ಸುರಕ್ಷಿತವಾಗಿ ದಡ ಸೇರಿಸುತ್ತಿದ್ದ ಲಾಂಚ್ ಸಿಬ್ಬಂದಿ ಬದುಕು ನಡು ನೀರಿಗೆ; ಕಾರಣವೇನು?
ಶಿವಮೊಗ್ಗ, ಸೆಪ್ಟೆಂಬರ್ 4: ಶರಾವತಿ ಹಿನ್ನೀರು ಭಾಗದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯರನ್ನು ಸುರಕ್ಷಿತವಾಗಿ ದಡ ತಲುಪಿಸುವ ಲಾಂಚ್ ಸಿಬ್ಬಂದಿ ಬದುಕು ನಡು ನೀರಿಗೆ ಬಂದು ನಿಂತಿದೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ನಿಧಾನಗತಿಯಿಂದಾಗಿ ಲಾಂಚ್ ಸಿಬ್ಬಂದಿ ಒಂಬತ್ತು ತಿಂಗಳಿಂದ ಸಂಬಳವಿಲ್ಲದೆ ಪರಿತಪಿಸುತ್ತಿದ್ದಾರೆ. ಇದಿಷ್ಟೆ ಅಲ್ಲ, ಭವಿಷ್ಯದ ಕುರಿತು ಆತಂಕ ಎದುರಾಗಿದೆ.
ರಾಜ್ಯದ ವಿವಿಧ ಭಾಗಗಳಿಂದ ಸಿಗಂಧೂರು ಶ್ರೀಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುವುದು ಶರಾವತಿ ಹಿನ್ನೀರಿನ ಲಾಂಚ್‌ಗಳು. ಅಂಬಾರಗೋಡ್ಲು- ಕಳಸವಳ್ಳಿ ಮಧ್ಯೆ ಲಾಂಚ್‌ನಲ್ಲಿ ಪ್ರಯಾಣಿಸುವುದೆ ಹಿತವಾದ ಅನುಭವ. ಪ್ರವಾಸಿಗರು ಮತ್ತು ಸ್ಥಳೀಯರು ನಿರಂತರವಾಗಿ, ಸುರಕ್ಷಿತವಾಗಿ ದಡಕ್ಕೆ ತಲುಪಿಸುವ ಸಿಬ್ಬಂದಿಗಳು ಈ ವರ್ಷದ ಸಂಬಳವನ್ನೇ ಕಂಡಿಲ್ಲ.

2021ರಲ್ಲಿ ಸಂಬಳವನ್ನೇ ಕಂಡಿಲ್ಲ
ಶರಾವತಿ ಹಿನ್ನೀರು ಭಾಗದ ಅಂಬಾರಗೋಡ್ಲು - ಕಳಸವಳ್ಳಿ, ಹಸಿರುಮಕ್ಕಿ, ಮುಪ್ಪಾನೆ ಭಾಗದಲ್ಲಿ ಲಾಂಚ್‌ಗಳು ಕಾರ್ಯನಿರ್ವಹಿಸುತ್ತಿವೆ. 19 ಸಿಬ್ಬಂದಿಗಳು ಲಾಂಚ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಗುತ್ತಿಗೆ ಆಧಾರದ ನೌಕರರು. ಪ್ರತಿದಿನ ಸೇವೆ ಒದಗಿಸುವುದು ಅನಿವಾರ್ಯ. ಕೆಲವು ಸಂದರ್ಭ ಹೆಚ್ಚುವರಿ ಅವಧಿ ಕರ್ತವ್ಯ ನಿರ್ವಹಿಸಬೇಕು. ಹೀಗಿದ್ದೂ, ಈ ಸಿಬ್ಬಂದಿಗಳು 2021ರಲ್ಲಿ ಒಂದೇ ಒಂದು ತಿಂಗಳು ಸಂಬಳ ಪಡೆದಿಲ್ಲ ಎಂದರೆ ನೀವು ನಂಬಲೇಬೇಕು.

ಸಂಬಳ ಕೊಡದಿರಲು ಕಾರಣವೇನು?
ಲಾಂಚ್ ಸಿಬ್ಬಂದಿಗಳು ಕಡವುಗಳು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಗುತ್ತಿಗೆ ನೌಕರರಾಗಿದ್ದಾರೆ. 2021ರ ಜನವರಿ ತಿಂಗಳಿಂದ ಇವರ ವೇತನಕ್ಕೆ ಇಲಾಖೆಯು ಹಣ ಬಿಡುಗಡೆ ಮಾಡಿಲ್ಲ. GST ಗೊಂದಲದಿಂದಾಗಿ ಹಣ ಬಿಡುಗಡೆಯಾಗಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈಗ ಹೊಸ ಬಿಲ್ ಸಿದ್ಧಪಡಿಸಲಾಗಿದ್ದು, ಇನ್ನೊಂದು ವಾರದಲ್ಲಿ ವೇತನ ಬಿಡುಗಡೆ ಆಗಬಹುದು ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

ಇನ್ನೊಂದು ವಾರದಲ್ಲಿ ಬರುತ್ತೆ
19 ಸಿಬ್ಬಂದಿಯ ಒಟ್ಟು ವೇತನ 2 ಲಕ್ಷಕ್ಕಿಂತಲೂ ಕಡಿಮೆ ಇದೆ. ಹಾಗಾಗಿ 2 ಲಕ್ಷಕ್ಕಿಂತಲೂ ಕಡಿಮೆ ವೇತನವಿದ್ದರೆ ಜಿಎಸ್‌ಟಿ ಪರಿಗಣಿಸುವ ಅಗತ್ಯವಿಲ್ಲ ಎಂದು ಭಾವಿಸಿದ ಅಧಿಕಾರಿಗಳು ಬಿಲ್ ಮಾಡಿದ್ದಾರೆ. ಆದರೆ ಖಜಾನೆ ಇಲಾಖೆ ಅಧಿಕಾರಿಗಳು 2 ಲಕ್ಷಕ್ಕಿಂತಲೂ ಕಡಿಮೆ ವೇತನವಿದ್ದರೂ ಜಿಎಸ್‌ಟಿ ಕಡಿತ ಅಗತ್ಯ ಎಂಬ ನಿಯಮ ಸೂಚಿಸಿದ್ದಾರೆ. ಇದರಿಂದಾಗಿ ಒಂಬತ್ತು ತಿಂಗಳ ವೇತನ ಲಾಂಚ್ ಸಿಬ್ಬಂದಿ ಕೈ ಸೇರದಂತಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಡವು ಇಲಾಖೆ ಸಹಾಯಕ ನಿರೀಕ್ಷಕ ದಾಮೋದರ ನಾಯ್ಕ, "ಎರಡು ಲಕ್ಷಕ್ಕಿಂತಲೂ ಕಡಿಮೆ ವೇತನಕ್ಕೂ ಜಿಎಸ್‌ಟಿ ಕಡಿತಗೊಳಿಸಬೇಕು ಎಂದು ಖಜಾನೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಪತ್ರ ವ್ಯವಹಾರ ನಡೆಸಲಾಗಿದೆ. ಇನ್ನೊಂದು ವಾರದಲ್ಲಿ ಲಾಂಚ್ ಸಿಬ್ಬಂದಿಯ ವೇತನ ಪಾವತಿಯಾಗಲಿದೆ,'' ಎಂದು ತಿಳಿಸಿದ್ದಾರೆ.

ವಸತಿ ಸೌಲಭ್ಯ ಮರೀಚಿಕೆಯ ಭೀತಿ
ಲಾಂಚ್ ಸಿಬ್ಬಂದಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಕುರಿತು ಚಿಂತನೆಯಾಗಿತ್ತು. ಜನಪ್ರತಿನಿಧಿಗಳು ಕೂಡ ಈ ಕುರಿತು ಪ್ರಯತ್ನ ಮಾಡಿದ್ದರು. ಆದರೆ ಈಗ ಅದೂ ಮರೀಚಿಕೆಯಾಗುವ ಸಾಧ್ಯತೆ ಇದೆ. ಅಂಬಾರಗೋಡ್ಲು ಮತ್ತು ಕಳಸವಳ್ಳಿ ಸಂಪರ್ಕ ಸೇತುವೆ ನಿರ್ಮಿಸಲಾಗುತ್ತಿದೆ. ಹಾಗಾಗಿ ಲಾಂಚ್ ಸಿಬ್ಬಂದಿಗೆ ವಸತಿ ಸೌಲಭ್ಯ ಕೊಡುವ ಅಗತ್ಯವಿಲ್ಲ ಎಂದು ಇಲಾಖೆ ಅಧಿಕಾರಿಗಳು ಯೋಚಿಸುತ್ತಿದ್ದಾರೆ.
ಸಿಗಂದೂರಿಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣವಾದರೆ ಲಾಂಚ್ ಸೇವೆ ಹಂತ ಹಂತವಾಗಿ ಸ್ಥಗಿತವಾಗಬಹುದು ಅಥವಾ ಲಾಂಚ್‌ಗಳ ಸಂಖ್ಯೆ ಕಡಿತಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಲಾಂಚ್ ಸಿಬ್ಬಂದಿ ಆತಂಕದಿಂದಲೇ ದಿನ ದೂಡುವಂತಾಗಿದೆ. ಈ ಮಧ್ಯೆ ವೇತನವು ಸರಿಯಾಗಿ ಕೈಸೇರದೆ ಜೀವನ ನಡೆಸುವುದಕ್ಕೆ ಕಷ್ಟಪಡುವಂತಾಗಿದೆ. ಪ್ರತಿದಿನ ಸಾವಿರಾರು ಜನರನ್ನು ಸುರಕ್ಷಿತವಾಗಿ ದಡ ಸೇರಿಸುತ್ತಿರುವ ಲಾಂಚ್ ಸಿಬ್ಬಂದಿಯ ಜೀವನವನ್ನು ಸರ್ಕಾರ ದಡಕ್ಕೆ ಸೇರಿಸುವ ಅಗತ್ಯವಿದೆ.











Click it and Unblock the Notifications