಿದೆ. ನವೆಂಬರ್ 6ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ....

ಸಂಪ್ರದಾಯಿಕ ಎದುರಾಳಿಗಳು
ಶಿವಮೊಗ್ಗ ಲೋಕಸಭೆ ಚುನಾವಣೆ ಎಂದರೆ ಯಡಿಯೂರಪ್ಪ ಮತ್ತು ಬಂಗಾರಪ್ಪ ಕುಟುಂಬದ ನಡುವಿನ ಸ್ಪರ್ಧೆ. ಈ ಬಾರಿಯ ಉಪ ಚುನಾವಣೆಯಲ್ಲಿಯೂ ಸಂಪ್ರಾಯಿಕ ಎದುರಾಳಿಗಳು ಮುಖಾಮುಖಿಯಾಗಿದ್ದಾರೆ. ಹಿಂದಿನ ಚುನಾವಣೆಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಜಾತಿ ಲೆಕ್ಕಾಚಾರ ಜೋರಾಗಿದೆ. ಮಧು ಬಂಗಾರಪ್ಪ ಅವರು ಅಭ್ಯರ್ಥಿ ಆಗಿರುವುದರಿಂದ ಈಡಿಗ ಸಮುದಾಯದ ಮತಗಳು ಬಿಜೆಪಿ ಕೈ ತಪ್ಪಲಿವೆಯೇ? ಕಾದು ನೋಡಬೇಕು.

ಬಿಜೆಪಿಗೆ ಶಾಸಕರ ಬಲ
ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಬಿಜೆಪಿ ನಾಯಕರು ಪಣ ತೊಟ್ಟಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರ ಸೇರಿದೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 7 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಲಿಂಗಾಯತ, ಬ್ರಾಹ್ಮಣ ಮತಗಳನ್ನು ಬಿಜೆಪಿ ನೆಚ್ಚಿಕೊಂಡಿದೆ.

ಬಂಗಾರಪ್ಪ ನಾಮಬಲ
ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರಿಗೆ ಎಸ್.ಬಂಗಾರಪ್ಪ ಅವರ ಹೆಸರೇ ನಾಮಬಲವಾಗಿದೆ. ಕಾಂಗ್ರೆಸ್ ಸಹ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಿರುವುದರಿಂದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಸೊರಬ ಶಾಸಕ ಕುಮಾರ್ ಬಂಗಾರಪ್ಪ ಅವರು ಬಂಗಾರಪ್ಪ ಅಭಿಮಾನಿಗಳ ಮತವನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

2014ರ ಚುನಾವಣೆ ಫಲಿತಾಂಶ
2014ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಡೆದ ಮತಗಳನ್ನು ಸೇರಿಸಿದರೂ 5 ಲಕ್ಷ ಆಗಿರಲಿಲ್ಲ. ಬಿ.ಎಸ್.ಯಡಿಯೂರಪ್ಪ ಅವರು ಒಬ್ಬರೇ 606216 ಮತಗಳನ್ನು ಪಡೆದಿದ್ದರು. ಆದ್ದರಿಂದ, ಎರಡೂ ಪಕ್ಷಗಳು ಸೇರಿದರೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಯಾವುದೇ ಅಡ್ಡಿ ಇಲ್ಲ ಎನ್ನುವುದು ಬಿಜೆಪಿ ನಾಯಕರ ವಾದವಾಗಿದೆ.

ಜಾತಿ ಲೆಕ್ಕಾಚಾರ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸುಮಾರು 2.70 ಲಕ್ಷ ಲಿಂಗಾಯತರು, 2.5 ಲಕ್ಷ ದಲಿತರು, 2 ಲಕ್ಷ ಈಡಿಗರು, 1.5 ಲಕ್ಷ ಬ್ರಾಹ್ಮಣರು, 1.30 ಲಕ್ಷ ಮುಸ್ಲಿಂ, 60 ಸಾವಿರ ಕುರುಬ ಮತಗಳಿವೆ.
ಬಿಜೆಪಿ ಲಿಂಗಾಯತ, ಬ್ರಾಹ್ಮಣ ಮತ್ತು ಬಂಟರ ಮತಗಳನ್ನು ನಂಬಿಕೊಂಡಿವೆ. ಈಡಿಗರು, ಮುಸ್ಲಿಂಮರು, ಒಕ್ಕಲಿಗರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬೆಂಬಲಿಸಬಹುದು ಎಂಬುದು ನಿರೀಕ್ಷೆಯಾಗಿದೆ.












Click it and Unblock the Notifications