ನೈಜ ಭಾರತೀಯರು ನಕಲಿ ರೈತ ಹೋರಾಟ ಬೆಂಬಲಿಸಬಾರದು; ಈಶ್ವರಪ್ಪ
ಶಿವಮೊಗ್ಗ, ಫೆಬ್ರವರಿ 09; "ಕೃಷಿ ಕಾಯ್ದೆ ರೈತರ ಒಳಿತಿಗಾಗಿ ಇದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರು ನಿಜವಾದ ರೈತರಲ್ಲ. ನೈಜ ಭಾರತೀಯರು ನಕಲಿ ರೈತರ ಹೋರಾಟಕ್ಕೆ ಬೆಂಬಲಿಸಬಾರದು" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ಮಂಗಳವಾರ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಈಶ್ವರಪ್ಪ, "ರೈತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವಿದೇಶಿ ವ್ಯಕ್ತಿಗಳ ಕೈವಾಡ ಇರುವುದು ಬಹಿರಂಗವಾಗುತ್ತಿದೆ. ಪ್ರತಿಭಟನೆಯನ್ನು ವಿದೇಶಿಯರು ಹೈಜಾಕ್ ಮಾಡಿರುವುದು ಬಹಿರಂಗವಾಗಿದೆ" ಎಂದರು.
"ಪ್ರಧಾನಿ ಆಗಿದ್ದ ವೇಳೆ ಮನಮೋಹನ್ ಸಿಂಗ್ ಅವರು ಕೃಷಿ ಕಾಯ್ದೆ ಕುರಿತು ಪ್ರಸ್ತಾಪ ಮಾಡಿದ್ದರು. ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಅವರು ಈ ಕುರಿತು ಪ್ರಸ್ತಾಪ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಕೃಷಿ ಕಾಯ್ದೆ ಕುರಿತು ವಿವರವಾಗಿ ಪ್ರಸ್ತಾಪಿಸಿದ್ದಾರೆ" ಎಂದು ತಿಳಿಸಿದರು.

ಸುಮ್ಮನಿದ್ದ ವಿಪಕ್ಷಗಳು; "ಸಂಸತ್‌ನಲ್ಲಿ ಮಸೂದೆ ಪಾಸ್ ಮಾಡುವ ಸಂದರ್ಭದಲ್ಲಿ ವಿಪಕ್ಷಗಳು ಸುಮ್ಮನಿದ್ದವು. ಈಗ ವಿಧ್ವಂಸಕ ಕೃತ್ಯ ನಡೆಸುತ್ತಿರುವ ವಿದ್ರೋಹಿಗಳ ಪ್ರತಿಭಟನೆ ಪರವಾಗಿ ವಹಿಸಿಕೊಂಡು ಮಾತನಾಡುತ್ತಿದ್ದಾರೆ. ರಾಜಕೀಯ ಬಣ್ಣ ಬಳಸಿ ವಿಪಕ್ಷಗಳು ಸುಮ್ಮನಿರುವುದು ಒಳ್ಳೆಯದಲ್ಲ" ಎಂದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ನೀತಿಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ ಮುಂದುವರೆದಿದೆ. ಜನವರಿ 26ರಂದು ರೈತರು ಟ್ರಾಕ್ಟರ್ ಪರೇಡ್ ನಡೆಸುವಾಗ ದೆಹಲಿಯಲ್ಲಿ ಹಿಂಸಾಚಾರ ನಡೆದಿತ್ತು.
ಕೇಂದ್ರದ ಕೃಷಿ ಕಾಯ್ದೆ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಪತ್ರಿಕಾಗೋಷ್ಠಿ#Farmlaws @ikseshwarappa pic.twitter.com/bQoVliFd3G
— oneindiakannada (@OneindiaKannada) February 9, 2021
ರೈತರ ಪ್ರತಿಭಟನೆಗೆ ವಿದೇಶದಿಂದ ಹಣ ಬರುತ್ತಿದೆ. ಹೋರಾಟ ಮಾಡುತ್ತಿರುವುದು ರೈತರಲ್ಲ ಎಂಬುದು ಸೇರಿದಂತೆ ಹಲವಾರು ಆರೋಪಗಳನ್ನು ಮಾಡಲಾಗುತ್ತಿದೆ. ಕರ್ನಾಟಕ ರೈತ ಸಂಘ ಸಹ ಹೋರಾಟಕ್ಕೆ ಬೆಂಬಲ ನೀಡಿದೆ.












Click it and Unblock the Notifications