ಶಿಕಾರಿಪುರ ಕಾಂಗ್ರೆಸ್ ಬಂಡಾಯ; ಬಿ. ವೈ. ವಿಜಯೇಂದ್ರ ಹಾದಿ ಸುಗಮ?
ಶಿವಮೊಗ್ಗ, ಏಪ್ರಿಲ್ 26; ಈ ಬಾರಿಯ ಚುನಾವಣೆಯಲ್ಲಿ ಬಿ. ವೈ. ವಿಜಯೇಂದ್ರ ಕಣಕ್ಕಿಳಿಯುವ ಕ್ಷೇತ್ರ ಯಾವುದು? ಎಂಬುದು ಬಿಜೆಪಿ ಪಟ್ಟಿ ಬಿಡುಗಡೆಗೆ ಮುನ್ನ ಬಹು ಚರ್ಚಿತ ವಿಷಯವಾಗಿತ್ತು. ಹಲವು ಜನರ ನಿರೀಕ್ಷೆಯಂತೆ ಬಿ. ಎಸ್. ಯಡಿಯೂರಪ್ಪ ಪ್ರತಿನಿಧಿಸುವ ಶಿಕಾರಪುರದಿಂದ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಯಲ್ಲಿ ಅವರ ಹಾದಿ ಸುಗಮವಾಗಿದೆಯೇ?.
ಶಿಕಾರಿಪುರದ ಈ ಬಾರಿಯ ಚುನಾವಣಾ ಚಿತ್ರಣ ಗಮನಿಸಿದರೆ ಬಿ. ವೈ. ವಿಜಯೇಂದ್ರ ಗೆಲುವು ಸುಲಭವಾಗಿದೆ. ಅದಕ್ಕೆ ಕಾರಣ ಜೆಡಿಎಸ್ ಅಭ್ಯರ್ಥಿ ಇಲ್ಲದಿರುವುದು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿರುವುದು. ವಿಜಯೇಂದ್ರ 60 ಸಾವಿರಕ್ಕೂ ಅಧಿಕ ಮತಗಳಲ್ಲಿ ಗೆಲ್ಲಬೇಕು ಎಂಬುದು ಪಕ್ಷದ ನಾಯಕರ ಲೆಕ್ಕಾಚಾರವಾಗಿದೆ.

ಕಾಂಗ್ರೆಸ್ ಶಿಕಾರಿಪುರ ಕ್ಷೇತ್ರಕ್ಕೆ ಅಭ್ಯರ್ಥಿ ಪ್ರಕಟಿಸುವ ಮುನ್ನವೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದ ಮುಂದೆ ಪ್ರತಿಭಟನೆ ನಡೆದಿತ್ತು. ಬಿಜೆಪಿ ಜೊತೆ ಒಪ್ಪಂದ ಮಾಡಿಕೊಂಡು ಪ್ರಬಲ ಅಭ್ಯರ್ಥಿ ಕಣಕ್ಕಿಳಿಸುತ್ತಿಲ್ಲ ಎಂದು ಆರೋಪಿಸಲಾಗಿತ್ತು. ಕಾಂಗ್ರೆಸ್ ಪಕ್ಷ ಗೋಣಿ ಮಾಲತೇಶ್ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಕ್ಷೇತ್ರದ ಟಿಕೆಟ್‌ಗಾಗಿ ಎಸ್. ಪಿ. ನಾಗರಾಜ ಗೌಡ ಸಹ ಪ್ರಬಲ ಆಕಾಂಕ್ಷಿಯಾಗಿದ್ದರು.
ಬಂಡಾಯದ ಬಿಸಿ ತಟ್ಟಿದೆ; ಸಿದ್ದರಾಮಯ್ಯ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದ ಶಿಕಾರಿಪುರದ ಕಾಂಗ್ರೆಸ್ ಕಾರ್ಯಕರ್ತರು ಎಸ್. ಪಿ. ನಾಗರಾಜ ಗೌಡಗೆ ಟಿಕೆಟ್ ನೀಡಬೇಕು ಗೋಣಿ ಮಾಲತೇಶ್ ಅಭ್ಯರ್ಥಿಯಾದರೆ ಪಕ್ಷಕ್ಕೆ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ ಎಂದು ಒತ್ತಾಯಿಸಿದ್ದರು. ಕೆಲವು ಕಾರ್ಯಕರ್ತರು ಗೋಣಿ ಮಾಲತೇಶ್‌ಗೆ ಟಿಕೆಟ್ ನೀಡಿದರೆ ಅವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಪಕ್ಷ ಅವರಿಗೆ ಟಿಕೆಟ್ ನೀಡಿದೆ.

ಗೋಣಿ ಮಾಲತೇಶ್ ಅಭ್ಯರ್ಥಿಯಾಗಿಸುವ ಮೂಲಕ ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ರಾಜಕೀಯ ನಡೆದಿದೆ ಎಂದು ಆರೋಪ ಮಾಡಿರುವ ಎಸ್. ಪಿ. ನಾಗರಾಜ ಗೌಡ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪಕ್ಷದ ನಾಯಕರ ಮನವೊಲಿಕೆಗೆ ಬಗ್ಗದೇ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ. ಇದು ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆ ಉಂಟು ಮಾಡಲಿದೆಯೇ? ಕಾದು ನೋಡಬೇಕಿದೆ.
"ವ್ಯಕ್ತಿಗಿಂತ ಪಕ್ಷ ಮುಖ್ಯ. ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾದ ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು. ಸಿದ್ದರಾಮಯ್ಯ ಜನಪರ ಆಡಳಿತ ನೀಡಿದ್ದಾರೆ. ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿರುವ ಪಕ್ಷವು ಹಲವು ಯೋಜನೆಗಳನ್ನು ನೀಡಲು ಮುಂದಾಗಿದೆ. ಕಾಂಗ್ರೆಸ್‌ಗೆ ಬೆಂಬಲ ನೀಡಿ ನನ್ನನ್ನು ಗೆಲ್ಲಿಸಬೇಕು" ಎಂದು ಗೋಣಿ ಮಾಲತೇಶ್ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದಾರೆ.
ಎಸ್. ಪಿ. ನಾಗರಾಜ ಗೌಡ, "ಡಿ. ಕೆ. ಶಿವಕುಮಾರ್ ಕರೆ ಮಾಡಿ ಬಿಫಾರಂ ತೆಗೆದುಕೊಂಡು ಹೋಗು ಎಂದು ಹೇಳಿದ್ದರು. ಕೊನೆ ಕ್ಷಣದಲ್ಲಿ ಎಲ್ಲವೂ ಬದಲಾವಣೆಯಾಗಿದೆ. ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಪ್ರತಿ ಚುನಾವಣೆ ಮುಗಿದ ಬಳಿಕ ಗೋಣಿ ಮಾಲತೇಶ್ ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ. ರಾಜಾಹುಲಿ ಎಂದು ಹೇಳಿಕೊಳ್ಳುವ ಯಡಿಯೂರಪ್ಪ ನನಗೆ ಟಿಕೆಟ್ ತಪ್ಪಿಸಲು ಕುತಂತ್ರ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರ ಜೊತೆ ಕೈ ಜೋಡಿಸಿ ಟಿಕೆಟ್ ತಪ್ಪಿಸಿದ್ದಾರೆ" ಎಂದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡಿದ್ದಾರೆ.
ಶಿಕಾರಿಪುರದ ಕುರಿತು; 1962ರಲ್ಲಿ ರಚನೆಯಾದ ಕ್ಷೇತ್ರ ಶಿಕಾರಿಪುರ. 1983ರಲ್ಲಿ ಬಿ. ಎಸ್. ಯಡಿಯೂರಪ್ಪ ಶಿಕಾರಪುರದಲ್ಲಿ ಮೊದಲ ಬಾರಿಗೆ 40,687 ಮತಗಳನ್ನು ಪಡೆದು ಕಾಂಗ್ರೆಸ್‌ನ ಕೆ. ಯಂಕಟಪ್ಪ (20,559) ಸೋಲಿಸಿದರು. ಬಳಿಕ 1985, 1989 1994ರಲ್ಲಿ ಗೆದ್ದರು. ಆದರೆ 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಹಾಲಿಂಗಪ್ಪ 55,852 ಮತಗಳನ್ನು ಪಡೆದು 7561 ಮತಗಳ ಅಂತರದಲ್ಲಿ ಯಡಿಯೂರಪ್ಪ ಸೋಲಿಸಿದ್ದು ಈಗ ಇತಿಹಾಸ.
ಬಳಿಕ 2004, 2008, 2013 (ಕೆಜೆಪಿ) ಮತ್ತು 2018ರ ಚುನಾವಣೆಯಲ್ಲಿ ಬಿ. ಎಸ್. ಯಡಿಯೂರಪ್ಪ ಶಿಕಾರಪುರದಲ್ಲಿ ಗೆಲುವು ಕಂಡಿದ್ದಾರೆ. 2008ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಕಾಂಗ್ರೆಸ್‌ನಿಂದ ಯಡಿಯೂರಪ್ಪಗೆ ಎದುರಾಳಿಯಾಗಿದ್ದರು. ಆಗಲೂ ಸಹ ಯಡಿಯೂರಪ್ಪ 45,927 ಮತಗಳ ಅಂತರದಲ್ಲಿ ಗೆದ್ದು ಬಂದಿದ್ದರು.
2018ರಲ್ಲಿ ಯಡಿಯೂರಪ್ಪ ವಿರುದ್ಧ ಗೋಣಿ ಮಾಲತೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 51,586 ಮತಗಳನ್ನು ಪಡೆದಿದ್ದರು. ಯಡಿಯೂರಪ್ಪ ಗೆದ್ದಿದ್ದು 35,397 ಮತಗಳ ಅಂತರದಲ್ಲಿ. ಆದರೆ ಈ ಬಾರಿ ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅವರು ಮೊದಲೇ ಘೋಷಣೆ ಮಾಡಿದಂತೆ ಶಿಕಾರಿಪುರದಿಂದ ವಿಜಯೇಂದ್ರ ಕಣಕ್ಕಿಳಿಯಲು ಹೈಕಮಾಂಡ್ ಒಪ್ಪಿಗೆ ನೀಡಿದೆ.












Click it and Unblock the Notifications