ಉತ್ತರ ಪ್ರದೇಶದ ಕಾಡಿಗೆ ತೆರಳಿದ ಸಕ್ರೆಬೈಲಿನ ಸೂರ್ಯ ಆನೆ
ಶಿವಮೊಗ್ಗ, ನವೆಂಬರ್, 02: ಸಕ್ರೆಬೈಲು ಆನೆ ಬಿಡಾರದ ಸೂರ್ಯ ಆನೆಯನ್ನು ಉತ್ತರ ಪ್ರದೇಶದ ಹುಲಿ ಮೀಸಲು ಅರಣ್ಯಕ್ಕೆ ವರ್ಗಾಯಿಸಲಾಗುತ್ತಿದೆ. ಬಿಡಾರದ ಸಿಬ್ಬಂದಿ ಸೂರ್ಯನೊಂದಿಗೆ ಕೊನೆಯ ಫೋಟೊ ಕ್ಲಿಕ್ಕಿಸಿಕೊಂಡು ಭಾವನಾತ್ಮಕವಾಗಿ ಬೀಳ್ಕೊಡುಗೆ ನೀಡಿದರು.
ಸೂರ್ಯ ಆನೆಯನ್ನು ಉತ್ತರ ಪ್ರದೇಶದ ಪಿಲಿಬಿಟ್ ಹುಲಿ ಮೀಸಲು ಅರಣ್ಯಕ್ಕೆ ವರ್ಗಾಯಿಸಲಾಗುತ್ತಿದೆ. ಈಗಾಗಲೇ ಉತ್ತರ ಪ್ರದೇಶದಿಂದ ಲಾರಿ ಆಗಮಿಸಿದ್ದು, ಸೂರ್ಯನನ್ನು ಲಾರಿ ಹತ್ತಿಸಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ಸೂರ್ಯ ಆನೆಯನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ. ಈ ಹಿನ್ನೆಲೆ ಸಕ್ರೆಬೈಲು ಬಿಡಾರದ ಸಿಬ್ಬಂದಿ ಸೂರ್ಯನಿಗೆ ಬೀಳ್ಕೊಡುಗೆ ನೀಡಿದರು. ಆನೆಯ ಮಾವುತ, ಕಾವಾಡಿ, ಬಿಡಾರದ ಉಳಿದ ಸಿಬ್ಬಂದಿ ಆನೆಯೊಂದಿಗೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಸುರಕ್ಷಿತವಾಗಿ ಕಳುಹಿಸಿಕೊಟ್ಟಿದ್ದಾರೆ.
12 ವರ್ಷದ ಸೂರ್ಯ ಆನೆಯು ಸಕ್ರೆಬೈಲು ಬಿಡಾರದ ನೇತ್ರಾಳ ಮಗನಾಗಿದ್ದಾನೆ. ಬಿಡಾರದ ಸಿಬ್ಬಂದಿಯೊಂದಿಗೆ ಚನ್ನಾಗಿ ಹೊಂದಿಕೊಂಡಿದ್ದ ಈ ಆನೆ ಇನ್ಮುಂದೆ ಉತ್ತರ ಪ್ರದೇಶದ ಪಿಲಿಬಿಟ್ ಕಾಡಿನಲ್ಲೇ ಕಳೆಯಬೇಕಾಗುತ್ತದೆ. ಉತ್ತರ ಪ್ರದೇಶ ಸರ್ಕಾರ ಆನೆಗಳನ್ನು ಕಳುಹಿಸಲು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆ ವಿವಿಧೆಡೆಯ ಆಯ್ದ ಕೆಲವು ಆನೆಗಳನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗುತ್ತಿದೆ.

ರಾಜ್ಯಕ್ಕೆ ಆಗಮಿಸಿದ ಉ.ಪ್ರದೇಶ ಅರಣ್ಯ ಇಲಾಖೆ
ಆನೆಗಳನ್ನು ಆಯ್ಕೆ ಮಾಡಲು ಉತ್ತರ ಪ್ರದೇಶದಿಂದಲೇ ವೈದ್ಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ತಂಡ ರಾಜ್ಯಕ್ಕೆ ಆಗಮಿಸಿತ್ತು. ವಿವಿಧ ಬಿಡಾರಗಳಿಗೆ ತೆರಳಿ ನಾಲ್ಕು ಆನೆಗಳನ್ನು ಆಯ್ಕೆ ಮಾಡಿದ್ದಾರೆ. ಉತ್ತರ ಪ್ರದೇಶದ ಹವಾಮಾನಕ್ಕೆ ಹೊಂದಿಕೊಳ್ಳಲು ಸಾಧ್ಯವಿರುವ ಆನೆಗಳನ್ನು ಗುರುತಿಸಲಾಗಿತ್ತು. ಅದರಂತೆಯೇ ಸರ್ಕಾರಗಳ ನಡುವೆ ಒಪ್ಪಂದವಾಗಿದ್ದು, ಆನೆಗಳನ್ನು ವರ್ಗಾಯಿಸಲಾಗುತ್ತಿದೆ. ಸಕ್ರೆಬೈಲಿನ ಸೂರ್ಯ, ದುಬಾರೆಯ ರಾಮಪುರ ಕ್ಯಾಂಪ್ ಮತ್ತು ಕೊಡಗಿನ ತಿತಿಮತಿಯ ಇನ್ನು ಮೂರು ಆನೆಗಳು ಉತ್ತರ ಪ್ರದೇಶದತ್ತ ಹೊರಟಿವೆ.

ಆನೆ ಸಾಗುವ ಮಾರ್ಗದ ಪರಿಶೀಲನೆ
ರಾಜ್ಯದಿಂದ ಹೊರಟಿರುವ ಆನೆಗಳು ಉತ್ತರ ಪ್ರದೇಶದ ಪಿಲಿಬಿಟ್ ಆರಣ್ಯ ತಲುಪುವ ತನಕ ಅನೇಕ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆನೆ ಸಾಗುವ ಮಾರ್ಗವನ್ನು ಈಗಾಗಲೇ ಗುರುತಿಸಲಾಗಿದೆ. ಆನೆಗಳು ಇರುವ ಲಾರಿ ತೆರಳುತ್ತಿದ್ದಂತೆ ಆಯಾ ಜಿಲ್ಲೆಯ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಎಸ್ಕಾರ್ಟ್ ಮಾಡಬೇಕಿದೆ. ನಿತ್ಯ 250 ಕಿ.ಮೀ ಮಾತ್ರ ಆನೆಯನ್ನು ಕೊಂಡೊಯ್ಯಬೇಕಿದೆ. ನಿತ್ಯ ಉಳಿದುಕೊಳ್ಳಲು ಆಯಾ ಜಿಲ್ಲೆಯಲ್ಲಿ ನಿಗದಿತ ಸ್ಥಳವನ್ನು ಒದಗಿಸಬೇಕಿದೆ. ಇನ್ನು ಪ್ರತಿ ಮೂರು ಗಂಟೆಗೆ ಒಮ್ಮೆ ಆನೆಗೆ ಸ್ನಾನ ಮಾಡಿಸಬೇಕಾಗುತ್ತದೆ.

2017ರಲ್ಲಿ ರಾಜ್ಯದಿಂದ ಆನೆಗಳ ವರ್ಗಾವಣೆ
ಸಕ್ರೆಬೈಲಿನ ವೈದ್ಯಾಧಿಕಾರಿ ಡಾ. ವಿನಯ್, ಕಾವಾಡಿಗಳಾದ ರಾಜೇಶ್, ಅಮ್ಜದ್ ಅವರು ಸೂರ್ಯ ಅನೆಯೊಂದಿಗೆ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದಾರೆ. ಅಲ್ಲಿಯ ವಾತಾವರಣಕ್ಕೆ ಆನೆ ಹೊಂದಿಕೊಂಡ ಬಳಿಕ ಇವರು ಹಿಂತಿರುಗಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉತ್ತರ ಪ್ರದೇಶದ ಆರಣ್ಯಗಳಿಗೆ ರಾಜ್ಯದ ಆನೆಗಳ ವರ್ಗಾವಣೆ ಇದೆ ಮೊದಲೇನಲ್ಲ. 2017ರಲ್ಲಿ ರಾಜ್ಯದ ವಿವಿಧ ಬಿಡಾರಗಳಿಂದ 10 ಆನೆಗಳನ್ನು ಅಲ್ಲಿಯ ದೂದ್ವ ರಾಷ್ಟ್ರೀಯ ಉದ್ಯಾನಕ್ಕೆ ಆನೆಗಳನ್ನು ಕಳುಹಿಸಲಾಗಿತ್ತು. ಆಗ ಸಕ್ರೆಬೈಲು ಬಿಡಾರದಿಂದ 4 ಆನೆಗಳನ್ನು ಕಳುಹಿಸಲಾಗಿತ್ತು.

ಸಕ್ರೈಬೈಲಿಗೆ ಹೋಗುವ ಮಾರ್ಗ
ಶಿವಮೊಗ್ಗದಿಂದ ಸುಮಾರು 14 ಕಿಲೋ ಮೀಟರ್ ದೂರದಲ್ಲಿ ಶಿವಮೊಗ್ಗ-ತೀರ್ಥಹಳ್ಳಿ ರಸ್ತೆಯಲ್ಲಿ ಸಕ್ರೈಬೈಲು ಆನೆ ಶಿಬಿರ ಇದೆ. ಇದು ಆನೆಗಳ ಆಶ್ರಯ ತಾಣ ಆಗಿದೆ. ಗಾಜನೂರು ಬಳಿ ಇರುವ ಇದು ರಾಜ್ಯದ ಎರಡನೇ ಅತೀ ದೊಡ್ಡ ಆನೆ ಶಿಬಿರ ಅಂತಲೂ ಪ್ರಸಿದ್ಧಿ ಪಡೆದಿದೆ. ಇಲ್ಲಿ ಸಾಕಷ್ಟು ಆನೆಗಳು ಆಶ್ರಯ ಪಡೆದಿವೆ. ಈ ಸುಂದರ ಆನೆಗಳ ಆಶ್ರಯ ತಾಣ ತುಂಗಾ ನದಿಯ ದಡದಲ್ಲಿದೆ. ಪೌಷ್ಠಿಕಾಂಶಗಳ ಕೊರತೆಯಿಂದ ಬಳಲುತ್ತಿರುವ ಆನೆಗಳಿಗೆ ಇದು ಸೂಕ್ತ ನೆಲೆಯಾಗಿದ್ದು, ಇದನ್ನು ಅರಣ್ಯ ಇಲಾಖೆ ನಿರ್ವಹಿಸುತ್ತಿದೆ. ಇಲ್ಲಿ ತರಬೇತಿ ಪಡೆದ ಮಾವುತರು ಇಲ್ಲಿನ ಆನೆಗಳನ್ನು ನೋಡಿಕೊಳ್ಳುತ್ತಾರೆ.
ಸಕ್ರೆಬೈಲು ಬರೀ ಆನೆಗಳಿಗೆ ಮಾತ್ರ ನೆಚ್ಚಿನ ತಾಣವಲ್ಲ. ಪ್ರವಾಸಿಗರಿಗೂ ಬಹಳ ಇಷ್ಟವಾಗುವಂತಹ ಸ್ಥಳವಾಗಿದೆ. ಆನೆಗಳ ಬಗ್ಗೆ ಅಧ್ಯಯನ ಮಾಡಬೇಕು ಎಂಬ ಉತ್ಸಾಹಿಗಳಿಗೂ ಇದು ಇಷ್ಟವಾಗುವಂತಹ ತಾಣವಾಗಿದೆ. ಇಲ್ಲಿ ಆನೆಗಳ ನಡವಳಿಕೆ, ಅವುಗಳ ಬದುಕು, ವರ್ತನೆ, ಬುದ್ಧಿವಂತಿಕೆ ಎಲ್ಲವನ್ನೂ ಹತ್ತಿರದಿಂದ ನೋಡಬಹುದು. ಬೆಳಗ್ಗೆ ಸಮಯದಲ್ಲಿ ಆನೆಗಳಿಗೆ ಆಹಾರ ಕೊಡುವ ಕ್ಷಣವನ್ನೂ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ. ಶಿಬಿರದಲ್ಲಿಯೇ ಆನೆಗಳಿಗೆ ಆಹಾರ ತಯಾರಿಸಲಾಗುತ್ತದೆ.












Click it and Unblock the Notifications