ಕಪ್ಪು ಚುಕ್ಕೆ ಇರದ ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಕಮಲ ನಾಯಕರ ಬ್ಯಾಕ್-ಟು-ಬ್ಯಾಕ್ ವಾಗ್ದಾಳಿ
ಶಿವಮೊಗ್ಗ ಸೆಪ್ಟೆಂಬರ್ 28: 40 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇರದ ಸಿದ್ದರಾಮಯ್ಯಗೆ ಮುಡಾ ಹಗರಣ ನೈತಿಕತೆಯ ಸುಳಿಯಲ್ಲಿ ಸಿಲುಕಿಸಿದೆ. ಹೈಕಮಾಂಡ್, ಪಕ್ಷ, ಸಚಿವರು ಹಾಗೂ ಶಾಸಕರ ಬೆಂಬಲ ಇದ್ದರೂ ಸಿದ್ದರಾಮಯ್ಯ ಮುಡಾ ಹಗರಣ ಉರುಳಾಗಿದೆ. ಸಿದ್ದರಾಮಯ್ಯ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದ್ದ ಬಿಜೆಪಿಗೆ ಇದೊಂದು ಪ್ರಕರಣ ಅವರನ್ನು ಮಣಿಸಲು ಬಹುದೊಡ್ಡ ಅಸ್ತ್ರವಾಗಿದೆ. ಇದರಿಂದಾಗಿ ಕಮಲ ನಾಯಕರು ಹರಿಹಾಯುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ಮೇಲೆ ಎಫ್ಐಆರ್ ದಾಖಲು ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, 'ಕೋರ್ಟ್ ತೀರ್ಪಿಗೆ ಯಾರು ದೊಡ್ಡವರಲ್ಲ. ಸಿಎಂ ನ್ಯಾಯಾಲಯದ ಆದೇಶ ಪಾಲಿಸಬೇಕು. ಸತ್ಯ ಮೇವ ಜಯತೇ ನಮಗೆ ನ್ಯಾಯ ಸಿಗುತ್ತೆ ಅಂತಾ ಸಿದ್ದರಾಮಯ್ಯ ಬಂದ್ರು. ಕೋರ್ಟ್ ಸಿದ್ದರಾಮಯ್ಯ ವಿರುದ್ದ ತನಿಖೆಗೆ ಆದೇಶ ಕೊಟ್ಡಿದೆ. ಅವರು ತಪ್ಪಿತಸ್ಥರೆಂದು ಗೊತ್ತಾಗಿದೆ. ಇಲ್ಲವಾದಲ್ಲಿ ತಪ್ಪಿತಸ್ಥರಲ್ಲ ಅಂತಾ ಕ್ಲೀನ್ ಚಿಟ್ ತಗೊಂಡು ಬನ್ನಿ' ಎಂದು ವಾಗ್ದಾಳಿ ಮಾಡಿದ್ದಾರೆ.

'ರಾಜ್ಯದ ಜನರಿಗೆ ನೀವು ತಪ್ಪಿತಸ್ಥರೆಂದು ಸ್ಪಷ್ಟವಾಗಿ ಗೊತ್ತಾಗಿದೆ. ನಿಮ್ಮ ಶ್ರೀಮತಿ ಮುಗ್ದೆ. ಆ ತಾಯಿ ಎಂದು ಹೊರಗೆ ಬಂದವರಲ್ಲ. ಆ ತಾಯಿಗೆ ಅನ್ಯಾಯ ಆಗಬಾರದು. ನೀವು ಅವರ ಹತ್ತಿರ ಸಹಿ ಮಾಡಿಸಿಕೊಂಡಿದ್ದೀರಾ ನೀವು.. ನಾನು ಸಹ ಏನು ತಪ್ಪು ಮಾಡಿರಲಿಲ್ಲ. ನನ್ನ ಮೇಲೆ ಆಪಾದನೆ ಮಾಡಿದರು. ಡಿಕೆಶಿ ಮತ್ತು ಸಿದ್ದರಾಮಯ್ಯ ಹಗಲು ರಾತ್ರಿ ಧರಣಿ ಮಾಡಿದರು. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕ್ಲಿನ್ ಚಿಟ್ ತಗೊಂಡೆ. ದೇಶದಲ್ಲಿ ನಿಮಗೊಂದು ಕಾನೂನು ನಮಗೊಂದು ಕಾನೊನು ಇದೆಯೇ. ನಿಮಗೂ ಅದೇ ಕಾನೂನು, ನನಗೂ ಅದೇ ಕಾನೂನು. ನನ್ನ ವಿರುದ್ದ ತನಿಖೆ ನಡೆದು ನಾನು ತಪ್ಪಿತಸ್ಥನಲ್ಲ ಅಂತಾ ಹೊರಗೆ ಬಂದೇ. ನೀವು ಹಾಗೆಯೇ ತನಿಖೆ ಎದುರಿಸಿ. ತಪ್ಪಿತಸ್ಥರಲ್ಲದಿದ್ದರೆ ತಪ್ಪಿತಸ್ಥರಲ್ಲ ಅಂತಾ ಹೊರಗೆ ಬನ್ನಿ' ಎಂದು ಕಿಡಿ ಕಾರಿದರು.
ಇನ್ನೂ ಗಣಪತಿ ಮೆರವಣಿಗೆಯಲ್ಲಿ ಗಲಾಟೆ ವಿಚಾರದ ಬಗ್ಗೆ ಮಾತನಾಡಿದ ಅವರು, 'ಗಣಪತಿ ಮೆರವಣಿಗೆಯಲ್ಲಿ ಗಲಾಟೆ ನಡೆಯುತ್ತಿವೆ. ಮಸೀದಿಯಿಂದ ತಲ್ವಾರ್, ಮಚ್ಚು ಬರುತ್ತಿವೆ. ಗಣಪತಿ ಪ್ರತಿಷ್ಠಾಪನೆ ಮಾಡಿದವರ ಮೇಲೆ ಕೇಸ್ ದಾಖಲಾಗುತ್ತಿವೆ. ಗಣಪತಿ ಕೂರಿಸಿದವರು ಎ1, ಎ2 ಆರೋಪಿಗಳಾಗುತ್ತಿದ್ದಾರೆ. ಸಿದ್ದರಾಮಯ್ಯ ಈ ಪಾಪದಲ್ಲೇ ಸಿಕ್ಕಿ ಹಾಕಿಕೊಂಡಿರೋದು. ಹಿಂದುತ್ವ ತುಳಿಯಬೇಡಿ, ಹಿಂದುತ್ವ ರಕ್ಷಣೆ ಮಾಡಿ. ಹಿಂದುತ್ವ ತುಳಿಯುವುದು ಕಾಂಗ್ರೆಸ್ ನೀತಿ, ಸಿದ್ದರಾಮಯ್ಯ, ಡಿಕೆಶಿ ನೀತಿ' ಎಂದು ಆಕ್ರೋಶಗೊಂಡರು.

ಈ ನೀತಿ ಚಾಮುಂಡೇಶ್ವರಿ ತಾಯಿ ಒಪ್ಪಲ್ಲ. ಹಿಂದುತ್ವ, ಗೋವುಗಳ ಸಂರಕ್ಷಣೆ ಮಾಡಿದರೆ ಚಾಮುಂಡೇಶ್ವರಿ ತಾಯಿ ನಿಮ್ಮ ಸಿಎಂ ಸ್ಥಾನ ಉಳಿಸಿಕೊಡುತ್ತಾಳೆ. ಗೋವುಗಳ ಕಳವು ನಡೆಯುತ್ತಿದೆ. ಗೋವು ಕಳ್ಳರ ವಿರುದ್ದ ಕ್ರಮ ಇಲ್ಲ. ಗೋವು ಕಳ್ಳರ ಹಿಡಿದರೆ ಮುಸ್ಲಿಂರ ಓಟು ಸಿಗಲ್ಲ ಅಂತ ಒಲೈಕೆ ಮಾಡುತ್ತಿದ್ದಾರೆ. ಮುಸ್ಲಿಂರು ಹಿಂದುಗಳು ಅಣ್ಣ ತಮ್ಮಂದಿರ ರೀತಿ ಇದ್ದೇವೆ. ನೀವೇ ಎತ್ತಿ ಕಟ್ಟುತ್ತಿರೋದು. ದೇಶದ್ರೊಹಿ ಮುಸ್ಲಿಂಮರು ಈ ಕೃತ್ಯಗಳನ್ನು ಮಾಡತ್ತಿದ್ದಾರೆ' ಎಂದು ಕಿಡಿ ಕಾರಿದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ
ಸಂಸದನಾದ ಮೇಲೆ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಬಂದ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಿದ್ದರಾಮಯ್ಯ ಅವರಿಗೆ ಕಿವಿ ಮಾತು ಹೇಳಿದರು.
ಆರ್ಯ ವೈಷ್ಯ ಶ್ರೀರಾಮ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, 'ಯದುವೀರ ಮಹಾರಾಜರ ಕಾಲದಲ್ಲಿ ಮಲನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ಪ್ರಾರಂಭಿಸಿದ ಅನೇಕ ಸಂಸ್ಥೆಗಳು ನೂರಾರ ವರ್ಷ ದಾಟಿ ಈಗಲೂ ನಾಗರೀಕರಿಗೆ ಯಶಸ್ವಿ ಸೇವೆ ನೀಡುತ್ತಿವೆ. ಮುಂದಿನ ಪೀಳಿಗೆಯ ಹಿತಾದೃಷ್ಟಿಯಿಂದ ಆನೇಕ ಯೋಜನೆ ರೂಪಿಸಿದ್ರು. ಯುವರಾಜ ಕಂಠಿರವ ನರಸಿಂಹ ರಾಜ ಒಡೆಯರ್ ಅವರನ್ನ ಈ ಸಂದರ್ಭದಲ್ಲಿ ನಾವು ಸ್ಮರಿಸಬೇಕು' ಎಂದರು.
ಅವರ ಅನೇಕ ದೊಡ್ಡ ಕೊಡುಗೆ ಈ ರಾಜ್ಯಕ್ಕಿದೆ. ಪ್ರಧಾನಿ ಮೋದಿ ಅವರು ವಿಕಸಿತ ಭಾರತದ ಕನಸು ಹೊಂದಿದ್ದಾರೆ. ಅದಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಪ್ರತಿ ಗ್ರಾಮ ಪಂಚಾಯತಿಯಲ್ಲೂ ಒಂದು ಸಹಕಾರಿ ಸಂಘ ಸ್ಥಾಪನೆ ಆಗಬೇಕು. ಆಗ ಮಾತ್ರ ಪ್ರತಿಯೊಬ್ಬರು ಸ್ವಾವಲಂಬಿ ಬದುಕು ಸಾಗಿಸಬಹುದು. ಮಲನಾಡಿನ ಜನ ಪುಣ್ಯವಂತರು. ಇಲ್ಲಿನ ವಾತಾವರಣ ನನಗೆ ತುಂಬಾ ಇಷ್ಟ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ವಿಚಾರಕ್ಕೆ ಪ್ರತಿಕ್ರಿಯೆ
ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, 'ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಸಿಎಂ ಸ್ಥಾನ ಪ್ರಭಾವ ಇರುವ ಸ್ಥಾನ, ಹಾಗಾಗಿ ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು. ಹಗರಣ ನಡೆದಿರುವ ಬಗ್ಗೆ ಎಲ್ಲವೂ ಸ್ಪಷ್ಟವಾಗಿದೆ. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿದ್ರೆ ತನಿಖೆ ಸರಿಯಾಗಿ ನಡೆಯೋಲ್ಲ. ಹಾಗಾಗಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು' ಎಂದು ಸುದ್ದಿಗೋಷ್ಟಿಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದರು.
ಪ್ರತಿ ಗ್ರಾಮ ಪಂಚಾಯತಿ ಯಲ್ಲಿ ಸಹಕಾರ ಸಂಘ ಸ್ಥಾಪಿಸಬೇಕು ಅನ್ನೋದು ಪ್ರಧಾನಿ ಅವರ ಕನಸು. ಹಾಗಾಗಿ ಈಗಾಗಲೇ ಪ್ರಧಾನಿಯವರು ಘೋಷಣೆ ಮಾಡಿದ್ದಾರೆ. ವಿಐಎಸ್ ಎಲ್ ಕನ್ನಡಿಗರ ಹೆಮ್ಮೆಯ ಸಂಸ್ಥೆ ಅದು. ಅದರ ಉಳಿವಿಗಾಗಿ ನಮ್ಮ ಪ್ರಯತ್ನ ಇರುತ್ತದೆ ಎಂದರು.












Click it and Unblock the Notifications