ಅನ್ನ ಮಾಡುವ ವಿಚಾರದಲ್ಲಿ ಅತ್ತೆ-ಸೊಸೆ ಜಗಳ; ಅತ್ತೆಗೆ ಗಾಯ!
ಶಿವಮೊಗ್ಗ, ಆಗಸ್ಟ್ 24; ಅನ್ನ ಮಾಡುವ ವಿಚಾರವಾಗಿ ಅತ್ತೆ, ಸೊಸೆ ಮಧ್ಯೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಸೊಸೆ ಬಿಸಿ ಬಿಸಿ ಅನ್ನದ ತಿಳಿಯನ್ನು ಅತ್ತೆ ತಲೆ ಮೇಲೆ ಸುರಿದಿದ್ದಾಳೆ. ಸುಟ್ಟ ಗಾಯಗಳಿಂದಾಗಿ ಅತ್ತೆ ಆಸ್ಪತ್ರೆ ಸೇರಿದ್ದಾರೆ.
ಅತ್ತೆ ಜೊತೆಗಿನ ಜಗಳದಲ್ಲಿ ಬಿಸಿ ಬಿಸಿ ಅನ್ನದ ತಿಳಿ ಸುರಿದ ಸೊಸೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿದೆ. ಸಾಗರ ತಾಲೂಕು ಮುಳಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಮುಳಕೇರಿ ಗ್ರಾಮದ ನಿವಾಸಿ ಪಾರ್ವತಮ್ಮ (58) ಸುಟ್ಟ ಗಾಯಗಳಿಂದಾಗಿ ಸಾಗರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಸೊಸೆ ನೇತ್ರಾ ವಿರುದ್ಧ ಕ್ರಮ ಕೈಗೊಳ್ಳಲು ದೂರು ಕೊಡಲಾಗಿದೆ.

ಅನ್ನ ಮಾಡುವ ವಿಚಾರದಲ್ಲಿ ಕಿರಿಕ್; ಪಾರ್ವತಮ್ಮ ಸೊಸೆ ನೇತ್ರಾ ಅನ್ನಕ್ಕೆ ಇಟ್ಟಿದ್ದರು. ಇದನ್ನು ಗಮನಿಸಿದ ಪಾರ್ವತಮ್ಮ ತಾವು ಅನ್ನ ಮಾಡಿದ್ದು, ಮತ್ತೊಮ್ಮೆ ಯಾಕೆ ಇಟ್ಟಿದ್ದೀಯ? ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಪಾರ್ವತಮ್ಮ ಮತ್ತು ನೇತ್ರಾ ಮಧ್ಯೆ ಜಗಳವಾಗಿದೆ.
ಮಾತಿಗೆ ಮಾತು ಬೆಳೆದು ಇಬ್ಬರು ಕೋಪಗೊಂಡಿದ್ದಾರೆ. ನೇತ್ರಾ ಒಲೆ ಮೇಲೆ ಇರಿಸಿದ್ದ ಅನ್ನದ ಪಾತ್ರೆಯನ್ನು ತಂದು ಅದರಲ್ಲಿದ್ದ ಬಿಸಿ ಅನ್ನದ ತಿಳಿಯನ್ನು ಪಾರ್ವತಮ್ಮ ಮೇಲೆ ಸುರಿದಿದ್ದಾರೆ ಎಂದು ಆರೋಪಿಸಲಾಗಿದೆ.
ಬಿಸಿ ತಿಳಿಯನ್ನು ತಲೆ ಮೇಲಿಂದ ಸುರಿಯುತ್ತಿದ್ದಂತೆ ಪಾರ್ವತಮ್ಮ ಜೋರಾಗಿ ಕೂಗಿಕೊಂಡು ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ನೇತ್ರಾ ಅನ್ನ ಪಾತ್ರೆಯಿಂದಲೇ ಅತ್ತೆ ಪಾರ್ವತಮ್ಮಗೆ ತಲೆ ಮತ್ತು ಬೆನ್ನಿಗೆ ಗುದ್ದಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವೇಳೆ ಪಾರ್ವತಮ್ಮ ಮಕ್ಕಳು ಮತ್ತು ಸ್ಥಳೀಯರು ಬಂದು ರಕ್ಷಣೆ ಮಾಡಿದ್ದಾರೆ. ಸುಟ್ಟ ಗಾಯಗಳಾಗಿದ್ದ ಪಾರ್ವತಮ್ಮರನ್ನು ಕೂಡಲೇ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿದೆ. ಪಾರ್ವತಮ್ಮ ಅವರ ಮುಖ, ಕಣ್ಣುಗಳು, ಕೈಗಳು ಸೇರಿದಂತೆ ವಿವಿಧೆಡೆ ಸುಟ್ಟ ಗಾಯವಾಗಿದೆ.
ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೊಸೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾರ್ವತಮ್ಮ ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications