Shivamogga Airport; ಶಿವಮೊಗ್ಗ ವಿಮಾನ ನಿಲ್ದಾಣದ ಬಗ್ಗೆ ಪ್ರಧಾನಿ ಮೋದಿ ಟ್ವೀಟ್
ಶಿವಮೊಗ್ಗದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಶಿವಮೊಗ್ಗ, ಫೆಬ್ರವರಿ 24; ಮಲೆನಾಡಿನ ಜನರ ದಶಕಗಳ ಕನಸು ಕೊನೆಗೂ ನನಸಾಗಿದೆ. ಶಿವಮೊಗ್ಗದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಫೆಬ್ರವರಿ 27ರ ಸೋಮವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಲೋಕಾರ್ಪಣೆ ಮಾಡಲಿದ್ದಾರೆ. ಇದಕ್ಕೂ ಮೊದಲು ಮೋದಿ ವಿಮಾನ ನಿಲ್ದಾಣದ ಕುರಿತು ಟ್ವೀಟ್ ಮಾಡಿದ್ದಾರೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಖಾತೆಯಿಂದ ಶಿವಮೊಗ್ಗ ವಿಮಾನ ನಿಲ್ದಾಣದ ಕುರಿತು ಟ್ವೀಟ್ ಮಾಡಲಾಗಿದೆ. 'ಶಿವಮೊಗ್ಗ ವಿಮಾನ ನಿಲ್ದಾಣವು ಆರ್ಥಿಕ ಚೇತರಿಕೆಯನ್ನು ತರಲಿ ಹಾಗೂ ಸಂಪರ್ಕ ಕ್ರಾಂತಿಯ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲಿ' ಎಂದು ನರೇಂದ್ರ ಮೋದಿ ಟ್ವೀಟ್‌ನಲ್ಲಿ ಹಾರೈಸಿದ್ದಾರೆ.

ಶಿವಮೊಗ್ಗದ ಬಿಜೆಪಿ ಸಂಸದ ಬಿ. ವೈ. ರಾಘವೇಂದ್ರ ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾದ ಶಿವಮೊಗ್ಗ ವಿಮಾನ ನಿಲ್ದಾಣದ ವಿಡಿಯೋವನ್ನು ಗುರುವಾರ ಟ್ವೀಟ್ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಈ ಟ್ವೀಟ್ ಉಲ್ಲೇಖಿಸಿ ಶುಕ್ರವಾರ ವಿಮಾನ ನಿಲ್ದಾಣದ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಟ್ವೀಟ್‌ಗೆ ಬಿ. ವೈ. ರಾಘವೇಂದ್ರ ಸಹ ಪ್ರತಿಕ್ರಿಯೆ ನೀಡಿದ್ದಾರೆ. 'ಶಿವಮೊಗ್ಗ ವಿಮಾನ ನಿಲ್ದಾಣವು ಆರ್ಥಿಕ ಚೇತರಿಕೆಯನ್ನು ತರಲಿ ಹಾಗೂ ಸಂಪರ್ಕ ಕ್ರಾಂತಿಯ ಜೊತೆಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲಿ' ಎಂದು ಹಾರೈಸಿದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕವಾದ ಧನ್ಯವಾದಗಳು ಎಂದು ಹೇಳಿದ್ದಾರೆ.

'ಇದೇ 27 ರಂದು ಈ ವಿಮಾನ ನಿಲ್ದಾಣವು ನಿಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆಗೊಳ್ಳಲಿದೆ. ಅಲ್ಲದೇ ಹಲವು ಅಭಿವೃದ್ಧಿಯ ಯೋಜನೆಗಳ ಶಂಕುಸ್ಥಾಪನೆಗೆ ತಾವು ಅಡಿಗಲ್ಲು ಹಾಕುವ ಮೂಲಕ ಆಶೀರ್ವದಿಸಬೇಕೆಂದು ತಮ್ಮನ್ನು ಕೋರಿಕೊಳ್ಳುತ್ತೇನೆ. ಶಿವಮೊಗ್ಗದ ಮಹಾಜನತೆಯ ಪರವಾಗಿ ತಮಗೆ ಆತ್ಮೀಯವಾದ ಸ್ವಾಗತವನ್ನು ಕೋರುತ್ತೇನೆ' ಎಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಬಿ. ವೈ. ರಾಘವೇಂದ್ರ ಸ್ವಾಗತಿಸಿದ್ದಾರೆ.
ಪರೀಕ್ಷಾರ್ಥ ಸಂಚಾರ ಯಶಸ್ವಿ; ರನ್ ವೇ ಸೇರಿದಂತೆ ವಿವಿಧ ಕಾಮಗಾರಿ ಪೂರ್ಣಗೊಂಡಿರುವ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಪ್ರಾಯೋಗಿಕ ಹಾರಾಟವೂ ಯಶಸ್ವಿಯಾಗಿದೆ. ಮಂಗಳವಾರ ಭಾರತೀಯ ವಾಯುಪಡೆಯ ಬೋಯಿಂಗ್ 737 ಮಾದರಿಯ ವಿಮಾನ ಶಿವಮೊಗ್ಗದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿ ಬಳಿಕ ಟೇಕಾಫ್ ಆಗಿತ್ತು. ಗುರುವಾರ ವಾಯುಪಡೆಯ ಮತ್ತೊಂದು ವಿಮಾನ ಶಿವಮೊಗ್ಗಕ್ಕೆ ಪರೀಕ್ಷಾರ್ಥ ಸಂಚಾರಕ್ಕಾಗಿ ಆಗಮಿಸಿತ್ತು.
ಕೇಂದ್ರ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಜನರಿಗೆ ಆಹ್ವಾನ ನೀಡಿದ್ದಾರೆ. ಸಂಸದ ಬಿ. ವೈ. ರಾಘವೇಂದ್ರ ಸಹ ವಿಮಾನ ನಿಲ್ದಾಣದ ಫೋಟೋ, ವಿಡಿಯೋ ಪೋಸ್ಟ್ ಮಾಡುವ ಮೂಲಕ ಜನರನ್ನು ಆಹ್ವಾನಿಸುತ್ತಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಕನಸು. ಫೆಬ್ರವರಿ 27 ಅವರ ಹುಟ್ಟುಹಬ್ಬ ಅಂದೇ ಅವರ ಕನಸು ಸಾಕಾರಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸುವ ಮೂಲಕ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ. ಅಂದು ಶಿವಮೊಗ್ಗದ ವಿವಿಧ ಯೋಜನೆಗಳಿಗೆ ಸಹ ಅವರು ಶಂಕುಸ್ಥಾಪನೆಯನ್ನು ಮಾಡಲಿದ್ದಾರೆ.
2019ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಶಿವಮೊಗ್ಗ ವಿಮಾನ ನಿಲ್ದಾಣ ಯೋಜನೆಗೆ ಚುರುಕುಮುಟ್ಟಿಸಿದ್ದರು. ಮೊದಲದು 2050 ಮೀಟರ್ ರನ್ ವೇ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಬಳಿಕ ಏರ್‌ಬಸ್ ಸೇರಿದಂತೆ ದೊಡ್ಡ ವಿಮಾನಗಳು ಇಳಿಯಲು ಅನುಕೂಲವಾಗುವಂತೆ ರನ್ ವೇ ಉದ್ದವನ್ನು 3200 ಮೀಟರಿಗೆ ಹೆಚ್ಚಿಸಲು ಒಪ್ಪಿಗೆ ನೀಡಲಾಯಿತು.
ಶಿವಮೊಗ್ಗ ಜಿಲ್ಲಾಡಳಿತ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಫೆಬ್ರವರಿ 27ರಂದು ಕರ್ನಾಟಕಕ್ಕೆ ಮತ್ತೊಂದು ವಿಮಾನ ನಿಲ್ದಾಣ ಸಿಗಲಿದೆ. ಬೆಂಗಳೂರು ಹೊರತುಪಡಿಸಿದರೆ ಅತಿ ಉದ್ದದ ರನ್ ವೇ ಹೊಂದಿರುವ ರಾಜ್ಯದ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಶಿವಮೊಗ್ಗದ್ದಾಗಿದೆ. ಈ ವಿಮಾನ ನಿಲ್ದಾಣದಿಂದ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳ ಜನರಿಗೆ ಸಹ ಉಪಯೋಗವಾಗಲಿದೆ.












Click it and Unblock the Notifications