ತಂದೆ-ಮಗನ ಜಗಳದಲ್ಲಿ ಪ್ರಾಣಬಿಟ್ಟಿದ್ದು 5 ವರ್ಷದ ಕಂದಮ್ಮ!
ಶಿವಮೊಗ್ಗ, ಡಿಸೆಂಬರ್.15: ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತು ಕೇಳಿದ್ದೀರಿ. ಆದರೆ, ಶಿವಮೊಗ್ಗದಲ್ಲಿ ತಂದೆ-ಮಗನ ಜಗಳದಲ್ಲಿ 5 ವರ್ಷದ ಪುಟ್ಟ ಕಂದಮ್ಮ ಪ್ರಾಣ ಬಿಡುವಂತಾಗಿದೆ.
ಅಚ್ಚರಿ ಅನಿಸಿದರೂ ಇದು ಸತ್ಯ. ಮಾನಸಿಕ ಅಸ್ವಸ್ಥನಾದ ಯುವಕನ ಸಿಟ್ಟಿಗೆ ಐದು ವರ್ಷದ ಬಾಲಕಿ ರಜನಿ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಗಾಡಿಕೊಪ್ಪದಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥನಾಗಿದ್ದ ಸಂತೋಷ್ (23) ಬೆಳಿಗ್ಗೆ ತನ್ನ ತಂದೆ ಜಯಣ್ಣ ಜೊತೆ ಜಗಳವಾಡಿದ್ದಾರೆ. ನಂತರ ಆ ಕೋಪವನ್ನು ಮನೆಯಲ್ಲಿದ್ದ ತಂಗಿಯ ಮಗಳ ಮೇಲೆ ತೋರಿದ್ದಾರೆ. ಐದು ವರ್ಷದ ಪುಟ್ಟ ಕಂದಮ್ಮ ರಜನಿಗೆ ಚಾಕುವಿನಿಂದ ಇರಿದಿದ್ದಾನೆ.

ಬೆಳಿಗ್ಗೆ 7 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಗಾಯಗೊಂಡ ಬಾಲಕಿ ರಜನಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಜನಿ ಪ್ರಾಣ ಬಿಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

ಕೋಪದ ಕೈಗೆ ಬುದ್ಧಿ ಕೊಟ್ಟಿದ್ದಕ್ಕೆ ಪ್ರಾಣ ಬಲಿ:
ಕೋಪದ ಕೈಗೆ ಬುದ್ಧಿ ಕೊಟ್ಟ ತಪ್ಪಿಗೆ ಪುಟ್ಟ ಮಗುವೊಂದು ಬಲಿಯಾಗುವಂತಾಗಿದೆ. ಅಷ್ಟಕ್ಕೂ ಇದೇನು ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯವಂತೂ ಅಲ್ಲವೇ ಅಲ್ಲ. ಗಾಡಿಕೊಪ್ಪದ ಬಸವೇಶ್ವರ ದೇವಸ್ಥಾನದ ಬಳಿ ಎಳನೀರು ಮಾರುತ್ತಿದ್ದ ಸಂತೋಶ್ ಮಾನಸಿಕ ಅಸ್ವಸ್ಥನಾಗಿದ್ದ. ವರ್ಷದ ಹಿಂದೆಯಷ್ಟೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ, ಸಂತೋಷ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡಿರಲಿಲ್ಲ. ಮೊದಲೇ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಸಂತೋಷ್, ಇಂದು ತಂದೆ ಮೇಲಿನ ಕೋಪಕ್ಕೆ ತಂಗಿ ಮಗಳು 5 ವರ್ಷದ ರಜನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ.












Click it and Unblock the Notifications