ಅಫ್ಘಾನಿಸ್ತಾನದಲ್ಲಿ ಸಿಲುಕಿದ್ದಾರೆ ತೀರ್ಥಹಳ್ಳಿಯ ಪಾದ್ರಿ!
ಶಿವಮೊಗ್ಗ, ಆಗಸ್ಟ್ 18; ಶಿವಮೊಗ್ಗ ಮೂಲದ ಪಾದ್ರಿಯೊಬ್ಬರು ತಾಲಿಬಾನ್ ಉಗ್ರ ಸಂಘಟನೆ ವಶದಲ್ಲಿರುವ ಅಫ್ಘಾನಿಸ್ಥಾನದಲ್ಲಿ ಸಿಕ್ಕಿಬಿದ್ದಿದ್ದಾರೆ. ರಕ್ಷಣೆಯ ನಿರೀಕ್ಷೆಯಲ್ಲಿಯಲ್ಲಿ ಅವರು ಇದ್ದು, ಕುಟುಂಬದವರು, ಕ್ರೈಸ್ತ ಸಮುದಾಯ ಈಗ ಆತಂಕದಲ್ಲಿದೆ.
ತೀರ್ಥಹಳ್ಳಿ ತಾಲೂಕಿನ ದೊಡ್ಡಮನೆ ಕೇರಿ ವಾಸಿಯಾಗಿರುವ ಫಾದರ್ ರಾಬರ್ಟ್ ಅಫ್ಘಾನಿಸ್ಥಾನದಲ್ಲಿದ್ದಾರೆ. ಧರ್ಮ ಪ್ರಚಾರದ ಉದ್ದೇಶದಿಂದ ಅವರು ಅಫ್ಘಾನಿಸ್ಥಾನದ ಬಾಮಿಯಾನ್ ಎಂಬಲ್ಲಿ ಚರ್ಚ್‌ನಲ್ಲಿದ್ದು, ಸೇವೆ ಸಲ್ಲಿಸುತ್ತಿದ್ದರು.
ಈಗ ಅಫ್ಘಾನಿಸ್ತಾನ ತಾಲಿಬಾನ್ ಉಗ್ರರ ವಶದಲ್ಲಿದೆ. ಕರ್ನಾಟಕದ ಗೃಹ ಸಚಿವ ಆರಗ ಜ್ಞಾನೇಂದ್ರ ತವರು ಕ್ಷೇತ್ರದ ಫಾದರ್ ರಾಬರ್ಟ್ ಬಾಮಿಯಾನ್ ಪ್ರಾಂತ್ಯದಲ್ಲೇ ಸಿಕ್ಕಿಬಿದ್ದಿದ್ದಾರೆ. ವಿಶ್ವಸಂಸ್ಥೆಯ ರಕ್ಷಣೆಯ ನಿರೀಕ್ಷೆಯಲ್ಲಿದ್ದಾರೆ.

ಕೇವಲ 25 ನಿಮಿಷದ ಹಾದಿ; ಫಾದರ್ ರಾಬರ್ಟ್ ಸುರಕ್ಷತೆ ಕುರಿತು ಮಂಗಳೂರು ಮೂಲದ ಫಾದರ್ ಜೆರೋಮ್ ಸಿಕ್ವೇರಾ ಭಾರತದಲ್ಲಿರುವ ತಮ್ಮ ಸಹವರ್ತಿಗಳಿಗೆ ಈ-ಮೇಲ್ ಮಾಡಿದ್ದಾರೆ. ಫಾದರ್ ಜೆರೋಮ್ ಸಿಕ್ವೇರಾ ಅಫ್ಘಾನಿಸ್ಥಾನದ ಕಾಬುಲ್‌ನಲ್ಲಿ ಧರ್ಮ ಸೇವೆಯಲ್ಲಿದ್ದಾರೆ. ತಮ್ಮ ಈ ಮೇಲ್‌ನಲ್ಲಿ ತೀರ್ಥಹಳ್ಳಿ ಮೂಲದ ಫಾದರ್ ರಾಬರ್ಟ್ ಕುರಿತು ಪ್ರಸ್ತಾಪಿಸಿದ್ದಾರೆ.
ಫಾದರ್ ರಾಬರ್ಟ್ ತಮ್ಮ ಚರ್ಚ್‌ನಿಂದ ಬಾಮಿಯಾನ್ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆದರೆ ಈ ವೇಳೆಗಾಗಲೇ ವಿಮಾನ ನಿಲ್ದಾಣದ ಸಿಬ್ಬಂದಿಗಳು ಪರಾರಿಯಾಗಿದ್ದಾರೆ. ಜನರು ದೇಶ ತೊರೆಯಲು ದೊಡ್ಡ ಸಂಖ್ಯೆಯಲ್ಲಿ ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ್ದಾರೆ.
ಬಾಮಿಯಾನ್‌ನಿಂದ ಕಾಬುಲ್‌ಗೆ ಕೇವಲ 25 ನಿಮಿಷಗಳ ಪ್ರಯಾಣ ಮಾತ್ರ. ನಿನ್ನೆ ಅವರು ಸ್ವಲ್ಪ ಆತಂಕದಲ್ಲಿದ್ದರು. ಈಗ ಫಾದರ್ ರಾಬರ್ಟ್ ಸ್ವಲ್ಪ ನಿರಾಳರಾಗಿದ್ದಾರೆ. ವಿಶ್ವಸಂಸ್ಥೆಯ ರಕ್ಷಣಾ ವಿಮಾನದ ನಿರೀಕ್ಷೆಯಲ್ಲಿದ್ದಾರೆ ಎಂದು ಫಾದರ್ ಜೆರೋಮ್ ಸಿಕ್ವೇರಾ ಈ-ಮೇಲ್ ಮೂಲಕ ತಿಳಿಸಿದ್ದಾರೆ.
ಆತಂಕದಲ್ಲಿ ಪಾದ್ರಿ ಕುಟುಂಬ; ಫಾದರ್ ರಾಬರ್ಟ್ ಜೆಸ್ಯೂಟ್ ಸಮುದಾಯದ ಪಾದ್ರಿಯಾಗಿ ನಾಲ್ಕು ವರ್ಷದ ಹಿಂದೆ ದೀಕ್ಷೆ ಪಡೆದಿದ್ದರು. ಬಳಿಕ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಆ ನಂತರ ಅಫ್ಘಾನಿಸ್ಥಾನದಲ್ಲಿ ಧರ್ಮ ಪ್ರಚಾರದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.
ಈಗ ಫಾದರ್ ರಾಬರ್ಟ್ ಸುರಕ್ಷತೆ ಕುರಿತು ಅವರ ಕುಟುಂಬದವರು, ಶಿವಮೊಗ್ಗದ ಕ್ರೈಸ್ತ ಸಮುದಾಯದವರಲ್ಲಿ ಆತಂಕ ಉಂಟಾಗಿದೆ. ಫಾದರ್ ರಾಬರ್ಟ್‌ರನ್ನು ಸುರಕ್ಷಿತವಾಗಿ ಹಿಂದಕ್ಕೆ ಕರೆ ತರುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಅಫ್ಘಾನಿಸ್ಥಾನದಲ್ಲಿರುವ ಭಾರತೀಯರು ಸದ್ಯ ಸುರಕ್ಷಿತವಾಗಿದ್ದಾರೆ. ತಾಲಿಬಾನಿ ಉಗ್ರರು ಯಾರ ವಿರುದ್ಧವೂ ಸೇಡು ತೀರಿಸಿಕೊಳ್ಳುತ್ತಿಲ್ಲ. ಮಂಗಳವಾರ ಭಾರತದ ವಾಯುಪಡೆಯ ಸಿ-17 ವಿಮಾನದ ಮೂಲಕ 100ಕ್ಕೂ ಹೆಚ್ಚು ಜನರು ದೇಶಕ್ಕೆ ವಾಪಸ್ ಆಗಿದ್ದಾರೆ.












Click it and Unblock the Notifications