ಹಠ ಬಿಡದ ಈಶ್ವರಪ್ಪ: ಸೋಮವಾರ ಶಿವಮೊಗ್ಗಕ್ಕೆ ಮೋದಿ!
ಬೆಂಗಳೂರು, ಮಾರ್ಚ್ 17: ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಿದೆ. ಆದರೆ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮೇ 7ರಂದು ಶಿವಮೊಗ್ಗ ಕ್ಷೇತ್ರದ ಮತದಾನ ನಡೆಯಲಿದೆ. ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದೆ.
ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆಗಮಿಸುತ್ತಿದ್ದಾರೆ. ಶಿವಮೊಗ್ಗದ ಶ್ರೀ ಅಲ್ಲಮ ಪ್ರಭು ಮೈದಾನದಲ್ಲಿ ಸೋಮವಾರ ಮಧ್ಯಾಹ್ನ 1 ಗಂಟೆಗೆ ಸಮಾವೇಶ ನಡೆಯಲಿದೆ. ಆದರೆ ಈಗ ಈಶ್ವರಪ್ಪ ಮುನಿಸು ಬಿಜೆಪಿ ನಾಯಕರ ತಲೆನೋವಿಗೆ ಕಾರಣವಾಗಿದೆ.

ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಹಾವೇರಿ ಕ್ಷೇತ್ರದ ಟಿಕೆಟ್ ಸಿಕ್ಕಿಲ್ಲ ಎಂದು ಮುನಿಸಿಕೊಂಡಿದ್ದಾರೆ. ಈಶ್ವರಪ್ಪ ಜೊತೆ ಹೈಕಮಾಂಡ್ ನಾಯಕರು ಭಾನುವಾರ ನಡೆಸಿದ ಸಂಧಾನ ವಿಫಲವಾಗಿದೆ. ತಾವು ಸ್ಪರ್ಧೆ ಮಾಡುವುದು ಖಚಿತ ಎಂದು ಹೇಳುವ ಮೂಲಕ ಈಶ್ವರಪ್ಪ ಬಿಜೆಪಿ ನಾಯಕರಿಗೆ ಬಿಸಿ ತುಪ್ಪವಾಗಿದ್ದಾರೆ.
ಸಭೆ ವಿಫಲ: ಭಾನುವಾರ ಶಿವಮೊಗ್ಗ ನಗರದ ಗುಂಡಪ್ಪ ಶೆಡ್ ಬಡಾವಣೆಯಲ್ಲಿರುವ ಕೆ. ಎಸ್. ಈಶ್ವರಪ್ಪ ಮನೆಗೆ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಇತರ ನಾಯಕರ ಜೊತೆ ಭೇಟಿ ನೀಡಿದ್ದರು.
ರಾಧಾ ಮೋಹನದಾಸ್ ಅಗರ್ವಾಲ್ ಅವರನ್ನು ಮನೆಯಲ್ಲಿ ಕೂರಿಸಿ ಹೊರಹೋದ ಈಶ್ವರಪ್ಪ ಅರ್ಧ ಗಂಟೆ ಕಳೆದರೂ ಸಹ ಮನೆಗೆ ವಾಪಸ್ ಆಗಿಲ್ಲ. ಈಶ್ವರಪ್ಪಗಾಗಿ ಕಾದು ಕಾದು ರಾಧಾ ಮೋಹನದಾಸ್ ಅಗರ್ವಾಲ್ ಮತ್ತು ಇತರ ನಾಯಕರು ವಾಪಸ್ ಆದರು. ಈ ಮೂಲಕ ಸಂಧಾನ ಸಭೆ ವಿಫಲವಾಗಿದೆ.
ಕಾಂತೇಶ್ ಈಶ್ವರಪ್ಪರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಆಫರ್ ಅನ್ನು ರಾಧಾ ಮೋಹನದಾಸ್ ಅಗರ್ವಾಲ್ ಈಗಾಗಲೇ ಈಶ್ವರಪ್ಪಗೆ ನೀಡಿದ್ದಾರೆ. ಆದರೆ ಇದಕ್ಕೆ ಅವರು ಒಪ್ಪುತ್ತಿಲ್ಲ. ಮತ್ತೊಂದು ಕಡೆ ಸೋಮವಾರ ಮೋದಿ ಶಿವಮೊಗ್ಗಕ್ಕೆ ಬರುತ್ತಿದ್ದು, ಈಶ್ವರಪ್ಪ ನಡೆ ಕುತೂಹಲಕ್ಕೆ ಕಾರಣವಾಗಿದೆ.
ಶಿವಮೊಗ್ಗದ ಶ್ರೀ ಅಲ್ಲಮ ಪ್ರಭು ಮೈದಾನದಲ್ಲಿ ಮಾರ್ಚ್ 18ರ ಸೋಮವಾರದಂದು ಸನ್ಮಾನ್ಯ ಶ್ರೀ @NarendraModi ಯವರ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಸರ್ವರಿಗೂ ಹೃತ್ಪೂರ್ವಕ ಆಹ್ವಾನ.#MalnadWelcomesModi #ShivamoggaNews #byrshivamogga #shivamogga #BYRaghavendra #shivamoggaloksabhaconstituency pic.twitter.com/VpcvH8ovtm
— B Y Raghavendra (Modi Ka Parivar) (@BYRBJP) March 16, 2024
ಮಾಜಿ ಸಿಎಂ ಯಡಿಯೂರಪ್ಪ, ಅವರ ಪುತ್ರ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ತಮ್ಮ ಪುತ್ರನಿಗೆ ಟಿಕೆಟ್ ತಪ್ಪಿಸಿದ್ದಾರೆ ಎಂಬುದು ಕೆ. ಎಸ್. ಈಶ್ವರಪ್ಪ ಆರೋಪ. ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ ಬಿ. ವೈ. ವಿಯೇಂದ್ರ, "ಎಲ್ಲದಕ್ಕೂ ಕ್ಷೇತ್ರದ ಜನರು, ರಾಜ್ಯದ ಜನ ಉತ್ತರ ಕೊಡುತ್ತಾರೆ. ನಾನು ಹೆಚ್ಚಿಗೆ ಮಾತಾಡಲು ಇಷ್ಟ ಪಡಲ್ಲ. ಈಶ್ವರಪ್ಪ ನಮ್ಮ ಪಕ್ಷದ ಹಿರಿಯರು. ಅವರ ಜೊತೆ ಮಾತಾಡುತ್ತೇವೆ" ಎಂದರು.
"ಯಾರೋ ಒಬ್ಬರ ಮಾತು ಕೇಳಿ ನಮ್ಮ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ. ಕೇಂದ್ರದ ವರಿಷ್ಠರು ಎಲ್ಲರೂ ಕೂತು ಚರ್ಚೆ ಮಾಡಿ ಟಿಕೆಟ್ ಕೊಟ್ಟಿದ್ದಾರೆ. ಎಲ್ಲರ ಒಮ್ಮತದ ತೀರ್ಮಾನದಿಂದ ಅಭ್ಯರ್ಥಿ ಘೋಷಣೆ ಆಗಿದೆ. ಒಬ್ಬರ ತೀರ್ಮಾನದಿಂದ ಅಭ್ಯರ್ಥಿಗಳ ಆಯ್ಕೆ ಆಗಿಲ್ಲ" ಎಂದು ಹೇಳಿದ ವಿಜಯೇಂದ್ರ ಈಶ್ವರಪ್ಪ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ.
ಈಶ್ವರಪ್ಪ ವಿಚಾರವಾಗಿ ಮಾತನಾಡಿದ ಎಂಎಲ್ಸಿ ರವಿಕುಮಾರ್, "ಈಶ್ವರಪ್ಪ ಮನವೊಲಿಸುವ ಕೆಲಸ ಮುಂದುವರಿದಿದೆ. ಈಶ್ವರಪ್ಪ ಬಂಡಾಯ ಶಮನ ಆಗುತ್ತದೆ ಎಂಬ ವಿಶ್ವಾಸವಿದೆ. ಪುತ್ರನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಅವರಿಗೆ ಬೇಸರವಾಗಿದೆ. ಸೋಮವಾರ ಮೋದಿ ಕಾರ್ಯಕ್ರಮಕ್ಕೆ ಈಶ್ವರಪ್ಪ ಬರುತ್ತಾರೆ ಎಂಬ ವಿಶ್ವಾಸವಿದೆ" ಎಂದರು.
ಈ ಬಾರಿಯ ಚುನಾವಣೆಗೆ ಬಿಜೆಪಿ ಶಿವಮೊಗ್ಗದಲ್ಲಿ ಹಾಲಿ ಸಂಸದ ಬಿ. ವೈ. ರಾಘವೇಂದ್ರಗೆ ಟಿಕೆಟ್ ನೀಡಿದೆ. 4ನೇ ಬಾರಿ ಅವರು ಕಣಕ್ಕಿಳಿಯುತ್ತಿದ್ದಾರೆ. ಕಾಂಗ್ರೆಸ್‌ನಿಂದ ಗೀತಾ ಶಿವರಾಜ್ ಕುಮಾರ್ ಅಭ್ಯರ್ಥಿ. ಯಡಿಯೂರಪ್ಪ ಮತ್ತು ಎಸ್. ಬಂಗಾರಪ್ಪ ಕುಟುಂಬದ ನಡುವಿನ ಹೋರಾಟದಲ್ಲಿ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications