ಭದ್ರಾವತಿಯಲ್ಲಿ ಚಾಕು ಇರಿತ ಪ್ರಕರಣ: 6 ಯುವಕರ ಬಂಧನ
ಶಿವಮೊಗ್ಗ, ನವೆಂಬರ್, 16; ಪಟ್ಟಣದಲ್ಲಿ ಭಾನುವಾರ ಸಂಜೆ ಯುವಕರ ನಡುವೆ ಗಲಾಟೆ, ಚಾಕು ಇರಿತದ ಬಗ್ಗೆ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿತ್ತು. ಘಟನೆ ಸಂಬಂಧ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನವೆಂಬರ್ 13ರಂದು ಸಂಜೆ ಭದ್ರಾವತಿಯ ಜೂನಿಯರ್ ಕಾಲೇಜು ಬಳಿ ಜಹೀರ್, ಅಸ್ಲಂ ಮತ್ತು ಹರೀಶ್, ಗೌತಮ್ ಅಲಿಯಾಸ್ ಅಪ್ಪು ಎಂಬುವವರ ಮಧ್ಯೆ ಗಲಾಟೆ ಆಗಿತ್ತು. ಈ ಸಂಬಂಧ ಜಹೀರ್ ಮತ್ತು ಹರೀಶ್ ಪ್ರತ್ಯೇಕವಾಗಿ ದೂರು ನೀಡಿದ್ದರು. ಹಾಗೂ ಪೊಲೀಸರು ಕೂಡ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಸಿಕೊಂಡಿದ್ದರು.
ಜಹೀರ್ ನೀಡಿದ ದೂರಿನ ಅನ್ವಯ ನೆಹರೂ ನಗರದ ಹರೀಶ್ (22) ಮತ್ತು ಗೌತಮ್ ಅಲಿಯಾಸ್ ಅಪ್ಪು (22) ಎಂಬುವವರನ್ನು ಬಂಧಿಸಲಾಗಿದೆ. ಹಾಗೂ ಹರೀಶ್ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಹೊಸೂರು ಗ್ರಾಮದ ಜಹೀರ್ (27), ಎಕಿನ್ಸಾ ಕಾಲೋನಿಯ ಅಸ್ಲಾಂ ಅಲಿಯಾಸ್ ಅಸ್ಲಿ (29) ಎಂಬುವವರನ್ನು ಬಂಧಿಸಲಾಗಿದೆ.

ಚಾಕು ಇರಿದವರ ಬಂಧನ
ಇನ್ನು ಗಲಾಟೆ ಬಳಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಜಹೀರ್‌ನನ್ನು ನೋಡಲು ಹೋಗಿದ್ದ ರಿಜ್ವಾನ್ ಎಂಬಾತನಿಗೆ ಚಾಕುವಿನಿಂದ ಇರಿಯಾಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹೊಸಮನೆಯ ಮಂಜುನಾಥ್ (24) ಮತ್ತು ಅಶೋಕ್ (22) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಗರದಲ್ಲಿ ಎರಡು ಪ್ರತ್ಯೇಕ ಅಹಿತಕರ ಘಟನೆ
ಎರಡು ಪ್ರತ್ಯೇಕ ಅಹಿತಕರ ಘಟನೆಯಲ್ಲಿ ಭದ್ರಾವತಿಯಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು. ವಾಟ್ಸಪ್ ಸ್ಟೇಟಸ್ ವಿಚಾರವಾಗಿ ಜಗಳವಾಗಿದ್ದು, ಯುವಕನೊಬ್ಬನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಲಾಗಿತ್ತು. ಮತ್ತೊಂದೆಡೆ ಮತ್ತೊಬ್ಬ ಯುವಕನ ಕೈಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿತ್ತು.
ಮೊದಲನೇ ಗಲಾಟೆ ಪಟ್ಟಣದ ಗಾಂಧಿ ಸರ್ಕಲ್‌ನಲ್ಲಿ ಸಂಭವಿಸಿದ್ದು, ಹರೀಶ್, ಗೌತಮ್ ಮತ್ತು ಜಹೀರ್ ಎಂಬುವವರ ನಡುವೆ ಗಲಾಟೆ ಆಗಿತ್ತು. ಜಹೀರ್ ಸಾಮಾಜಿಕ ಜಾಲತಾಣದಲ್ಲಿ ಗೌತಮ್ ಎಂಬಾತನ ಸ್ಟೇಟಸ್‌ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದ ಎಂದು ತಿಳಿದುಬಂದಿತ್ತು. ಕಳೆದ ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈ ಹಿನ್ನೆಲೆ ಭಾನುವಾರ ರಾತ್ರಿ ಕಲ್ಲಿನಿಂದ ಹೊಡೆದುಕೊಳ್ಳಲಾಗಿದೆ ಎಂದು ತಿಳಿದುಬಂದಿತ್ತು. ಗೌತಮ್ ಮತ್ತು ಹರೀಶ್, ಜಹೀರ್ ಮೇಲೆ ಕಲ್ಲು ತೂರಿದ್ದಾರೆ. ಆಗ ಜಗಳ ಆಗಿದ್ದು, ಘಟನೆಯಲ್ಲಿ ಮೂವರು ಗಾಯಗೊಂಡಿದ್ದರು. ತಕ್ಷಣ ಗಾಯಗೊಂಡಿದ್ದ ಮೂವರನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹರೀಶ್, ಗೌತಮ್ ಮತ್ತು ಜಹೀರ್ ಬಹಳ ದಿನಗಳಿಂದ ಸ್ನೇಹಿತರಾಗಿದ್ದರು. ಇದು ಕೋಮು ಗಲಭೆಯಲ್ಲ. ತನಿಖೆ ನಡೆಯುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದರು.

ಇನ್ನೊಂದು ಘಟನೆ ಸರಕಾರಿ ಆಸ್ಪತ್ರೆ ಮುಂಭಾಗದಲ್ಲಿ ನಡೆದಿದ್ದು, ರಿಜ್ವಾನ್ ಎಂಬಾತನಿಗೆ ಚಾಕುವಿನಿಂದ ಚುಚ್ಚಿ ದುಷ್ಕರ್ಮಿಗಳು ಪರಾರಿ ಆಗಿದ್ದರು. ಯಾವ ಕಾರಣಕ್ಕಾಗಿ ಕೃತ್ಯ ಎಸಗಲಾಗಿದೆ ಎನ್ನುವುದು ಇನ್ನು ತಿಳಿದುಬಂದಿರಲಿಲ್ಲ. ಆದರೆ ಪೊಲೀಸರು ತನಿಖೆ ಕೈಗೊಂಡಿದ್ದರು. ಘಟನೆ ಬಳಿಕ ಆಸ್ಪತ್ರೆಯ ಬಳಿ ಸೇರಿದ್ದ ಉದ್ರಿಕ್ತ ಗುಂಪನ್ನು ಪೊಲೀಸರು ಚದುರಿಸಿದ್ದರು. ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.












Click it and Unblock the Notifications