ದೇಶದಲ್ಲಿ ಮನುಸ್ಮೃತಿ ಬಂದರೆ ಈಶ್ವರಪ್ಪ ಕುರಿ ಕಾಯ್ಕೊಂಡು ಇರಬೇಕಾಗುತ್ತೆ; ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 16: ಭವಿಷ್ಯದಲ್ಲಿ ನವದೆಹಲಿಯ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜದ ಬದಲಿಗೆ ಕೇಸರಿ ಧ್ವಜ ಹಾರಿಸಲಾಗುವುದು ಎಂಬ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ವಿರುದ್ಧ ವಿಧಾನಸಭೆ ಕಲಾಪದಲ್ಲಿ ಇಂದು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಕಾಂಗ್ರೆಸ್ ನಾಯಕರು ಪ್ರತಿಭಟಿಸಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸದನವನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಯಿತು.
ನಂತರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು...
"ಫೆ.9ರಂದು ಸಚಿವ ಈಶ್ವರಪ್ಪ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಇಂದಲ್ಲ ನಾಳೆ ಕೆಂಪುಕೋಟೆಯ ಮೇಲೆ ರಾಷ್ಟ್ರಧ್ವಜದ ಜಾಗದಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿದ್ದಾರೆ. ಈ ಮಾತು ಹೇಳುವ ಹಿಂದಿನ ದಿನ ಶಿವಮೊಗ್ಗದಲ್ಲಿ ಬಿಜೆಪಿ, ಸಂಘ ಪರಿವಾರದಿಂದ ಪ್ರಚೋದನೆಗೊಂಡ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿನ ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದರು," ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯ ಯಾರೊಬ್ಬರೂ ಖಂಡಿಸಿಲ್ಲ
"ರಾಷ್ಟ್ರಪತಿಗಳಿಂದ ಹಿಡಿದು ಒಬ್ಬ ಶಾಸಕನವರೆಗೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಸಂವಿಧಾನವನ್ನು ಎತ್ತಿಹಿಡಿಯುತ್ತೇನೆ ಎಂದು ಪ್ರಮಾಣ ಸ್ವೀಕರಿಸುತ್ತಾರೆ. ಅಂತಹದರಲ್ಲಿ ಒಬ್ಬ ಮಂತ್ರಿಯಾಗಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವಂಥ ಹೇಳಿಕೆ ಕೊಡುವುದು ಅಕ್ಷಮ್ಯ ಅಪರಾಧ. ಅವರ ಈ ಹೇಳಿಕೆಯನ್ನು ಬಿಜೆಪಿಯ ಯಾರೊಬ್ಬರೂ ಖಂಡಿಸಿಲ್ಲ," ಎಂದು ಆರೋಪಿಸಿದರು.
"ಕಾನೂನು ಸಚಿವ ಮಾಧುಸ್ವಾಮಿ ಸದನದಲ್ಲಿ ಮಧ್ಯ ಪ್ರವೇಶಿಸಿ ಈಶ್ವರಪ್ಪನವರದ್ದು ಹೇಳಿಕೆಯಲ್ಲ, ಮಾಧ್ಯಮದೊಂದಿಗಿನ ಚರ್ಚೆ ಎಂಬಂತೆ ಹೇಳಿದರು. ಜೊತೆಗೆ ಇದು ನಿಯಮ 60 ರಡಿ ಗೊತ್ತುವಳಿ ಸೂಚನೆ ಮಂಡಿಸಲು ಬರಲ್ಲ ಎಂದು ಹೇಳಿದರು. ಇದೇ ವೇಳೆ ಈಶ್ವರಪ್ಪನವರು ನಮ್ಮ ಪಕ್ಷದ ಅಧ್ಯಕ್ಷರ ತಂದೆ, ತಾಯಿ, ಕುಟುಂಬದವರ ಬಗ್ಗೆ ಮಾತನಾಡಿದ್ದು, ಅವರ ಘನತೆಯನ್ನು ತೋರಿಸುತ್ತದೆ. ಈಶ್ವರಪ್ಪನವರಿಗೆ ಸಂಸದೀಯ ಭಾಷೆಯೇ ಗೊತ್ತಿಲ್ಲ," ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಮೂರು ವರ್ಷ ಜೈಲು ಶಿಕ್ಷೆ ಅಥವಾ ದಂಡ
"ರಾಷ್ಟ್ರೀಯ ಗೌರವಕ್ಕೆ ಧಕ್ಕೆ ಕಾಯ್ದೆಯಲ್ಲಿ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಬೇರೆ ಎಲ್ಲಿಯೇ ಆದರೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದರೆ, ಹಾಳು ಮಾಡಿದರೆ, ಚ್ಯುತಿ ತಂದರೆ ಅಥವಾ ತಮ್ಮ ಹೇಳಿಕೆ, ಬರಹ ಅಥವಾ ಕಾರ್ಯದ ಮೂಲಕ ಅಪಮಾನ ಮಾಡಿದರೆ ಅದು ಅಪರಾಧ. ಈ ಅಪರಾಧಕ್ಕೆ ಮೂರು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಹೇಳಿದೆ. ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಅಪಮಾನ ಮಾಡಿದರೆ ಅದು ದೇಶದ್ರೋಹವಾಗುತ್ತದೆ," ಎಂದು ಮಾಜಿ ಸಿಎಂ ತಿಳಿಸಿದರು.

"ದೆಹಲಿಯ ಕೆಂಪುಕೋಟೆಯಲ್ಲಿ ರೈತರು ತಮ್ಮ ರೈತ ಧ್ವಜವನ್ನು ರಾಷ್ಟ್ರಧ್ವಜದ ಕೆಳಗೆ ಹಾರಿಸಿದ್ದಕ್ಕೆ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಹಾಗಾದರೆ ಈಶ್ವರಪ್ಪ ಅವರ ಮೇಲೆ ಏಕೆ ಮೊಕದ್ದಮೆ ದಾಖಲಿಸಿಲ್ಲ? ಈಶ್ವರಪ್ಪ ಅವರಿಗೆ ಒಂದು, ರೈತರಿಗೆ ಒಂದು ಕಾನೂನಿದೆಯಾ? ಈ ಬಿಜೆಪಿಯವರು ಯಾವಾಗಲೂ ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜ ಬದಲಾವಣೆ ಆಗಬೇಕು ಎನ್ನುವವರು".
ಆರ್‌ಎಸ್‌ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿರಲಿಲ್ಲ
ಬಿಜೆಪಿ, ಆರ್‌ಎಸ್‌ಎಸ್‌ನವರು ಒಂದು ದಿನವೂ ರಾಷ್ಟ್ರೀಯ ಚಿನ್ಹೆಗಳಿಗೆ ಗೌರವ ಕೊಟ್ಟವರಲ್ಲ. 2002, ಜನವರಿ 26ರವರೆಗೆ ನಾಗಪುರದ ಆರ್‌ಎಸ್‌ಎಸ್ ಕಚೇರಿಯಲ್ಲಿ ರಾಷ್ಟ್ರಧ್ವಜ ಹಾರಿಸಿರಲಿಲ್ಲ. ವಾಜಪೇಯಿ ಅವರು ಒತ್ತಾಯ ಮಾಡಿದ್ದಕ್ಕೆ ಹಾರಿಸಿರಬಹುದೇನೋ? ಇಂಥವರು ದೇಶ ಭಕ್ತಿ ಬಗ್ಗೆ ಪಾಠ ಮಾಡುತ್ತಾರೆ. ಸಂವಿಧಾನ ಹೋಗಿ ಮನುಸ್ಮೃತಿ ಬರಬೇಕು ಎಂಬುದು ಬಿಜೆಪಿಯವರ ಉದ್ದೇಶ ಎಂದು ವಾಗ್ದಾಳಿ ನಡೆಸಿದರು.
ಸಚಿವ ಈಶ್ವರಪ್ಪ ಅವರಿಂದ ಆರ್‌ಎಸ್‌ಎಸ್‌ನವರೇ ಈ ರೀತಿ ದೇಶದ್ರೋಹದ ಹೇಳಿಕೆ ಹೇಳಿಸಿರಬಹುದು. ಒಂದು ವೇಳೆ ಸಂವಿಧಾನದ ಬದಲು ಮನುಸ್ಮೃತಿ ಬಂದರೆ ಈಶ್ವರಪ್ಪ ಮಂತ್ರಿಯಾಗಲು ಆಗುತ್ತಾ? ಬಿಡುತ್ತಾರಾ? ಕುರಿ ಕಾಯ್ಕೊಂಡೋ, ಕಸ ಹೊಡ್ಕೊಂಡೋ ಇರಬೇಕಾಗುತ್ತದೆ. ಈಶ್ವರಪ್ಪ ಗೊತ್ತಿಲ್ಲದೆ ಮಾತನಾಡುತ್ತಾರೆ, ಪಾಪ ಇವರು ಆರ್‌ಎಸ್‌ಎಸ್‌ನ ಜೀತದಾಳಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
1947 ಜುಲೈ 22ರಂದು ರಾಷ್ಟ್ರಧ್ವಜ ಅಂಗೀಕಾರ
1916ರಿಂದ ರಾಷ್ಟ್ರಧ್ವಜ ಇರಬೇಕು ಎಂಬ ಚರ್ಚೆ ಆರಂಭವಾಗಿತ್ತು. "ಒಮ್ಮೆ ನಾನು ನ್ಯೂಯಾರ್ಕ್‌ನಲ್ಲಿ ಇದ್ದಾಗ ಅಲ್ಲಿ 44 ದೇಶಗಳ ರಾಷ್ಟ್ರಧ್ವಜ ಇತ್ತು. ನಮ್ಮ ದೇಶದ ಧ್ವಜ ಇರಲಿಲ್ಲ, ಅದನ್ನು ನೋಡಿ ನನಗೆ ನೋವಾಯಿತು. ಆ ಸಭೆಯಲ್ಲಿ ಮಾತನಾಡುವಾಗ ಬಹಳ ಅತ್ತುಬಿಟ್ಟೆ,'' ಎಂದು ಸರೋಜಿನಿ ನಾಯ್ಡು ಅವರು ಸಂವಿಧಾನ ಸಭೆಯಲ್ಲಿ ಹೇಳಿದ್ದರು.
1947 ಜುಲೈ 22ರಂದು ರಾಷ್ಟ್ರಧ್ವಜವನ್ನು ಅಂಗೀಕರಿಸಲಾಯಿತು. ಸಭೆಯಲ್ಲಿ ನೆಹರು, ರಾಜೇಂದ್ರ ಪ್ರಸಾದ್, ರಾಧಾಕೃಷ್ಣನ್, ಸರೋಜಿನಿ ನಾಯ್ಡು ಮುಂತಾದ ಸ್ವಾತಂತ್ರ್ಯ ಹೋರಾಟಗಾರರು ಇದ್ದರು. ಅವರೆಲ್ಲ ದೇಶಪ್ರೇಮಿಗಳು, ಅವರ ಭಾಷಣಗಳು ಅದ್ಭುತವಾಗಿವೆ. ಎಲ್ಲರೂ ಒಮ್ಮೆ ಕೇಳಬೇಕು ಎಂದರು.
ಬಿಜೆಪಿಯವರು ಎಲ್ಲಿ ತ್ಯಾಗ ಮಾಡಿದ್ದಾರೆ?
1931ರಲ್ಲಿ ಕಾಂಗ್ರೆಸ್ ಪಕ್ಷ ತ್ರಿವರ್ಣ ಧ್ವಜದ ಮಧ್ಯೆ ಚರಕ ಇರುವ ಧ್ವಜವನ್ನು ಅಳವಡಿಸಿಕೊಂಡಿತ್ತು. ಕೇಸರಿ ತ್ಯಾಗದ ಸಂಕೇತ, ಬಿಜೆಪಿಯವರು ಕೇಸರಿ ಅಂದ ಕೂಡಲೇ ನಮ್ಮದು ಎನ್ನುತ್ತಾರೆ. ಬಿಜೆಪಿಯವರು ಎಲ್ಲಿ ತ್ಯಾಗ ಮಾಡಿದ್ದಾರೆ? ಅಶೋಕ ಚಕ್ರವರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ವ್ಯಕ್ತಿ. ವಿಶ್ವ ಶಾಂತಿ, ಭ್ರಾತೃತ್ವವನ್ನು ಸಾರಿದವರು. ಅಶೋಕ ಚಕ್ರ ಅಭಿವೃದ್ಧಿಯ ಸಂಕೇತ. ರಾಷ್ಟ್ರಧ್ವಜ ನೋಡಿದರೆ ಸ್ಪೂರ್ತಿ ಬರುತ್ತದೆ. ರಾಷ್ಟ್ರದ ಅಥವಾ ರಾಜ್ಯ ನಾಯಕರು ಸತ್ತಾಗ ರಾಷ್ಟ್ರಧ್ವಜ ಹೊದಿಸಿ ಗೌರವ ಸೂಚಿಸುತ್ತಾರೆ. ರಾಷ್ಟ್ರಧ್ವಜಕ್ಕೆ ಅಷ್ಟು ಮೇರು ಸ್ಥಾನ ಇದೆ ಎಂದು ತಿಳಿಸಿದರು.
ಗುರುವಾರದ ಸದನ ಆರಂಭಕ್ಕೂ ಮೊದಲು ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟು, ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲು ಮಾಡಬೇಕು. ಇದನ್ನು ಮಾಡಿಲ್ಲ ಎಂದರೆ ಸರ್ಕಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
ಸಂವಿಧಾನದ ರಕ್ಷಣೆ ಮಾಡಬೇಕಿರುವುದು ರಾಜ್ಯಪಾಲರ ಜವಾಬ್ದಾರಿ, ಅವರು ಮುಖ್ಯಮಂತ್ರಿಗಳಿಗೆ ಹೇಳಿ ಕೆ.ಎಸ್. ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ನಿರ್ದೇಶನ ನೀಡಬೇಕಿತ್ತು. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿ ದೇಶದ್ರೋಹ ಎಸಗಿರುವ ಈಶ್ವರಪ್ಪ ಸಚಿವರಾಗಿ ಮುಂದುವರೆಯಲು ಅನರ್ಹರು. ಅವರು ಒಂದು ವೇಳೆ ಕ್ಷಮೆ ಕೇಳಿದರೂ ನಾವು ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.












Click it and Unblock the Notifications