ಶಿವಮೊಗ್ಗ ರಾಜಕೀಯ; ಸೊರಬ, ಸಾಗರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ!
ಶಿವಮೊಗ್ಗ, ಏಪ್ರಿಲ್ 14; ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅವರಿಲ್ಲದೇ ಈ ಬಾರಿಯ ಚುನಾವಣೆಯನ್ನು ಶಿವಮೊಗ್ಗದಲ್ಲಿ ಬಿಜೆಪಿ ಎದುರಿಸುತ್ತಿದೆ. ಈಗಾಗಲೇ ಶಿವಮೊಗ್ಗ ನಗರ ಬಿಟ್ಟು ಜಿಲ್ಲೆಯ ಉಳಿದ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ರಾಜ್ಯದಲ್ಲಿ ಮೇ 10ರಂದು ವಿಧಾನಸಭೆ ಚುನಾವಣೆ ನಡೆಯಲಿದೆ.
ಈ ಬಾರಿಯ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಹಾಲಿ ಶಾಸಕ ಹರತಾಳು ಹಾಲಪ್ಪ, ಸೊರಬದಲ್ಲಿ ಕುಮಾರ್ ಬಂಗಾರಪ್ಪಗೆ ಬಿಜೆಪಿ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿತ್ತು. ಆದರೆ ಮೊದಲ ಪಟ್ಟಿಯಲ್ಲಿಯೇ ಬಿಜೆಪಿ ಕ್ಷೇತ್ರಕ್ಕೆ ಹಾಲಿ ಶಾಸಕರೇ ಅಭ್ಯರ್ಥಿಗಳು ಎಂದು ಘೋಷಣೆ ಮಾಡಿದೆ. ಇದು ಈಗ ಪಕ್ಷಕ್ಕೆ ಸಂಕಷ್ಟ ತಂದಿದೆ.

ಸಾಗರ ಕ್ಷೇತ್ರದಲ್ಲಿ ಬ್ರಾಹ್ಮಣ ವೀರಶೈವ ಒಕ್ಕೂಟ ಮತ್ತು ಸೊರಬದಲ್ಲಿ ನಮೋ ವೇದಿಕೆಯ ಅಭ್ಯರ್ಥಿಗಳನ್ನು ಬಿಜೆಪಿ ಅಭ್ಯರ್ಥಿಗಳ ಎದುರಾಳಿಯಾಗಿ ಕಣಕ್ಕಿಳಿಸಲು ತೀರ್ಮಾನ ಮಾಡಲಾಗಿದೆ. ನಮೋ ವೇದಿಕೆ ಹೋರಾಟಕ್ಕೆ ಸಾಗರದ ಪ್ರಾಂತೀಯ ಬ್ರಾಹ್ಮಣ, ವೀರಶೈವ ಒಕ್ಕೂಟ ಬೆಂಬಲ ನೀಡಿದೆ. ಇದರಿಂದಾಗಿ ಬಿಜೆಪಿ ಅಭ್ಯರ್ಥಿಗಳ ಮತಗಳು ವಿಭಜನೆಗೊಳ್ಳುವ ಭೀತಿ ಎದುರಾಗಿದೆ.
ಈ ಬಾರಿಯ ಚುನಾವಣೆಗೆ ಈಗಾಗಲೇ ಚುನಾವಣಾ ಅಧಿಸೂಚನೆ ಪ್ರಕಟವಾಗಿದೆ. ಏಪ್ರಿಲ್ 20ರ ತನಕ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶವಿದೆ. ಸೊರಬದಲ್ಲಿ ಕುಮಾರ್ ಬಂಗಾರಪ್ಪ ವಿರುದ್ಧ ನಮೋ ವೇದಿಕೆಯಿಂದ ಮಡಿವಾಳ ಮಾಚಿದೇವ ನಿಗಮದ ಅಧ್ಯಕ್ಷ ಡಾ. ರಾಜು ತಲ್ಲೂರು ಅಥವ ಬಿಜೆಪಿಯ ಹಿರಿಯ ಮುಖಂಡ ದಿವಾಕರ ಭಾವೆ ಕಣಕ್ಕಿಳಿಸಲು ಚರ್ಚೆ ನಡೆಸಿದೆ.

ಸಾಗರಲ್ಲಿ ಹಾಲಿ ಬಿಜೆಪಿ ಶಾಸಕ ಹರತಾಳು ಹಾಲಪ್ಪ ವಿರುದ್ಧ ಯಾರನ್ನು ಕಣಕ್ಕಿಳಿಸಬೇಕು ಎಂದು ಪ್ರಾಂತೀಯ ಬ್ರಾಹ್ಮಣ, ವೀರಶೈವ ಒಕ್ಕೂಟ ಎರಡು ಮೂರು ದಿನದಲ್ಲಿ ತೀರ್ಮಾನ ಕೈಗೊಳ್ಳಲಿದೆ. ಬಿಜೆಪಿ ಸಿದ್ಧಾಂತವನ್ನು ತುಳಿದ ವ್ಯಕ್ತಿಗೆ ಮತ್ತೆ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿದೆ ಎಂದು ಒಕ್ಕೂಟ ಬಿಜೆಪಿ ಅಭ್ಯರ್ಥಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಪಕ್ಷ ಸೇರ್ಪಡೆಗೆ ವಿರೋಧ; ಪ್ರಾಂತೀಯ ಬ್ರಾಹ್ಮಣ, ವೀರಶೈವ ಒಕ್ಕೂಟ ಶಾಸಕ ಹರತಾಳು ಹಾಲಪ್ಪ ಬ್ರಾಹ್ಮಣ ಮತ್ತು ವೀರಶೈವ ಸಮಾಜದವರಿಗೆ ಏನೇನು ತೊಂದರೆ ಕೊಟ್ಟಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇವೆ. ಬುಧವಾರ ಶಾಸಕರು ಪಕ್ಷದ ತತ್ವ, ಸಿದ್ದಾಂತದ ವಿರುದ್ಧ ಕೆಲಸ ಮಾಡಿದ ಮೂವರನ್ನು ತರಾತುರಿಯಲ್ಲಿ ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಈ ರೀತಿಯ ಓಲೈಕೆ ಕ್ರಮವನ್ನು ಪ್ರಾಂತೀಯ ಬ್ರಾಹ್ಮಣ, ವೀರಶೈವ ಒಕ್ಕೂಟ ಮತ್ತು ಬಿಜೆಪಿ ಕಾರ್ಯಕರ್ತರು ಖಂಡಿಸುತ್ತಾರೆ ಎಂದು ಒಕ್ಕೂಟ ಹೇಳಿದೆ.
ಸಾಗರ ನಗರದ ಅಭಿವೃದ್ಧಿಗೆ ಕಳೆದ 5 ವರ್ಷಗಳಲ್ಲಿ ಸಂಘ ಪರಿವಾರ ಹಲವಾರು ಸಲಹೆ, ಸೂಚನೆ ನೀಡಿದೆ. ಆದರೆ ಇವುಗಳನ್ನು ಶಾಸಕರು ಬೆಂಬಲಿಸದಿರುವುದು ಬೇಸರ ತಂದಿದೆ. ಅಲ್ಲದೇ ಹಿಂದುತ್ವದ ಆಲೋಚನಾ ಕ್ರಮವನ್ನು ಶಾಸಕರು ಬೆಂಬಲಿಸಿಲ್ಲ. ಆದ್ದರಿಂದ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಬಿಜೆಪಿ ಶಾಸಕ ಹರತಾಳು ಹಾಲಪ್ಪ ಸೋಲಿಸೋಣ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಸೊರಬದಲ್ಲಿಯೂ ಅಸಮಾಧಾನ; ಈ ಬಾರಿಯ ಚುನಾವಣೆಯಲ್ಲಿ ಹಾಲಿ ಶಾಸಕ ಕುಮಾರ್ ಬಂಗಾರಪ್ಪಗೆ ಟಿಕೆಟ್ ನೀಡಲು ಮೂಲ ಬಿಜೆಪಿಗರು ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ಕುಮಾರ್ ಬಂಗಾರಪ್ಪ ಅವರೇ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದು, ನಮೋ ವೇದಿಕೆ ಬಿಜೆಪಿ ಅಭ್ಯರ್ಥಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ವೇದಿಕೆಯಿಂದ ಅಭ್ಯರ್ಥಿ ಕಣಕ್ಕಿಳಿಸಲಾಗುತ್ತದೆ ಎಂದು ಹೇಳಿದೆ.
ಬಿಜೆಪಿಯ ತತ್ವ, ಸಿದ್ಧಾಂತಗಳಿಗೆ ಅನುಗುಣವಾಗಿ ಸ್ವಾಭಿಮಾನಿ ಕಾರ್ಯಕರ್ತರ ಪರಿಶ್ರಮದಿಂದ ನಮೋ ವೇದಿಕೆ ಸಂಘಟನೆ ಮಾಡಲಾಗಿದೆ. ಚುನಾವಣೆಯಲ್ಲಿಯೂ ವೇದಿಕೆ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ ಎಂದು ವೇದಿಕೆ ಅಧ್ಯಕ್ಷ ಪಾಣಿ ರಾಜಪ್ಪ ಹೇಳಿದ್ದಾರೆ. ನಾಲ್ಕೂವರೆ ವರ್ಷಗಳಿಂದ ಶಾಸಕರ ವಿರುದ್ಧ ನಮೋ ವೇದಿಕೆ ಹುಟ್ಟಿಕೊಳ್ಳಲು ಶಾಸಕ ಕುಮಾರ್ ಬಂಗಾರಪ್ಪ ಅವರೇ ಕಾರಣ. ಅವರ ಗೆಲುವಿಗೆ ಶ್ರಮಿಸಿದವರನ್ನು ಮೂಲೆಗುಂಪು ಮಾಡಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.












Click it and Unblock the Notifications