ಪೊಲೀಸರ ಎದೆಗೆ ಚಾಕು ಹಾಕಿ ಪರಾರಿಯಾಗಿದ್ದ ಆರೋಪಿ ಶಾಹಿದ್ ಖುರೇಶಿ ಕಾಲಿಗೆ ಗುಂಡು
ಶಿವಮೊಗ್ಗ, ಜೂನ್ 21: ಪೊಲೀಸ್ ಸಿಬ್ಬಂದಿಯೊಬ್ಬರ ಎದೆಗೆ ಚಾಕು ಹಾಕಿ ಪರಾರಿಯಾಗಿದ್ದ ಆರೋಪಿ ಕೆಲವೇ ಗಂಟೆಯಲ್ಲಿ ಪತ್ತೆ ಹಚ್ಚಿ ಆತನ ಕಾಲಿಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ. ರಾಬರಿ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಶಾಹಿದ್ ಖುರೇಶಿಯ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಬಲಗಾಲಿನ ಮಂಡಿಯ ಕೆಳಗೆ ಪೊಲೀಸರು ಗುಂಡು ಹಾರಿಸಿದ್ದು, ಆರೋಪಿಯನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಬರಿ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಶಾಹಿದ್ ಖುರೇಶಿ ಬಂಧಿಸಲು ಬಂದಿದ್ದ ದೊಡ್ಡಪೇಟೆ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ. ಆರೋಪಿ ರಾಜೀವ್ ಗಾಂಧಿ ಬಡಾವಣೆಯಲ್ಲಿ ಇರುವ ಮಾಹಿತಿ ಪಡೆದ ಕೋಟೆ ಪೊಲೀಸರು ಕಾರ್ಯಾಚರಣೆ ನಡೆಸಿದ ಬಂಧಿಸಲು ಮುಂದಾಗಿದ್ದಾರೆ. ಆ ಸಂದರ್ಭದಲ್ಲಿ ಮತ್ತೆ ಚಾಕುವಿನಿಂದ ದಾಳಿಗೆ ಪ್ರಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಚಂದ್ರಶೇಖರ್ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಯಾರಿದು ಶಾಹಿದ್ ಖುರೇಷಿ?
ಶಾಹಿದ್ ಖುರೇಶಿ, ಶಿವಮೊಗ್ಗದ ಲಷ್ಕರ್ ಮೊಹಲ್ಲಾ ನಿವಾಸಿ. ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ರಾಬರಿ ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ. ಕಳೆದ ತಿಂಗಳು ಖುರೇಶಿ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ರಾಬರಿ ಪ್ರಕರಣ ದಾಖಲಾಗಿತ್ತು. ಮೇ 5ರಂದು ಆರ್.ಎಂ.ಎಲ್ ನಗರದಲ್ಲಿ ಸದ್ದಾಂ ಹುಸೇನ್ ಎಂಬುವವರನ್ನು ಖುರೀಷಿ ಮತ್ತು ಆತನ ಇಬ್ಬರು ಸಹಚರರು ಅಡ್ಡಗಟ್ಟಿ ಬೆದರಿಕೆ ಒಡ್ಡಿ 8 ಸಾವಿರ ರೂ. ಹಣ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಪ್ರಕರಣ ಸಂಬಂಧ ಶಾಹಿದ್ ಖುರೇಷಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

ಮಾಹಿತಿ ಸಿಕ್ಕ ಹಿನ್ನೆಲೆ ದೌಡು
ಶಾಹಿದ್ ಖುರೇಶಿಗಾಗಿ ದೊಡ್ಡಪೇಟೆ ಠಾಣೆ ಪೊಲೀಸರು ಕಳೆದ ಎರಡು ತಿಂಗಳಿಂದ ಶೋಧ ಕಾರ್ಯ ನಡೆಸುತ್ತಿದ್ದರು. ಮಂಗಳವಾರ ಆತ ಕೆ.ಆರ್.ಪುರಂ ಬಳಿ ಇರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಆರೋಪಿಯನ್ನು ಬಂಧಿಸಲು ಪೊಲೀಸರು ತೆರಳಿದ್ದರು. ಸಾಮಾನ್ಯವಾಗಿ ಇಂತಹ ಸಂದರ್ಭ ಪೊಲೀಸರು ಸಿದ್ಧತೆ ಮಾಡಿಕೊಂಡು ಸ್ಥಳಕ್ಕೆ ತೆರಳುತ್ತಾರೆ. ಆದರೆ ಇವತ್ತು ತುರ್ತಾಗಿ ಮಾಹಿತಿ ಲಭ್ಯವಾಗಿದ್ದರಿಂದ ಸಿದ್ಧತೆ ಇಲ್ಲದೆ ತೆರಳಿದ್ದರು. ಆಗ ಆರೋಪಿ ಶಾಹಿದ್ ಖುರೇಶಿ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್ ತಿಳಿಸಿದ್ದಾರೆ.
ಚಾಕು ಚುಚ್ಚಿ ಪರಾರಿಯಾದ
ದೊಡ್ಡಪೇಟೆ ಠಾಣೆಯ ಕ್ರೈಮ್ ವಿಭಾಗದ ಸಿಬ್ಬಂದಿ ಗುರುನಾಯಕ್ ಮತ್ತು ರಮೇಶ್ ಅವರು ಶಾಹೀದ್ ಖುರೇಶಿ ಬಂಧಿಸಲು ತೆರಳಿದ್ದರು. ಆಗ ಆರೋಪಿ ತನ್ನ ಸೊಂಟದಲ್ಲಿ ಚಾಕು ಇಟ್ಟುಕೊಂಡಿದ್ದ. ನಮ್ಮ ಸಿಬ್ಬಂದಿ ಆತನನ್ನು ಹಿಡಿಯಲು ಹೋದಾಗ ಚಾಕುವಿನಿಂದ ದಾಳಿ ಮಾಡಿದ್ದಾನೆ. ಸಿಬ್ಬಂದಿ ರಮೇಶ್ ಅವರ ಎಡಗೈಗೆ ಹಲ್ಲೆ ಮಾಡಿದ್ದಾನೆ. ಆಗ ಗುರುನಾಯಕ್ ಅವರು ಆರೋಪಿಯನ್ನು ಹಿಡಿದುಕೊಳ್ಳಲು ಮುಂದಾಗಿದ್ದಾರೆ. ಅವರ ಎದೆಗೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸಂಬಂಧ ಶಾಹಿದ್ ಖುರೇಶಿ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು.

ಘಟನೆಯಲ್ಲಿ ಗಾಯಗೊಂಡಿರುವ ಗುರುನಾಯಕ್ ಮತ್ತು ರಮೇಶ್ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರಿಗೂ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗುರುನಾಯಕ್ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications