Shikaripura: ಬಿವೈ ವಿಜಯೇಂದ್ರ vs ಜಿಬಿ ಮಾಲತೇಶ್, ಸಾಧಕ-ಬಾಧಕಗಳ ವಿಶ್ಲೇಷಣೆ
ಶಿವಮೊಗ್ಗ, ಏಪ್ರಿಲ್. 23: ಮುಂಬರುವ ವಿಧಾನಸಭಾ ಚುನಾವಣೆಗೆ ಕರುನಾಡು ಸಿದ್ಧವಾಗಿದ್ದು, ಅಭ್ಯರ್ಥಿಗಳ ಘೋಷಣೆ ಮಾಡಿರುವ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಚಾರ ಕಾರ್ಯ ಆರಂಭಿಸಿದೆ. ಇದರ ಜೊತೆಗೆ ಆಯಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಗೆಲುವಿಗೆ ಸಾಧಕ ಬಾಧಕಗಳ ಲೆಕ್ಕಾಚಾರ ಕೂಡ ಈಗಾಗಲೇ ಆರಂಭವಾಗಿದೆ.
ಶಿವಮೊಗ್ಗ ಜಿಲ್ಲೆಯ ರಾಜಕಾರಣವೆಂದರೆ ಅಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಮೊದಲು ಬರುತ್ತದೆ. ಅದರಲ್ಲೂ ಶಿಕಾರಿಪುರ. ಬಿಎಸ್‌ವೈ ಇಲ್ಲದೇ ಶಿಕಾರಿಪುರದ ರಾಜಕಾರಣ ಪೂರ್ಣವಾಗುವುದಿಲ್ಲ. ಅಂತಹ ಹೆಸರು ಅವರದ್ದು. ಆದರೆ, ರಾಜಕೀಯ ನಿವೃತ್ತಿ ಘೋಷಿಸಿರುವ ಅವರು ಈ ಬಾರಿ ತಮ್ಮ ಸ್ವಕ್ಷೇತ್ರದಿಂದ ಪುತ್ರ ಬಿವೈ ವಿಜಯೇಂದ್ರ ಅವರನ್ನು ಕಣಕ್ಕಿಳಿಸಿದ್ದಾರೆ. ಅವರ ಗೆಲುವು ಕೂಡ ಶತಸಿದ್ಧ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಅವರಿಗಿರುವ ಸಾಧಕ ಬಾಧಕಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಈ ಲೇಖನದ್ದು.

ಶಿಕಾರಿಪುದಲ್ಲಿ ಬಿಜೆಪಿಯಿಂದ ಬಿಎಸ್‌ವೈ ಪುತ್ರ ಬಿವೈ ವಿಜಯೇಂದ್ರ ಕಣಕ್ಕಿಳಿದ್ದಿದ್ದಾರೆ. ಕಾಂಗ್ರೆಸ್ ಜಿಬಿ ಮಾಲತೇಶ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದು ಕಾಂಗ್ರೆಸ್‌ನಲ್ಲಿ ಭಾರಿ ಬಂಡಾಯಕ್ಕೂ ಕಾರಣವಾಗಿದೆ. ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಾಗರಾಜ ಗೌಡ ಅವರಿಗೆ ಬೆಂಬಲ ಘೋಷಿಸಿದೆ.
*ಬಿಜೆಪಿ ಅಭ್ಯರ್ಥಿ ಬಿವೈ ವಿಜಯೇಂದ್ರ ಪ್ಲಸ್ ಪಾಯಿಂಟ್ಸ್*
*ಪ್ರಬಲ ಲಿಂಗಾಯತ ಸಮುದಾಯ*: ಶಿಕಾರಿಪುರದಲ್ಲಿ ಪ್ರಬಲ ಲಿಂಗಾಯಿತ ಸಮುದಾಯದ ಮತಗಳು ಬಿವೈ ವಿಜಯೇಂದ್ರ ಬೆನ್ನಿಗಿದೆ. ಯಾವುದೇ ಕಾರಣಕ್ಕೂ ಈ ವೋಟುಗಳು ಬೇರೆಡೆಗೆ ಹೋಗುವ ಸಾಧ್ಯತೆ ತುಂಬಾ ಕಡಿಮೆ. ಶಿಕಾರಿಪುರದಲ್ಲಿ ಬೇರು ಬಿಟ್ಟಿರುವ ಯಡಿಯೂರಪ್ಪ ಅವರ ಮೇಲಿನ ಗೌರವ ಕೂಡ ಇದಕ್ಕೆ ದೊಡ್ಡ ಕಾರಣ.
* ಬಿಎಸ್ ಯಡಿಯೂರಪ್ಪ ಹೆಸರು*: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಅವರಿಗೆ ಪೈಪೋಟಿಯೇ ಇಲ್ಲ. ಅಂತಹ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಮಗನನ್ನು ಉತ್ತರಾಧಿಕಾರಿಯನ್ನಾಗಿಸಿದ್ದಾರೆ. ಹೀಗಾಗಿ ಇಲ್ಲಿ ಬಿವೈ ವಿಜಯೇಂದ್ರ ಸೋಲಲು ಸಾಧ್ಯವಿಲ್ಲ. ಯಡಿಯೂರಪ್ಪ ಎಂಬ ಒಂದು ಹೆಸರು ಸಾಕು ಶಿಕಾರಿಪುರದಲ್ಲಿ ಗೆಲುವು ದಾಖಲಿಸಲು. ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗಲೂ ಶಿಕಾರಿಪುರದ ಜನರು ಅವರ ಜೊತೆ ನಿಂತರು.

*ಶಿಕಾರಿಪುರದ ಅಭಿವೃದ್ಧಿ*: ಶಿಕಾರಿಪುರ ಬಿ. ಎಸ್. ಯಡಿಯೂರಪ್ಪಗೆ ರಾಜಕೀಯ ನೆಲೆ ನೀಡಿದ ಕ್ಷೇತ್ರ. 7 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು 1999ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಾಲಿಂಗಪ್ಪ ಎದುರು ಕ್ಷೇತ್ರದಲ್ಲಿ ಸೋಲು ಸಹ ಕಂಡಿದ್ದರು. ಚುನಾವಣೆಯಲ್ಲಿ 7,561 ಮತಗಳಿಂದ ಯಡಿಯೂರಪ್ಪ ಸೋತಿದ್ದರು. ಅವರು ಆಯ್ಕೆಯಾಗಿರುವ ಸಮಯದಲ್ಲಿಯೇ ಶಿಕಾರಿಪುರ ಹೆಚ್ಚು ಅಭಿವೃದ್ಧಿಯಾಗಿದೆ ಎಂಬ ಮಾತುಗಳಿವೆ. ಇದು ಕೂಡ ವಿಜಯೇಂದ್ರ ಗೆಲುವಿಗೆ ಸಹಾಯಕವಾಗಲಿದೆ.
* ಬಿವೈ ವಿಜಯೇಂದ್ರ ಸಂಘಟನಾ ಚತುರತೆ*: ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಸಂಘಟನಾ ಕೌಶಲ್ಯಕ್ಕೆ ಪಕ್ಷದ ಹಿರಿಯರೇ ಮೂಕವಿಸ್ಮಿತರಾಗುತ್ತಾರೆ. ಹುಟ್ಟಿನಿಂದಲೇ ರಾಜಕೀಯ, ರಾಜಕಾರಣಿಗಳ ಜೊತೆಗಿನ ಒಡನಾಟ ಅವರಲ್ಲಿ ಈ ಗುಣವನ್ನು ಮತ್ತಷ್ಟು ಬಲಪಡಿಸಿದೆ. ಹೀಗಾಗಿ ಜನರು ಅವರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ ಎನ್ನಬಹುದು.
*ಹೊಸ ನಾಯಕನ ಉದಯ*: ಶಿಕಾರಿಪುರದ ಜನರು ಬಿಎಸ್ ಯಡಿಯೂರಪ್ಪ ಅವರನ್ನು ಅಪ್ಪಿಕೊಂಡು ಬೆಳಸಿದ್ದಾರೆ. ಅವರಿಗೆ ಈಗ ವಯಸ್ಸಾಗಿದ್ದು, ನಿವೃತ್ತಿ ಘೋಷಿಸಿದ್ದಾರೆ. ಇದೇ ಕಾರಣಕ್ಕೆ ಹೊಸ ನಾಯಕನನ್ನು ಹುಡುಕುತ್ತಿದ್ದ ಶಿಕಾರಿಪುರದ ಮತದಾರರಿಗೆ ಬಿವೈ ವಿಜಯೇಂದ್ರ ಹೊಸ ಭರವಸೆಯಾಗಿ ಕಾಣಿಸಿಕೊಂಡಿದ್ದಾರೆ.

*ಬಿವೈ ವಿಜಯೇಂದ್ರ ಮೈನಸ್ ಪಾಯಿಂಟ್ಸ್*
*ಆಡಳಿತ ವಿರೋಧಿ ನೀತಿ*: ಈಗಾಗಲೇ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಕಾಣಿಸಿಕೊಂಡಿದೆ. ಬೆಲೆ ಏರಿಕೆ, ಇಂಧನ ಹೆಚ್ಚಳಗಳು ಬಿಜೆಪಿ ವಿರುದ್ಧ ಜನರಲ್ಲಿ ತಿರಸ್ಕಾರದ ಭಾವನೆಯನ್ನು ಮೂಡಿಸಿದೆ. ಇದು ಶಿಕಾರಿಪುರದಲ್ಲೂ ಫಲಿತಾಂಶ ಬದಲಾವಣೆ ಮೇಲೆ ಕೊಂಚ ಪರಿಣಾಮ ಬೀರಬಹುದು. 40 ಪರ್ಸೆಂಟ್ ಭ್ರಷ್ಟಾಚಾರ, ಪಿಎಸ್‌ಐ ಹಗರಣಗಳು ಭಾರಿ ಸುದ್ದಿ ಮಾಡಿವೆ.
*ಕುಟುಂಬ ರಾಜಕಾರಣ*: ಕಾಂಗ್ರೆಸ್ ಬಗ್ಗೆ ಕುಟುಂಬ ರಾಜಕಾರಣದ ಆರೋಪ ಮಾಡುತ್ತಿದ್ದ ಬಿಜೆಪಿ, ಈಗ ಮಾಡುತ್ತಿರುವುದು ಏನು ಎಂಬ ಪ್ರಶ್ನೆಗಳು ಬಿಜೆಪಿ ಕಾರ್ಯಕರ್ತರಲ್ಲಿ ಮೂಡಿದೆ. ತಂದೆಯ ಸ್ಥಾನ ಮಗನಿಗೆ ಎಂಬುದು ಯಾವಾಗಿನಿಂದ ಬಂದಿದೆ ಎಂಬ ಅಸಮಾಧಾನ ಹೊಗೆಯಾಡುತ್ತಿದೆ. ಜನರ ಮನಸ್ಸಿನಲ್ಲಿ ಕುಟುಂಬ ರಾಜಕಾರಣದ ಬಗ್ಗೆ ತಿರಸ್ಕಾರವಿದ್ದು, ಇದು ಬಿವೈ ವಿಜಯೇಂದ್ರಗೆ ಪ್ರತಿಕೂಲ ವಾತಾವರಣ ಸೃಷ್ಟಿಸಬಹುದು.
*ಬಂಜಾರ ಸಮುದಾಯದ ಪ್ರತಿಭಟನೆ*: ಬಿಜೆಪಿ ಸರ್ಕಾರ ಜಾರಿಗೆ ತರಲು ಪ್ರಸ್ತಾವನೆ ಸಲ್ಲಿಸಿರುವ ಒಳ ಮೀಸಲಾತಿ ಕೂಡ ಶಿಕಾರಿಪುರದಲ್ಲಿ ಪೆಟ್ಟು ನೀಡಲಿದೆ. ಈಗಾಗಲೇ ಬಿಎಸ್.ಯಡಿಯೂರಪ್ಪ ಅವರ ಮೇಲೆ ಬಂಜಾರ ಸಮುದಾಯದ ಸಿಟ್ಟು ಪರಿಣಾಮ ಬೀರಿದೆ. ಶಿವಮೊಗ್ಗದಲ್ಲಿ ಬಿಎಸ್ ಯಡಿಯೂರಪ್ಪ ಮನೆ ಮೇಲೆ ದಾಳಿ ನಡೆದಿದ್ದು ಇಲ್ಲಿ ಸ್ಮರಿಸಬಹುದು. ಇದು ಶಿಕಾರಿಪುರದ ಫಲಿತಾಂಶದ ಮೇಲೆ ಪರಿಣಾಮ ಬೀರಬಹದು.
*ಕಾಂಗ್ರೆಸ್ ಅಭ್ಯರ್ಥಿ ಜಿಬಿ ಮಾಲತೇಶ್ ಪ್ಲಸ್ ಪಾಯಿಂಟ್ಸ್*
*ಆಡಳಿತ ವಿರೋಧಿ ನೀತಿ*: 54 ವರ್ಷದ ಕಾಂಗ್ರೆಸ್ ಅಭ್ಯರ್ಥಿ ಜಿಬಿ ಮಾಲತೇಶ್‌ಗೆ ಆಡಳಿತ ವಿರೋಧಿ ನೀತಿ ಅನುಕೂಲಕರ ಪರಿಣಾಮ ಒದಗಿಸಲಿದೆ. ಈಗಾಗಲೇ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಏಳುತ್ತಿದೆ. ಬೆಲೆ ಏರಿಕೆ, ಇಂಧನ ಹೆಚ್ಚಳಗಳು, 40 ಪರ್ಸೆಂಟ್ ಭ್ರಷ್ಟಾಚಾರ, ಪಿಎಸ್‌ಐ ಹಗರಣಗಳು ಬಿಜೆಪಿ ವಿರುದ್ಧ ಜನರಲ್ಲಿ ತಿರಸ್ಕಾರದ ಭಾವನೆಯನ್ನು ಮೂಡಿಸಿದೆ. ಇದು ಶಿಕಾರಿಪುರದಲ್ಲೂ ಫಲಿತಾಂಶ ಬದಲಾವಣೆ ಮೇಲೆ ಕೊಂಚ ಪರಿಣಾಮ ಬೀರಬಹುದು
*ಕಾಂಗ್ರೆಸ್ ಮೇಲೆ ಜನರ ಭರವಸೆ*: ಈಗಾಗಲೇ ಹಲವು ಸಮೀಕ್ಷೆಗಳು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅನುಕೂಲಕರ ಫಲಿತಾಂಶ ನೀಡಿವೆ. ಹಲವು ಸಮೀಕ್ಷೆಗಳು ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಗೆಲ್ಲುವ ಸಂಭವದ ಬಗ್ಗೆ ತಿಳಿಸಿದೆ. ಹೀಗಾಗಿಯೇ ಇದು ಕೂಡ ಶಿಕಾರಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಲು ಮತದಾರರನ್ನು ಸೆಳೆಯುವ ಸಾಧ್ಯತೆಯಿದೆ.
*ಕುಟುಂಬ ರಾಜಕಾರಣ*: ಕುಟುಂಬ ರಾಜಕಾರಣದ ಬಗ್ಗೆ ಜನರಿಗಿರುವ ಅಸಮಾಧಾನ. ಶಿಕಾರಿಪುರದಲ್ಲಿ ಏಳು ಬಾರಿ ಶಾಸಕರಾಗಿ ಬಿಎಸ್ ಯಡಿಯೂರಪ್ಪ ಅವರು ಈಗ ತಮ್ಮ ಮಗನನ್ನು ತಮ್ಮ ಸ್ವಕ್ಷೇತ್ರದಿಂದ ಕಣಕ್ಕಿಳಿಸಿದ್ದಾರೆ. ಇದು ಕೆಲವು ಮತದಾರರು ಮತ್ತು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಕಡೆ ವಾಲುವ ಸಾಧ್ಯತೆಯಿದೆ.
*ಒಳಮೀಸಲಾತಿ ಪ್ರತಿಭಟನೆ*: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಘೋಷಣೆ ಮಾಡಿ, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ಬಂಜಾರ ಸಮುದಾಯದ ಮೀಸಲಾತಿಗೆ ಕಡಿತ ಬೀಳಲಿದೆ ಎಂದು ಬಂಜಾರ ಸಮುದಾಯ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಶಿವಮೊಗ್ಗದಲ್ಲಿ ಈಗಾಗಲೇ ದೊಡ್ಡ ಪ್ರತಿಭಟನೆಗಳು ನಡೆದಿವೆ. ಯಡಯೂರಪ್ಪ ಅವರನ್ನು ಟಾರ್ಗೆಟ್ ಮಾಡಿ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದು ಕಾಂಗ್ರೆಸ್‌ಗೆ ಅನುಕೂಲವಾಗಬಹುದು.
*ಕಾಂಗ್ರೆಸ್ ಅಭ್ಯರ್ಥಿ ಜಿಬಿ ಮಾಲತೇಶ್ ಮೈನಸ್ ಪಾಯಿಂಟ್ಸ್*
*ಕಾಂಗ್ರೆಸ್ ಬಂಡಾಯ*: ಶಿಕಾರಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿಬಿ ಮಾಲತೇಶ್ ಅವರನ್ನು ಘೊಷಣೆ ಮಾಡಿದ ಕಾರಣ ಕ್ಷೇತ್ರದಲ್ಲಿ ಬಂಡಾಯ ಆರಂಭವಾಗಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗರಾಜ ಗೌಡ ಬಂಡಾಯವೆದ್ದು, ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದು ಕಾಂಗ್ರೆಸ್ ಮತಗಳನ್ನು ಛಿದ್ರಮಾಡಲಿದೆ. ಬಿಜೆಪಿ ಅಭ್ಯರ್ಥಿಗೆ ಸಹಾಯಕವಾಗಲಿದೆ.
*ಬಿಜೆಪಿ ಭದ್ರಕೋಟೆ*: ಶಿಕಾರಿಪುರ ಮೊದಲಿನಿಂದಲೂ ಬಿಜೆಪಿ ಭದ್ರಕೋಟೆ. ಇಲ್ಲಿ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಜನ ಅಷ್ಟಾಗಿ ಮನ್ನಣೆ ನೀಡುವುದಿಲ್ಲ. 1999ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಾಲಿಂಗಪ್ಪ ಗೆದ್ದದ್ದು ಬಿಟ್ಟರೆ, ಮತ್ತೆ ಇದು ಬಿಎಸ್ ಯಡಿಯೂರಪ್ಪ ಅವರ ಕ್ಷೇತ್ರವೇ. ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಇಲ್ಲಿ ಕಷ್ಟ ಸಾಧ್ಯ.
*ಬಂಡಾಯ ಅಭ್ಯರ್ಥಿಗೆ ಜೆಡಿಎಸ್ ಬೆಂಬಲ*: ಕಾಂಗ್ರೆಸ್ ಟಿಕೆಟ್ ವಂಚಿತರಾದ ಕಾರಣದಿಂದ ಬಂಡಾಯ ಅಭ್ಯರ್ಥಿಯಾಗಿ ನಾಗರಾಜ ಗೌಡ ಕಣಕ್ಕಿಳಿಯುತ್ತಿದ್ದಾರೆ. ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ನಡೆಸಿದರುವ ಅವರಿಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಂಬಲ ಘೋಷಿಸಿದ್ದಾರೆ. ಶಿಕಾರಿಪುರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವ ನಿರ್ಧಾರ ಪ್ರಕಟಿಸಿ, ನಾಗರಾಜ ಗೌಡ ಅವರಿಗೆ ಜೆಡಿಎಸ್ ಬಾಹ್ಯ ಬೆಂಬಲ ಘೋಷಿಸಿದೆ ಎಂದಿದ್ದಾರೆ. ಇದು ಕಾಂಗ್ರೆಸ್‌ಗೆ ಭಾರಿ ಪೆಟ್ಟು ನೀಡಲಿದೆ.












Click it and Unblock the Notifications