ಶಿವಮೊಗ್ಗ: ಪಾಂಡವರು ತಂಗಿದ್ದ ಭೀಮೇಶ್ವರದಲ್ಲಿ ಶಿವರಾತ್ರಿ ಉತ್ಸವ
ಶಿವಮೊಗ್ಗ, , ಫೆ. 12: ಜಿಲ್ಲೆಯ ಸಾಗರ ತಾಲೂಕಿನ ಕಾರ್ಗಲ್ ಸಮೀಪದ ಶ್ರೀ ಕ್ಷೇತ್ರ ಭೀಮೇಶ್ವರದಲ್ಲಿ ಫೆ. 16 ರಿಂದ 20 ರವರೆಗೆ ಶಿವರಾತ್ರಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಈ ಬಗ್ಗೆ ಮಾಹಿತಿ ನೀಡಿದ ಭೀಮಲಿಂಗೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಬಣ್ಣುಮನೆ ಚಿದಂಬರರಾವ್ ಫೆ. 16 ರಂದು ಪಂಚಗವ್ಯ ಹವನ, ಶ್ರೀ ಮಹಾಹಣಪತಿ ಹವನ, ಶ್ರೀಶಕ್ತಿಪಂಚಾಕ್ಷರಿ ಜಪ, ಕಲ್ಪೋಕ್ತ ಪೂಜೆ, ಸಹಸ್ರ ನಾಮ, ಮಹಮಂಗಳಾರತಿ, ಅನ್ನಸಂತರ್ಪಣೆ ಮಡೆಯಲಿದೆ ಎಂದು ತಿಳಿಸಿದರು.[ನಾಗೇಶ್ವರ, ಕಾಶಿ ವಿಶ್ವನಾಥ ಪೌರಾಣಿಕ ಹಿನ್ನೆಲೆ]

17 ರಂದು ಶ್ರೀ ಶಕ್ತಿಪಂಚಾಕ್ಷರಿ ಜಪ, ರುದ್ರಾಭಿಷೇಕ, ಶಿವಕಲ್ಪೋಕ್ತ ಸಹಸ್ರ ನಾಮಪೂಜೆ, ಮಹಾಬಲಿ, ಪ್ರಸಾದ ವಿನಿಯೋಗ, ಸಂಜೆ ಶತರುದ್ರಾಭಿಷೇಕ, ಕಲ್ಪೋಕ್ತ ಸಹಸ್ರ ನಾಮಪೂಜೆ,ಭಜನಾ ಕಾರ್ಯಕ್ರಮಗಳು ನಡೆಯಲಿವೆ. 18 ರಂದು ಶ್ರೀಶಕ್ತಿಪಂಚಾಕ್ಷರಿ ಜಪ, ರುದ್ರಹವನ, ದೇವರ ಉತ್ಸವ, ರಂಗಪೂಜೆ, ಮಹಮಂಗಳಾರತಿ, ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
18 ರಂದು ರಾತ್ರಿ 8.30ಕ್ಕೆ ಸಾಗರದ ಸುಜಾತ ಮತ್ತು ಬಳಗ ದವರಿಂದ ಸುಗಮ ಸಂಗೀತ, ರಾತ್ರಿ 10.30ಕ್ಕೆ ಕಂಚಿಕೈ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ. 19 ರಂದು ರುದ್ರಾಭಿಷೇಕ, ಶ್ರೀಶಕ್ತಿಪಂಚಾಕ್ಷರಿ ಹವನ, ಮಹಾಮಂಗಳಾರತಿ, ಅನ್ನಸಂತರ್ಪಣೆ. 20 ರಂದು ರುದ್ರಾಭಿಷೇಕ, ರಂಗಪೂಜೆ, ಮಹಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.[ಶಿವರಾತ್ರಿ ವಿಶೇಷ : ಶ್ರೀಶೈಲ ಮಲ್ಲಿಕಾರ್ಜುನ ಮಹಾತ್ಮೆ]

ಪ್ರತಿ ವರ್ಷ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಿದ್ದು ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ದೇವಾಲಯ ಕುಸಿಯುತ್ತಿದ್ದು ಸರ್ಕಾರ ಅನುದಾನ ನೀಡಿದರೆ ದುರಸ್ತಿ ಸಾಧ್ಯ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಡಿ.ಆರ್‌ನಾರಾಯಣ್‌ಮೂರ್ತಿ, ನಿರ್ದೇಶಕ ಗಣೇಶ್‌ಭಟ್, ವಿಪ್ರಕೂಟ ಸಂಚಾಲಕ ಹು.ಬಾ ಅಶೋಕ, ರಾಮಾನಾಯ್ಕ, ಪ್ರಧಾನ ಅರ್ಚಕ ಚಂದ್ರಶೇಖರ ಭಟ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಐತಿಹಾಸಿಕ ಹಿನ್ನೆಲೆಯೇನು?
ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ಇಲ್ಲಿ ಕೆಲ ಕಾಲ ತಂಗಿದ್ದರಂತೆ. ಅದು ಮಹಾಶಿವರಾತ್ರಿಯ ಸಮಯವಾಗಿದ್ದರಿಂದ ಧರ್ಮ ರಾಯನ ಶಿವಪೂಜೆಗೆ ಅಡ್ಡಿಯಾಗದಂತೆ ಭೀಮನು ಕಾಶಿಯಿಂದ ಶಿವಲಿಂಗವನ್ನು ತರಿಸಿ, ಈ ಸ್ಥಳದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದನೆಂಬ ನಂಬಿಕೆಯಿದೆ. ಹಬ್ಬದ ಸಂದರ್ಭ ಮಂಗಗಳಿಗೂ ಪ್ರಸಾದ ವಿತರಣೆ ಮಾಡುವುದು ಇಲ್ಲಿನ ವಿಶೇಷ.












Click it and Unblock the Notifications