ಶಿವಮೊಗ್ಗ ನಗರದ ಜನರಿಗೆ ರೈಲ್ವೆ ಇಲಾಖೆಯಿಂದ ಸಿಹಿಸುದ್ದಿ
ಶಿವಮೊಗ್ಗ, ನವೆಂಬರ್ 08; ಭಾರತೀಯ ರೈಲ್ವೆ ಶಿವಮೊಗ್ಗ ಜಿಲ್ಲೆಯ ಜನರಿಗೆ ಸಿಹಿಸುದ್ದಿ ನೀಡಿದೆ. ಜಿಲ್ಲೆಯ ಎರಡು ರೈಲ್ವೆ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಇದರಲ್ಲಿ ಶಿವಮೊಗ್ಗ ನಗರದ ಪ್ರಮುಖ ಕಾಮಗಾರಿಯೊಂದು ಸೇರಿದೆ.
ಶಿವಮೊಗ್ಗದ ಸಂಸದ ಬಿ. ವೈ. ರಾಘವೇಂದ್ರ ಟ್ವೀಟ್ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. 'ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ರೈಲ್ವೆ ಅಂಡರ್ ಪಾಸ್ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ' ಎಂದು ಅವರು ಹೇಳಿದ್ದು, ಕಾಮಗಾರಿ ವಿವರ ನೀಡಿದ್ದಾರೆ.

ಸಂಸದರು, 'ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿ ಎಲ್. ಸಿ. ಗೇಟ್ 47ನಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ರೈಲ್ವೇ ಅಂಡರ್ ಪಾಸ್. ಸಾಗರದ ಸೊರಬ ರಸ್ತೆಯ ಎಲ್. ಸಿ. ಗೇಟ್ ನಂ. 130ರಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ರೈಲ್ವೇ ಮೇಲ್ಸೇತುವೆ' ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ಹೇಳಿದ್ದಾರೆ.
'ಸದ್ಯದಲ್ಲೇ ಈ ಎರಡು ಕಾಮಗಾರಿಯೂ ಶುರುವಾಗಲಿದೆ. ಇದನ್ನು ಸಾಧ್ಯವಾಗಿಸಿದ ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಹಾಗೂ ರೈಲ್ವೇ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು' ಎಂದು ಬಿ. ವೈ. ರಾಘವೇಂದ್ರ ಟ್ವೀಟ್ ಮಾಡಿದ್ದಾರೆ.
"ಎರಡು ರೈಲ್ವೆ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಅನುದಾದನ ಹಂಚಿಕೆಯೂ ಆಗಿದೆ. ಶೀಘ್ರವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ" ಎಂದು ಸಂಸದ ಬಿ. ವೈ. ರಾಘವೇಂದ್ರ ಭರವಸೆ ನೀಡಿದ್ದಾರೆ.
ವಾಹನ ಸವಾರರಿಗೆ ಸಂತಸ; ಎರಡು ರೈಲ್ವೆ ಕಾಮಗಾರಿಗಳ ಪೈಕಿ ಮಲ್ಲೇಶ್ವರ ನಗರದಲ್ಲಿ ಎಲ್. ಸಿ. ಗೇಟ್ 47ನಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ರೈಲ್ವೇ ಅಂಡರ್ ಪಾಸ್ ನಿರ್ಮಾಣವಾಗಲಿದೆ. ಶಿವಮೊಗ್ಗ ನಗರದಲ್ಲಿ ಎರಡು ರೈಲು ನಿಲ್ದಾಣಗಳಿವೆ. ವಿದ್ಯಾ ನಗರ ಮತ್ತು ಮುಖ್ಯ ರೈಲು ನಿಲ್ದಾಣದ ನಡುವೆ ಮಲ್ಲೇಶ್ವರ ನಗರದ ರೈಲ್ವೇ ಅಂಡರ್ ಪಾಸ್ ನಿರ್ಮಾಣವಾಗಲಿದೆ.
ರೈಲು ವಿದ್ಯಾನಗರದಿಂದ ಮುಖ್ಯ ರೈಲು ನಿಲ್ದಾಣಕ್ಕೆ ಸಾಗುವಾಗ ಮಲ್ಲೇಶ್ವರ ನಗರಕ್ಕೆ ಸಂಪರ್ಕಿಸುವ ರಸ್ತೆಯ ರೈಲ್ವೆ ಗೇಟ್ ಹಾಕಲಾಗುತ್ತಿತ್ತು. ಆಗ ರೈಲು ಹೋಗುವ ತನಕ ಸವಾರರು ಕಾಯುವುದು ಅನಿವಾರ್ಯವಾಗಿತ್ತು. ಈಗ ಅಂಡರ್ ಪಾಸ್ ನಿರ್ಮಾಣಗೊಂಡರೆ ಈ ಸಮಸ್ಯೆಗೆ ಮುಕ್ತಿ ಸಿಗಲಿದೆ.
ತುಂಗಾ ನದಿ ತೀರದಲ್ಲಿರುವ ಮಲ್ಲೇಶ್ವರ ನಗರದಲ್ಲಿ ಮಾಜಿ ಸಚಿವ, ಬಿಜೆಪಿ ನಾಯಕ ಈಶ್ವರಪ್ಪ ಅವರ ಮನೆಯೂ ಇದೆ. ನಗರದ ಹೊಳೆ ಬಸ್ ನಿಲ್ದಾಣದಿಂದ ಮಲ್ಲೇಶ್ವರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತದೆ.
ಈಗಾಗಲೇ ವಿದ್ಯಾ ನಗರದ ರೈಲು ನಿಲ್ದಾಣದ ಸಮೀಪ ಹೊಳೆ ಹೊನ್ನೂರು ರಸ್ತೆಯನ್ನು ಸಂಪರ್ಕಿಸುವಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಅದು ಉದ್ಘಾಟನೆಗೆ ಸಿದ್ಧವಾಗಿದೆ. ಈಗ ತುಂಗಾ ನದಿ ದಾಟಿದ ಬಳಿಕ ಮಲ್ಲೇಶ್ವರದಲ್ಲಿ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತದೆ. ಇದರಿಂದಾಗಿ ವಾಹನ ಸವಾರರಿಗೆ ಅನುಕೂಲವಾಗಲಿದೆ.
ಶಿವಮೊಗ್ಗ ನಗರದಿಂದ ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಗಳಿಗೆ ರೈಲು ಸಂಪರ್ಕವಿದೆ. ಕೆಲವು ರೈಲುಗಳು ಶಿವಮೊಗ್ಗ ನಗರದಿಂದ ಸಾಗರ ತಾಲೂಕಿನ ತಾಳಗುಪ್ಪ ತನಕ ಸಂಚಾರ ನಡೆಸುತ್ತವೆ. ಶಿವಮೊಗ್ಗ-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಪರ್ಕ ಆರಂಭಿಸಬೇಕು ಎಂಬ ಬೇಡಿಕೆಯೂ ಇದೆ. ಈ ಕುರಿತು ಇನ್ನೂ ಯಾವುದೇ ಆದೇಶ ಪ್ರಕಟವಾಗಿಲ್ಲ.
ಶಿವಮೊಗ್ಗ ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣ ಕಾಮಗಾರಿಯೂ ನಡೆಯುತ್ತಿದೆ. ಮತ್ತೊಂದು ಕಡೆ ಶಿವಮೊಗ್ಗ ನಗರದ ಹೊರವಲಯದ ಕೋಟೆಗಂಗೂರಿನಲ್ಲಿ ರೈಲ್ವೆ ಡಿಪೋ ಕಾಮಗಾರಿ ಸಹ ಕೈಗೊಳ್ಳಲಾಗಿದೆ.












Click it and Unblock the Notifications