ಮಲೆನಾಡಲ್ಲಿ ಮಂಗನ ಕಾಯಿಲೆ ಆತಂಕ; ಕೃಷಿಕ ಸಾವು
ಶಿವಮೊಗ್ಗ, ಮಾರ್ಚ್ 15 : ಒಂದು ಕಡೆ ಕೊರೊನಾ ಭೀತಿ ಮತ್ತೊಂದು ಕಡೆ ಮಲೆನಾಡಲ್ಲಿ ಮಂಗನ ಕಾಯಿಲೆಯ ಭೀತಿ ಎದುರಾಗಿದೆ. ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ಸಾಗರದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಸಾಗರ ತಾಲೂಕಿನ ಕಸಗುಪ್ಪೆ ಹಾಲ್ ತೋಟ ಗ್ರಾಮದ ನಿವಾಸಿ ಕೋಮರಾಜ್ ಜೈನ್ (40) ಎಂದು ಗುರುತಿಸಲಾಗಿದೆ. ಮೊದಲು ಸಾಗರದ ಸರ್ಕಾರಿ ಆಸ್ಪತ್ರೆಗೆ ಕೋಮರಾಜ್ ದಾಖಲು ಮಾಡಲಾಗಿತ್ತು. ರಕ್ತ ಪರೀಕ್ಷೆ ಮಾಡಿದಾಗ ಮಂಗನ ಕಾಯಿಲೆ ಇರುವುದು ಪತ್ತೆಯಾಗಿತ್ತು.
ಕೃಷಿಕರಾಗಿದ್ದ ಕೋಮರಾಜ್ ಜೈನ್ ಕಳೆದ ಒಂದು ವಾರದಿಂದ ಜ್ವರ ಹಾಗೂ ದೊಡ್ಡ ಕರುಳು ಬೇನೆಯಿಂದ ಬಳಲುತ್ತಿದ್ದರು. ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು.

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟವರ ಸಂಖ್ಯೆ 3. ಸಾಗರ ತಾಲೂಕಿನಲ್ಲಿ ಮಂಗನ ಕಾಯಿಲೆ ಆತಂಕ ಹೆಚ್ಚಿದ್ದು, ಮುಂಜಾಗ್ರತಾ ಕ್ರಮವಾಗಿ ಕೆಎಫ್‌ಡಿ ಲಸಿಕೆ ಹಾಕಲಾಗುತ್ತಿದೆ.
ಮಾರ್ಚ್ 10ರಂದು ಸಾಗರ ತಾಲೂಕಿನ ಮಂಡವಳ್ಳಿ ಗ್ರಾಮದ ಚೌಡಪ್ಪ (33) ಎಂಬುವವರು ಮಂಗನ ಕಾಯಿಲೆಯಿಂದ ಮೃತಪಟ್ಟಿದ್ದರು. ಗ್ರಾಮದಲ್ಲಿ ಲಸಿಕೆ ಹಾಕುತ್ತಿದ್ದರೂ ಚೌಡಪ್ಪ ಲಸಿಕೆ ಬೇಡ ಎಂದು ನಿರಾಕರಿಸಿದ್ದರು.
ಸಾಗರ ತಾಲೂಕಿನ ಮಂಡವಳ್ಳಿ ಗ್ರಾಮದಲ್ಲಿ ಕಳೆದ 5 ತಿಂಗಳಿನಿಂದ 14 ಮಂಗಗಳು ಸಾವನ್ನಪ್ಪಿವೆ ಎಂಬ ವರದಿ ಬಂದಿತ್ತು. ಗ್ರಾಮದ ಸುತ್ತಮುತ್ತಲಿನ 6 ಜನರಿಗೆ ಮಂಗನಕಾಯಿಲೆ ಸೋಂಕು ತಗುಲಿರುವ ಶಂಕೆ ಇದ್ದು, ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ಜಿಲ್ಲಾ ಆರೋಗ್ಯಾಧಿಕಾರಿಗಳು ಚೌಡಪ್ಪ ಮಂಗನ ಕಾಯಿಲೆ ಸೋಂಕಿನಿಂದ ಮೃತಪಟ್ಟಿಲ್ಲ ಎಂದು ಹೇಳಿದ್ದಾರೆ. ಮಂಗಗಳು ಸತ್ತಿರುವುದು ಕಂಡು ಬಂದರೆ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.












Click it and Unblock the Notifications