ಶಿವಮೊಗ್ಗದಲ್ಲಿ ಯಾರ ಮೊಗ ಹೂವಾಗಿ ಅರಳಲಿದೆ?
ಶಿವಮೊಗ್ಗೆಯಲ್ಲಿ ಯಾರ ಮುಖ ಮೊಗ್ಗಿನಿಂದ ಹೂವಾಗಿ ಅರಳಲಿದೆ? ಯಾರ ಮುಖ ಬಾಡಿ ಹೋಗಲಿದೆ. ಮತದಾರನ ಗುಟ್ಟು ಮತಪೆಟ್ಟಿಗೆಯಲ್ಲಿ ಅಡಗಿಕೂತಿದೆ. ಮೇ 16ಕ್ಕೆ ಗೊತ್ತಾಗಲಿದೆ ಯಾರಿಗೆ ಅಲ್ಲಿ ವಿಜಯದ ಮೊಗ್ಗು ಸಿಗಲಿದೆ ಅಂತ.
ಹತ್ತು ವರ್ಷದ ಹಿಂದಿನ ಕಥೆ. 2004ರಲ್ಲಿ ಬಂಗಾರಪ್ಪ ಆಗ ಬಿಜೆಪಿಯಲ್ಲಿದ್ದರು. ಯಡಿಯೂರಪ್ಪನ ಇಂದಿನ ಬಲಗೈ ಬಂಟ, ನಾಯಿ ನರಿ ಎಂದೆಲ್ಲಾ ಎದುರಾಳಿಗಳ ಬಗ್ಗೆ ಮಾತನಾಡುವ ಆಯನೂರು ಮಂಜುನಾಥ ಅಂದು ಬಂಗಾರಪ್ಪನವರ ಎದುರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಯಡಿಯೂರಪ್ಪ ಶಿಕಾರಿಪುರದಲ್ಲಿ ಗೆಲ್ಲೋದರ ಜೊತೆ, ಬಂಗಾರಪ್ಪನವರಿಗೆ ಭರ್ಜರಿ ಲೀಡ್ ತಂದು ಕೊಟ್ಟಿದ್ದರು. ಈಗ ಅದಲು ಬದಲು ಕಂಚಿ ಕದಲು. ಬಂಗಾರಪ್ಪನ ಮಗಳು, ರಾಜಣ್ಣನ ಸೊಸೆ ಗೀತಾ ಶಿವರಾಜ್ ಕುಮಾರ್ ಅಲ್ಲೀಗ ಹೊರೆ ಹೊತ್ತ ಮಹಿಳೆ, ಎದುರಾಳಿ ಖುದ್ದು ಯಡಿಯೂರಪ್ಪ!
ಐದು ವರ್ಷದ ಹಿಂದೆ ಮಗನಿಗೆ ನಾಟಕೀಯವಾಗಿ ಟಿಕೆಟ್ ಕೊಡಿಸಿ, ಗೆಲ್ಲಿಸಿಕೊಂಡು, ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡು, ಜೈಲಿಗೆ ಹೋಗಿ, ಕೆಜೆಪಿ ಕಟ್ಟಿ, ಅದನ್ನು ಸುಟ್ಟು ಮತ್ತೆ ಭಾರತ್ ಮಾತಾ ಕೀ ಜೈ ಎನ್ನುತ್ತಾ ಬಿಜೆಪಿಗೆ ಮರಳಿದ ಯಡಿಯೂರಪ್ಪ ಶಿವಮೊಗ್ಗದಲ್ಲಿ ಫೆವರಿಟ್. ಹಾಗಿದ್ರೆ ಗೀತಾ ಶಿವರಾಜ್ ಕುಮಾರ್ ಗತಿಯೇನು? ಕಾಂಗ್ರೆಸ್ ಯಾವ ಸ್ಥಾನಕ್ಕೆ ಇಳಿಯಲಿದೆ? ಮುಂದೆ ಓದಿ ನೋಡಿ. [ಬೆಂಗಳೂರು ದಕ್ಷಿಣದಲ್ಲಿ ಯಾರು ಗೆಲ್ತಾರೆ?]

ಕೆಜೆಪಿ ಸುಟ್ಟು ಬೂದಿ ಬಳಿದುಕೊಂಡ ಯಡಿಯೂರಪ್ಪ
ಕೆಜೆಪಿ ಎಂಬ ಆತ್ಮಹತ್ಯಾದಳವನ್ನ ಕಟ್ಟುವವರೆಗೂ ಬಿಜೆಪಿಯ ಭದ್ರಕೋಟೆಯಾಗಿದ್ದ ಶಿವಮೊಗ್ಗ 2013ರಲ್ಲಿ ಧೂಳಿಪಟವಾಗಿ ಹೋಗಿತ್ತು. ಆದರೀಗ ಆತ್ಮಹತ್ಯಾ ದಳವೆಂಬ ಕೆಜಿಪಿಯನ್ನ ಸುಟ್ಟು, ಬೂದಿಯನ್ನ ವಿಭೂತಿಯಂತೆ ಬಳಿದುಕೊಂಡು ಯಡಿಯೂರಪ್ಪ ಕಣಕ್ಕಿಳಿದಿದ್ದಾರೆ. ಮತ್ತೆ ಬಿಜೆಪಿಗೆ ಕಳೆದ ದಶಕದಂತೆ ಶಿವಮೊಗ್ಗ ಒಲಿಯುತ್ತಾ ಅಥವಾ ಮುನಿಸಿಕೊಳ್ಳುತ್ತಾ.

ಈ ಬಾರಿ ಆಗಿರೋ ವೋಟಿಂಗ್ ಟ್ರೆಂಡ್ ಹೇಗಿದೆ?
ಹೆಚ್ಚೂ ಕಡಿಮೆ ಅಜಮಾಸು ಕಳೆದ ವಿಧಾನಸಭೆಯಷ್ಟೇ ಮತ ಚಲಾವಣೆಯಾಗಿರೋ ಶಿವಮೊಗ್ಗದಲ್ಲಿ ಅತಿ ಹೆಚ್ಚಾದ ಡ್ರಿಫ್ಟ್ ಅಂತೂ ಕಂಡುಬಂದಿಲ್ಲ. ಸುಮಾರು ಒಂದೂ ಮುಕ್ಕಾಲು ಲಕ್ಷ ವೋಟು ಹೆಚ್ಚಾಗಿದೆ 2009ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ. ಶಿವಮೊಗ್ಗ ನಗರ ಮತ್ತು ಬೈಂದೂರಿನಲ್ಲಿ ಹೆಚ್ಚಿನ ಡ್ರಿಫ್ಟ್ ಕಂಡಿರೋದು, ಶಿವಮೊಗ್ಗ ಗ್ರಾಮಾಂತರದಲ್ಲೂ ಹೆಚ್ಚಿನ ಮತದಾನವಾಗಿರೋದು ನೋಡಿದ್ರೆ, ಯಡಿಯೂರಪ್ಪನವರಿಗೆ ಲಾಭವಾಗಿರೋದು ಗ್ಯಾರಂಟಿ.

ಯಡಿಯೂರಪ್ಪ ಲೀಡು ಅಜಮಾಸು ಎಷ್ಟಾಗಬಹುದು?
ಸೊರಬ ಮತ್ತು ಸಾಗರದಲ್ಲಿನ ಕಡಿಮೆ ವೋಟಿಂಗ್ ರಾಜಣ್ಣನ ಸೊಸೆಗೆ ತೊಂದರೆ ಕೊಡುವ ಸಾಧ್ಯತೆ ಇದೆ. ನಗರ ಕ್ಷೇತ್ರಗಳಲ್ಲಿ ಮೋದಿಯ ಅಲೆ ಕಂಡು ಬಂದಿದ್ದು ಹೆಚ್ಚಿನ ಮತಗಳು ಚಲಾವಣೆಯಾಗಿರೋದ್ರಿಂದ ಯಡಿಯೂರಪ್ಪನವರಿಗೆ ದೆಹಲಿಯ ವಿಮಾನದಲ್ಲಿ ಸೀಟು ಖಾಯಂ ಆಗಿ ಸಿಗಬಹುದು. ಇಲ್ಲಿ ಕಾಂಗ್ರೆಸ್ಸು ಬಹುಶಃ ಡಮ್ಮಿಯಾಗಿರೋದ್ರಿಂದ ಯಡಿಯೂರಪ್ಪನವರ ಲೀಡು ಅಜಮಾಸು ಲಕ್ಷ ತಲುಪಿದರೂ ಅಚ್ಚರಿ ಪಡಬೇಕಾಗಿಲ್ಲ.

ಹತ್ತು ವರ್ಷಗಳಲ್ಲಿ ಇಲ್ಲಿ ಗೆದ್ದೋರು ಯಾರು?
ಇನ್ನು ಈ ಕ್ಷೇತ್ರದ ಮಹಾಮಹಿಮೆ. ಇಲ್ಲಿ ಮುಖ್ಯಮಂತ್ರಿಗಳಾದೋರು ಸೋಲುತ್ತಾರೆ. ಅಥವಾ ಲೋಕಸಭೆಯಲ್ಲಿ ಸೋತನಂತರ ಮುಖ್ಯ ಮಂತ್ರಿಗಳಾಗಿದ್ದಾರೆ. ಬಂಗಾರಪ್ಪ ಮಾಜಿ ಮುಖ್ಯಮಂತ್ರಿಯಾಗಿ ಇಲ್ಲಿ ಗೆದ್ದು ತದನಂತರ ಸೋತರೆ, ಜೆ.ಹೆಚ್ ಪಟೇಲ್ ಮತ್ತು ಯಡಿಯೂರಪ್ಪ ಇಲ್ಲಿ ಸೋತು ಆಮೇಲೆ ಕರುನಾಡಿಗೆ ಮುಖ್ಯಮಂತ್ರಿಗಳಾಗಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಇಲ್ಲಿ ಗೆದ್ದೋರು ಯಾರು? ಸೋತೋರು ಯಾರು?

ನೋಡಿ ಇಲ್ಲಿನ ವೋಟಿಂಗ್ ಚಿತ್ರಣವನ್ನ!
ಸರಿಸುಮಾರು ಆರು ಪ್ರತಿಶತ ವೋಟಿಂಗ್ ಹೆಚ್ಚಾಗಿರೋ ಶಿವಮೊಗ್ಗದ ವೋಟಿಂಗ್ ಪ್ರತಿಶತ ಮೋದಿಯ ಅಲೆಯನ್ನೇ ತೋರುತ್ತೆ ಅಂತ ಬಿಜೆಪಿ ಅಂದುಕೊಂಡಿದ್ದರೆ, ರಾಜಣ್ಣನ ಸೊಸೆಯ ಅಲೆ ಇದು ಅಂತ ಹೊರೆಹೊತ್ತ ಮಹಿಳೆಯರು ಅಂದುಕೊಂಡಿದ್ದಾರೆ.

ಗೀತಾ ಬೆಂಗಳೂರಿಗೆ ವಾಪಸ್ ಗ್ಯಾರಂಟಿ?
ಬಹುಶಃ ಶಿವಣ್ಣನ ಮಡದಿ ಮತ್ತೆ ಬೆಂಗಳೂರಿಗೆ ವಾಪಸ್ಸಾಗೋದು ಬಹುತೇಕ ಖಚಿತ. ಯಡಿಯೂರಪ್ಪ ದೆಹಲಿಗೆ ಹೋಗುವ ಸಾಧ್ಯತೆಯೇ ಹೆಚ್ಚು. ಕಾಂಗ್ರೆಸ್ಸೆಂಬ ಪಕ್ಷ ಹೀಗೆ ಮುಂದುವರೆದರೆ ಈ ಕ್ಷೇತ್ರದಲ್ಲಿ ಭಾವುಟ ಹಿಡಿಯೋಕು ಜನಾ ಸಿಗದೇ ಹೋಗೋ ಸಾಧ್ಯತೆಯಿದೆ. ಅಂದ ಹಾಗೆ ನಿಮ್ಮ ಅಭಿಪ್ರಾಯ ಏನು?












Click it and Unblock the Notifications