ಬೆಂಗಳೂರಿಗೆ ಶರಾವತಿ ನೀರು; ಮತ್ತೆ ಚರ್ಚೆ ಆರಂಭ
ಶಿವಮೊಗ್ಗ, ಮಾರ್ಚ್ 08 : ಬೆಂಗಳೂರು ನಗರಕ್ಕೆ ಶರಾವತಿ ನೀರು ತರುವ ಚರ್ಚೆ ಮತ್ತೆ ಆರಂಭವಾಗಿದೆ. 2019ರಲ್ಲಿ ಈ ಕುರಿತು ಚರ್ಚೆ ನಡೆದಿತ್ತು. ಶಿವಮೊಗ್ಗದಲ್ಲಿ ಈ ಯೋಜನೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಶಿವಮೊಗ್ಗ ಬಂದ್ ನಡೆಸಲಾಗಿತ್ತು.
ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಬೆಂಗಳೂರಿಗೆ ಶರಾವತಿ ನೀರು ತರುವ ಬಗ್ಗೆ ಮಾತನಾಡಿದ್ದಾರೆ. "ಶರಾವತಿ ಜಲಾಶಯದಿಂದ ನೀರು ಹರಿಸುವ ಯೋಜನೆ ಸಿದ್ಧವಿದ್ದು, ಸರ್ಕಾರದ ಅನುಮೋದನೆ ಬಾಕಿ ಇದೆ" ಎಂದು ಹೇಳಿದ್ದಾರೆ.
"ಶರಾವತಿಯಲ್ಲಿ ಲಭ್ಯವಿರುವ 30 ಟಿಎಂಸಿ ಅಡಿ ನೀರಿನಲ್ಲಿ ಮೊದಲ ಹಂತದಲ್ಲಿ 15 ಟಿಎಂಸಿ ಅಡಿ ನೀರನ್ನು ತರುವ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಅನಿವಾರ್ಯವಾಗಿದೆ" ಎಂದು ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

"15 ಟಿಎಂಸಿ ಅಡಿಯಲ್ಲಿ ಬೆಂಗಳೂರಿಗೆ 10 ಟಿಎಂಸಿ ಅಡಿ ಮತ್ತು ಶಿವಮೊಗ್ಗ, ದಾವಣಗೆರೆ, ತುಮಕೂರು ಜಿಲ್ಲೆಗಳಿಗೆ 5 ಟಿಎಂಸಿ ಅಡಿ ನೀರು ಬಳಸುವ ಯೋಜನೆ ಸಿದ್ಧಪಡಿಸಲಾಗಿದೆ" ಎಂದು ತುಷಾರ್ ಗಿರಿನಾಥ್ ವಿವರಣೆ ನೀಡಿದ್ದಾರೆ.
"ಸದ್ಯ ಇರುವ ಎಲ್ಲಾ ನೀರಿನ ಮೂಲಗಳು ಮತ್ತು ಕಾವೇರಿ 5ನೇ ಹಂತ, ಎತ್ತಿನಹೊಳೆಯಿಂದ ನಿತ್ಯ ಬರಲಿರುವ 11 ಕೋಟಿ ಲೀಟರ್ ಬಿಟ್ಟರೆ ಮತ್ತೆ ನೀರಿನ ಮೂಲವಿಲ್ಲ. 2028-29ರ ವೇಳೆಗೆ ಮತ್ತೆ ನೀರಿನ ಹಾಹಾಕಾರ ಎದುರಾಗಲಿದೆ" ಎಂದರು.
"ಬೆಂಗಳೂರು ನಗರಕ್ಕೆ ನಿತ್ಯ 77.50 ಕೋಟಿ ಲೀಟರ್‌ಗಳಷ್ಟು ಕಾವೇರಿ ನೀರು ತರುವ 5ನೇ ಹಂತದ 4 ಸಾವಿರ ಕೋಟಿ ಮೊತ್ತದ ಯೋಜನೆಯಲ್ಲಿ 2 ಸಾವಿರ ಕೋಟಿ ಮೊತ್ತದ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ" ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.












Click it and Unblock the Notifications