ಶಿವಮೊಗ್ಗ ಎಸ್ಪಿ ಕೈಗೆ ಇನ್ಸ್‌ಪೆಕ್ಟರ್ ಸಿಕ್ಕಿಬಿದ್ದದ್ದು ಹೇಗೆ?
ಶಿವಮೊಗ್ಗ, ಮಾ. 31 : ಅಕ್ರಮ ಮರಳು ಸಾಗಣೆಗೆ ಅವಕಾಶ ನೀಡುತ್ತಿದ್ದ ಇನ್ಸ್‌ಪೆಕ್ಟರ್ ಅವರನ್ನು ಅಮಾನತುಗೊಳಿಸಿ ಶಿವಮೊಗ್ಗ ಎಸ್ಪಿ ಆದೇಶ ಹೊರಡಿಸಿದ್ದಾರೆ. ಎಸ್ಪಿ ಜೊತೆಯಲ್ಲಿದ್ದ ಪಿಎಸ್‌ಐಗೆ ಕರೆ ಮಾಡಿ ಲಾರಿಯನ್ನು ಬಿಡುವಂತೆ ಹೇಳಿದ್ದ ಇನ್ಸ್‌ಪೆಕ್ಟರ್ ವಿರುದ್ಧ ಇಲಾಖಾ ತನಿಖೆ ನಡೆಯಲಿದೆ.
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚೆನ್ನಣ್ಣನವರ್ ತಮ್ಮ ಕಚೇರಿಯ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ಅವರನ್ನು ಅಮಾನತು ಮಾಡಿ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಲಕ್ಷ್ಮೀಕಾಂತ್ ಮರಳು ಮಾಫಿಯಾದೊಂದಿಗೆ ಕೈ ಜೋಡಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಪಿಎಸ್‌ಐಗೆ ಕರೆ ಮಾಡಿ ಸಿಕ್ಕಿಬಿದ್ದರು : ಎಸ್ಪಿ ಕಚೇರಿಯಲ್ಲಿರುವ ಜಿಲ್ಲಾ ವಿಶೇಷ ವಿಭಾಗ (ಡಿಎಸ್‌ಪಿ) ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ಅವರು ಸಿನಿಮೀಯ ರೀತಿಯಲ್ಲಿ ರವಿ ಅವರ ಕೈಗೆ ಸಿಕ್ಕಿಬಿದ್ದಿದ್ದು, ಅವರನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆ ನಡೆಸಲು ಆದೇಶ ನೀಡಲಾಗಿದೆ. [ಮರಳು ಮಾಫಿಯಾದಿಂದ ತಹಶೀಲ್ದಾರ್ ಹತ್ಯೆ ಯತ್ನ]
ಎರಡು ದಿನಗಳ ಹಿಂದೆ ಎಸ್ಪಿ ರವಿ ಡಿ.ಚೆನ್ನಣ್ಣನವರ್ ಅವರು ತಮ್ಮ ಸಿಬ್ಬಂದಿ ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ನೋಡಲು ರಾತ್ರಿ ಮಫ್ತಿಯಲ್ಲಿ ಹೋಗಿದ್ದರು. ನ್ಯೂ ಮಂಡ್ಲಿ ಸಮೀಪ ಚೆಕ್‌ಪೋಸ್ಟ್ ಬಳಿ ಅವರಿಗೆ ಮರಳು ಸಾಗಣೆ ಮಾಡುತ್ತಿದ್ದ ಲಾರಿ ಸಿಕ್ಕಿದೆ. [ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]
ಚೆಕ್‌ಪೋಸ್ಟ್‌ನಲ್ಲಿದ್ದ ಪಿಎಸ್‌ಐ ಚೈತನ್ಯ ಅವರಿಗೆ ಮರಳು ಲಾರಿಯ ಅನುಮತಿ ಸೇರಿದಂತೆ ದಾಖಲೆಗಳನ್ನು ಪರಿಶೀಲಿಸಲು ಹೇಳಿದ್ದಾರೆ. ಲಾರಿ ಚಾಲಕ ಚೈತನ್ಯ ಅವರ ಜೊತೆಗೆ ಮಫ್ತಿಯಲ್ಲಿದ್ದ ಎಸ್ಪಿ ಅವರನ್ನು ಗುರುತಿಸದೇ ನಿಮ್ಮ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ನಮಗೆ ಚೆನ್ನಾಗಿ ಗೊತ್ತು ಎಂದು ಹೇಳಿದ್ದಾರೆ. [ಅಧಿಕಾರಿಗೆ ಬೆದರಿಕೆ ಹಾಕಿದ ಶಾಸಕ ವರ್ತೂರು ಪ್ರಕಾಶ್]
ಲಕ್ಷ್ಮೀಕಾಂತ್ ಅವರಿಗೆ ಕರೆ ಮಾಡಿ ನಿಮ್ಮ ಇಲಾಖೆಯವರು ಲಾರಿ ಹಿಡಿದಿದ್ದಾರೆ, ಬಿಡಿಸಿಕೊಡಿ ಎಂದು ಹೇಳಿದ್ದಾರೆ. ಮೊಬೈಲ್ ಫೋನ್ ಅನ್ನು ಪಿಎಸ್‌ಐ ಚೈತನ್ಯ ಅವರಿಗೆ ನೀಡಿದ್ದಾರೆ. ಲಾರಿ ಹಿಡಿದ ಸ್ಥಳದಲ್ಲಿ ಎಸ್ಪಿ ಇದ್ದಾರೆ ಎಂದು ತಿಳಿಯದ ಲಕ್ಷ್ಮೀಕಾಂತ್ ಚೈತನ್ಯ ಅವರಿಗೆ ಲಾರಿ ಬಿಟ್ಟು ಕಳಿಸುವಂತೆ ಸೂಚನೆ ನೀಡಿದ್ದಾರೆ.
ಎಸ್ಪಿ ಅವರು ಫೋನ್ ತೆಗೆದುಕೊಂಡು ಮಾತನಾಡಿದ ತಕ್ಷಣ ಗಾಬರಿಗೊಂಡ ಲಕ್ಷ್ಮೀಕಾಂತ್ ಕರೆ ಕಟ್ ಮಾಡಿದ್ದಾರೆ. ಲಕ್ಷ್ಮೀಕಾಂತ್ ಮರಳು ಮಾಫಿಯಾದೊಂದಿಗೆ ಕೈ ಜೋಡಿಸಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದ್ದರಿಂದ ಅವರನ್ನು ಅಮಾನತುಗೊಳಿಸಿ ಎಸ್ಪಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications