ಶಿವಮೊಗ್ಗದಲ್ಲಿ ವಿವಾದದ ಬಳಿಕ ಎಚ್ಚೆತ್ತ ಪಾಲಿಕೆ, ಫ್ಲೆಕ್ಸ್ ನೀತಿ ರೂಪಿಸಲು ಪ್ಲಾನ್
ಶಿವಮೊಗ್ಗ, ಆಗಸ್ಟ್ 23: ಫ್ಲೆಕ್ಸ್ ವಿವಾದದಿಂದಾಗಿ ಶಿವಮೊಗ್ಗ ನಗರದಲ್ಲಿ ಶಾಂತಿ ಭಂಗ ಉಂಟಾಗಿದೆ. ಕಳೆದ ಒಂದು ವಾರದಿಂದ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಇದಕ್ಕೆಲ್ಲ ಕಾರಣ ಮಹಾನಗರ ಪಾಲಿಕೆಯ ನೀತಿ. ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಸುವ ಸಂಬಂಧ ಸರಿಯಾದ ನಿಯಮ ರೂಪಿಸದೆ ಇರುವುದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಯಾವುದೇ ಹುಟ್ಟುಹಬ್ಬ, ಹಬ್ಬಹರಿದಿನ, ಜಾತ್ರೆ, ಪುಣ್ಯಸ್ಮರಣೆ ಇದ್ದರೂ ಶಿವಮೊಗ್ಗದ ಗಲ್ಲಿಗಲ್ಲಿಗಳೂ, ಪ್ರಮುಖ ಸರ್ಕಲ್‌ಗಳು ಫ್ಲೆಕ್ಸ್‌ಮಯವಾಗುತ್ತವೆ. ಇದರಲ್ಲೂ ರಾಜಕಾರಣಿಗಳ ಅಬ್ಬರ ಜೋರಾಗಿಯೇ ಇರುತ್ತದೆ.
ಈ ಫ್ಲೆಕ್ಸ್‌ಗಳು ಪಾಲಿಕೆಗೆ ಆದಾಯ ತರುವುದಿಲ್ಲ. ಸಾರ್ವಜನಿಕರಿಗೂ ತೊಂದರೆ ಮಾಡುತ್ತಿವೆ. ಬಂಟಿಂಗ್ ಗಳು ಪ್ರಾಣಿಗಳಿಗೆ, ಪರಿಸರಕ್ಕೆ ಹಾನಿ ಮಾಡುತ್ತಿವೆ. ಸರ್ಕಲ್‌ಗಳಲ್ಲಿ ಫ್ಲೆಕ್ಸ್ ಗಳನ್ನು ಹಾಕಬಾರದು. ಅದಕ್ಕೆ ಪೂರ್ವಾನುಮತಿ ಪಡೆಯಬೇಕು. ಶುಲ್ಕ ಪಾವತಿಸಬೇಕು ಎಂಬ ನಿಯಮ ಇದ್ದಿದ್ದರೆ ಆಗಸ್ಟ್ 15ರಂದು ಶಿವಮೊಗ್ಗ ನಗರದಲ್ಲಿ ಶಾಂತಿಯುತ ವಾತಾವರಣ ಇರುತ್ತಿತ್ತು. ಫ್ಲೆಕ್ಸ್ ಅಳವಡಿಕೆಗೆ ಸ್ಪಷ್ಟವಾದ ನೀತಿ ಇಲ್ಲದಿರುವುದು ಸಮಸ್ಯೆಗಳಿಗೆ ಎಡೆಮಾಡಿಕೊಟ್ಟಿದೆ.
ಶಿವಮೊಗ್ಗ ನಗರದ ಪ್ರಮುಖ ಸರ್ಕಲ್‌ಗಳಲ್ಲಿ ಪ್ರತಿ ದಿನ ನೂರಾರು ಫ್ಲೆಕ್ಸ್‌ಗಳು ಕಾಣಸಿಗುತ್ತವೆ. ಒಂದು ಫ್ಲೆಕ್ಸ್ ಗೆ ಕನಿಷ್ಠ 100 ರೂ. ಎಂದು ಅನುಮತಿ ಫಿಕ್ಸ್ ಮಾಡಿದ್ದರೂ ಪಾಲಿಕೆಗೆ ಕೋಟಿ ಕೋಟಿ ರೂ. ಶುಲ್ಕ ಸಂಗ್ರಹ ಮಾಡಬಹುದಿತ್ತು. ಪಾಲಿಕೆಗೂ ಉತ್ತಮ ಆದಾಯದ ಮೂಲ ಆಗುತಿತ್ತು. ಆದರೆ ಇದ್ಯಾವುದು ಇಲ್ಲಿ ನಡೆಯುತ್ತಿಲ್ಲ.

ನೀತಿ ರೂಪಿಸಲು ಚಿಂತನೆ
ಫ್ಲೆಕ್ಸ್ ಅಳವಡಿಕೆ ಸಂಬಂಧ ಸೂಕ್ತ ನಿಯಮ ರೂಪಿಸಲು ಪಾಲಿಕೆ ಚಿಂತನೆ ನಡೆಸಿದೆ. ಫ್ಲೆಕ್ಸ್ ಹಾಕುವ ಸ್ಥಳ, ನಿರ್ಬಂಧಿತ, ಅನಿರ್ಬಂಧಿತ ಪ್ರದೇಶ, ಫ್ಲೆಕ್ಸ್ ಉದ್ದ, ಅಗಲ, ಪೂರ್ವಾನುಮತಿ ಪಡೆಯುವುದು ಹೇಗೆ? ಶುಲ್ಕ ಎಷ್ಟು, ಎಷ್ಟು ದಿನ ಅಳವಡಿಸಬಹುದು, ಲೈಸೆನ್ಸ್ ಹೇಗೆ ಪ್ರದರ್ಶನ ಮಾಡಬೇಕು. ಅನುಮತಿಗೆ ಎಷ್ಟು ದಿನ ಮುಂಚೆ ಅರ್ಜಿ ಸಲ್ಲಿಸಬೇಕು ಹೀಗೆ ಹಲವು ವಿಚಾರಗಳನ್ನು ಒಳಗೊಂಡು ಕರಡು ರೂಪಿಸಲು ಸಿದ್ಧತೆ ನಡೆಸಲಾಗಿದೆ. ಇದನ್ನು ಸಭೆಯಲ್ಲಿ ಮಂಡಿಸಿ ಕಾನೂನು ರೂಪಿಸಲು ಮುಂದಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಹಾಕುವುದು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಇದನ್ನು ನಿಗಾವಹಿಸಲು ಪರಿಸರ ಇಲಾಖೆ ಅಧಿಕಾರಿ, ವಾರ್ಡ್ ಇನ್ಸೆಪೆಕ್ಟರ್‌ಗಳನ್ನು ನಿಯೋಜಿಸಲಾಗಿದೆ. ಸದ್ಯದಲ್ಲೇ ಫ್ಲೆಕ್ಸ್ ಹಾಕುವ ವಿಚಾರಕ್ಕೆ ನಿಯಮ ರೂಪಿಸಲಾಗುವುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ತಿಳಿಸಿದ್ದಾರೆ.
ಫ್ಲೆಕ್ಸ್ ನೀತಿ ಎಲ್ಲರಿಗೂ ಅನ್ವಯವಾ?
ಗೋಪಿ ಸರ್ಕಲ್‌ನಲ್ಲಿ ಫ್ಲೆಕ್ಸ್ ಅಳವಡಿಸುವುದನ್ನು ನಿಷೇಧಿಸಲಾಗಿದೆ. ಈ ಕುರಿತು ಅಲ್ಲಿ ನೋಟಿಸ್ ಕೂಡ ಪ್ರಕಟಿಸಲಾಗಿದೆ. ಆದರೆ ರಾಜಕಾರಣಿಗಳು, ಪ್ರಮುಖರು ಫ್ಲೆಕ್ಸ್ ಅಳವಡಿಸಲಾಗುತ್ತಿದೆ. ಹೀಗಿದ್ದರೂ ದಂಡ ಹಾಕಿದ ಉದಹಾರಣೆ ಇಲ್ಲ. ಪಾಲಿಕೆಯ ಫ್ಲೆಕ್ಸ್ ನೀತಿ ಕೂಡ ಇದೆ ರೀತಿಯ ಹಲ್ಲು ಕಿತ್ತ ಹಾವಿನಂತಾದರೆ ಸಾಮಾನ್ಯರಿಗಷ್ಟೆ ಸಮಸ್ಯೆ ಉಂಟಾಗಲಿದೆ. ಈ ಬಗ್ಗೆ ಪಾಲಿಕೆ ಕಠಿಣ ಕಾನೂನು ರೂಪಿಸಬೇಕಿದೆ.

ಫ್ಲೆಕ್ಸ್ ವಿವಾದದಿಂದ ಕೋಟ್ಯಂತರ ನಷ್ಟ
ಆಗಸ್ಟ್ 15ರಂದು ಮಧ್ಯಾಹ್ನ ಶಿವಮೊಗ್ಗದ ಅಮೀರ್ ಅಹಮದ್ ಸರ್ಕಲ್ ನಲ್ಲಿ ಸಾವರ್ಕರ್ ಫ್ಲೆಕ್ಸ್ ಅನ್ನು ಕಟ್ಟುವ ವಿಚಾರವಾಗಿ ಎರಡು ಸಮುದಾಯಗಳ ನಡುವೆ ನಡೆದ ವಾಗ್ವಾದದಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ತಕ್ಷಣದಿಂದಲೇ ನಗರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಅಂಗಡಿಗಳನ್ನು ಬಂದ್ ಮಾಡಿಸಲಾಗಿತ್ತು. ಪರಿಣಾಮ ಇದರಿಂದ ಕೋಟ್ಯಂತರ ರೂ. ನಷ್ಟ ಕೂಡ ಉಂಟಾಗಿತ್ತು.
ಶಿವಮೊಗ್ಗ ನಗರದಲ್ಲಿ ನಿತ್ಯ ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ. ಅಂದಾಜು ಪ್ರಕಾರ ಪ್ರತಿ ತಿಂಗಳು 300 ಕೋಟಿ ರೂ.ಗು ಹೆಚ್ಚು ವ್ಯಾಪಾರವಾಗುತ್ತದೆ. ಕೋವಿಡ್ ಸಂದರ್ಭ ಎರಡು ವರ್ಷ ವರ್ತಕರು ಸಂಕಷ್ಟಕ್ಕೀಡಾಗಿದ್ದರು. ಇದೀಗ ಆಗಿಂದಾಗೆ ನಡೆಯುವ ಅಹಿತಕರ ಘಟನೆಗಳಿಂದ ವರ್ತಕರು ಸಂಕಷ್ಟಕ್ಕೀಡಾಗಿದ್ದರು.












Click it and Unblock the Notifications