ಶಿವಮೊಗ್ಗದಲ್ಲಿ ರಸ್ತೆ ಗುಂಡಿ ಸಮಸ್ಯೆ: ವಾಹನ ಸವಾರರಿಗೆ ನಿತ್ಯ ಕಿರಿಕಿರಿ
ಶಿವಮೊಗ್ಗ, ಅಕ್ಟೋಬರ್ 13: ಶಿವಮೊಗ್ಗದ ವಿದ್ಯಾನಗರದ ಮುಂದೆ ಹಾದು ಹೋಗಿರುವ ಬಿ.ಹೆಚ್.ರಸ್ತೆಯಲ್ಲಿ ಹೆಜ್ಜೆ ಹೆಜ್ಜೆಗೂ ಭಯಾನಕ ಗುಂಡಿಗಳಿವೆ. ಎಂ.ಆರ್.ಎಸ್ ಸರ್ಕಲ್‌ನಿಂದ ತುಂಗಾ ನದಿ ಸೇತುವೆ ತನಕ ಈ ರಸ್ತೆಯಲ್ಲಿ ನೂರಾರು ಗುಂಡಿಗಳಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಭದ್ರಾವತಿ ಕಡೆಯಿಂದ ಶಿವಮೊಗ್ಗ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದು. ಎಂ.ಆರ್.ಎಸ್ ಸರ್ಕಲ್‌ನಿಂದ ಬೈಪಾಸ್ ರಸ್ತೆ ಇದೆ. ಆದರೆ ನಗರದ ವಿವಿಧೆಡೆ ತೆರಳಲು ಈ ರಸ್ತೆಯೆ ಪ್ರಮುಖ ಮಾರ್ಗ. ಹಾಗಾಗಿ ಬಹುತೇಕ ದ್ವಿಚಕ್ರ ವಾಹನಗಳು, ಬಸ್ಸುಗಳು, ಲಾರಿಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಈ ರಸ್ತೆಗೆ ಹೊಂದಿಕೊಂಡಂತೆ ಶಾಲೆ, ಕಾಲೇಜು, ಕಚೇರಿಗಳು, ಪ್ರಮುಖ ಮಳಿಗೆಗಳು, ಬಡಾವಣೆಗಳು ಇದ್ದಾವೆ. ಹಾಗಾಗಿ ವಿದ್ಯಾನಗರ ಮುಂದಿನ ಬಿ.ಹೆಚ್.ರಸ್ತೆಯಲ್ಲಿ ಯಾವಾಗಲು ವಾಹನ ದಟ್ಟಣೆ ಇರುತ್ತದೆ. ಇಂತಹ ಪ್ರಮುಖ ರಸ್ತೆಯಲ್ಲಿ ಭಾರಿ ಗಾತ್ರದ ಗುಂಡಿಗಳು ಬಿದ್ದಿದ್ದು, ವಾಹನ ಸವಾರರ ಪ್ರಾಣಕ್ಕೆ ಕಂಟಕವಾಗಿದೆ.
ಈ ಮೊದಲು ಬಿ.ಹೆಚ್.ರಸ್ತೆ ಚೆನ್ನಾಗಿದ್ದು, ಮಳೆಗಾಲ ಆರಂಭವಾಗುತ್ತಿದ್ದ ಹಾಗೆ ಗುಂಡಿಗಳು ಪ್ರತ್ಯಕ್ಷವಾದವು. ಕೆಲವೇ ದಿನಗಳಲ್ಲಿ ಗುಂಡಿಗಳು ಮತ್ತು ಅವುಗಳ ಗಾತ್ರ ಹೆಚ್ಚಾಗಿದೆ. ದೂರದಿಂದ ನೋಡಲು ರಸ್ತೆ ಸಂಪೂರ್ಣ ಚೆನ್ನಾಗಿದೆ ಅನಿಸುತ್ತದೆ. ವಾಹನ ಸವಾರರು ಈ ಅಂದಾಜಿನೊಂದಿಗೆ ವಾಹನದ ವೇಗ ಹೆಚ್ಚಿಸುವ ಹೊತ್ತಿಗೆ ದಿಢೀರ್ ಗುಂಡಿ ಪ್ರತ್ಯಕ್ಷವಾಗುತ್ತದೆ. ಇವುಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸ್ವಲ್ಪ ಯಾಮಾರಿದರೂ ಅಪಘಾತ ಸಂಭವಿಸುತ್ತದೆ.

ಹೊಳೆ ಬಸ್ ನಿಲ್ದಾಣದ ಬಳಿ ಎನ್.ಸಿ.ಸಿ ಕಚೇರಿ ಮುಂಭಾಗ ರಸ್ತೆಯ ತುಂಬೆಲ್ಲ ಗುಂಡಿಗಳು ಹರಡಿಕೊಂಡಿವೆ. ರಾತ್ರಿ ವೇಳೆ ಇಲ್ಲಿ ಬೀದಿ ದೀಪ ಇಲ್ಲದ ಕಾರಣ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಮಹಾದೇವಿ ಟಾಕೀಸ್ ಬಳಿ ಪೈಪ್ ಹಾಕಲು ರಸ್ತೆ ಅಗೆಯಲಾಗಿತ್ತು. ಆ ಗುಂಡಿಗಳಿಗೆ ಮಣ್ಣು ಮುಚ್ಚಲಾಗಿತ್ತು. ದಿನ ಕಳೆದಂತೆ ಅದರ ಆಳ ಹೆಚ್ಚುತ್ತಿದೆ.
ಇನ್ನು ಶಿವಮೊಗ್ಗ ನಗರದ ಗಣೇಶ ಭವನದ ಬಳಿ, ಮತ್ತೂರು ಕ್ರಾಸ್ ಸಮೀಪ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ರಸ್ತೆ ಗುಂಡಿ ಹೆಚ್ಚಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಸ್ಥಳೀಯ ಆಟೋ ಚಾಲಕ ಅಶೋಕ್ ಮಾತನಾಡಿದ್ದು, "ಈ ರಸ್ತೆಯಲ್ಲಿ ಪ್ರತಿದಿನ ರಾಜಕಾರಣಿಗಳು, ಅಧಿಕಾರಿಗಳು ಎಲ್ಲರೂ ಓಡಾಡುತ್ತಾರೆ. ಒಂದು ಬಾರಿಯೂ ಅವರು ಇಲ್ಲಿ ಗುಂಡಿಗಳು ಯಾಕಿವೆ ಅಂತಾ ಒಬ್ಬರು ಇಳಿದು ನೋಡಿಲ್ಲ. ಇಲ್ಲಿ ದಿನ ಒಂದೊಂದು ಅಪಘಾತ ಆಗುತ್ತದೆ. ಮೊದಲು ಸಿಂಗಲ್ ರೋಡ್ ಇದ್ದಾಗಲೆ ಚೆನ್ನಾಗಿತ್ತು. ಈಗ ಗುಂಡಿಗಳ ಕಾಟ ಒಂದು ಕಡೆಯಾದರೆ, ರಸ್ತೆ ಮಧ್ಯೆ ಹಾಕಿರುವ ಲೈಟಿಂಗ್ ಸರಿಯಿಲ್ಲ. ಎದುರಿಗೆ ಯಾರು ರಸ್ತೆ ದಾಟುತ್ತಿದ್ದಾರೆ ಎನ್ನುವುದು ಗೊತ್ತಾಗಲ್ಲ," ಎಂದಿದ್ದಾರೆ.
ಶಿವಮೊಗ್ಗದ ಜನ ಪ್ರತಿನಿಧಿಗಳು, ಹಾಗೂ ಅಧಿಕಾರಿಗಳು ಈ ರಸ್ತೆಗಳಲ್ಲಿ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಮೊದಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಸದ್ಯ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿ ಕಾರ್ಯ ಆರಂಭಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.












Click it and Unblock the Notifications