ಸಂಸದ ರಾಘವೇಂದ್ರ ಅವರ ಫೋಟೋಗ್ರಾಫರ್ ಸಾವು: ಮಾವತ್ತೂರು ಕೆರೆಯಲ್ಲಿ ಮೃತದೇಹ ಪತ್ತೆ
ಶಿವಮೊಗ್ಗ, ಜನವರಿ 2: ಶಿವಮೊಗ್ಗ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಅವರ ಫೋಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಸನ್ನ ಭಟ್( 26) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಮಾವತ್ತೂರು ಕೆರೆಯಲ್ಲಿ ಭಾನುವಾರ ಪ್ರಸನ್ನ ಭಟ್ ಶವವಾಗಿ ಪತ್ತೆಯಾಗಿದ್ದಾರೆ. ಪ್ರಸನ್ನ ಭಟ್ ಸೇರಿ ಆರು ಮಂದಿ ಮಾವತ್ತೂರು ಕೆರೆ ಬಳಿಗೆ ತೆರಳಿದ್ದರು. ಈ ವೇಳೆ ಸ್ನೇಹಿತರೊಂದಿಗೆ ಈಜಲು ತೆರಳಿದ್ದಾಗ ದುರಾದೃಷ್ಟವಶಾತ್ ನೀರಿನಲ್ಲಿ ಮುಳುಗಿ ಪ್ರಸನ್ನ ಭಟ್ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರದ ಪ್ರಸನ್ನ ಭಟ್ ಅವರು ಇನ್ಸ್ಟಾಗ್ರಾಮ್‌ನಲ್ಲಿ ಮಾವತ್ತೂರು ಕೆರೆಯ ವಿಡಿಯೋ ನೋಡಿದ್ದರು. ಮೊದಲಿನಿಂದಲೂ ಫೋಟೋ ಹಾಗೂ ವಿಡಿಯೋಗ್ರಫಿ ಮೇಲೆ ಅತೀವ ಆಸಕ್ತಯಿದ್ದ ಪ್ರಸನ್ನ ವಿಡಿಯೋ ನೋಡಿ ಮಾವತ್ತೂರು ಕೆರೆಗೆ ತೆರಳಿದ್ದರು ಎನ್ನುವುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.

ಪ್ರಸನ್ನ ಭಟ್ ಕೆರೆಯಲ್ಲಿ ಕಣ್ಮರೆಯಾಗುತ್ತಿದ್ದಂತೆ ಅವರಿಗಾಗಿ ಶೋಧಕಾರ್ಯ ನಡೆಸಲಾಗಿತ್ತು. ದುರಾದೃಷ್ಟವಶಾತ್ ಭಾನುವಾರ ರಾತ್ರಿ ವೇಳೆ ಪ್ರಸನ್ನ ಭಟ್ ಮೃತದೇಹ ಮಾವತ್ತೂರು ಕೆರೆಯಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ದಯಾನಂದ ಸಾಗರ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.
ಪ್ರಸನ್ನ ಭಟ್ ಹೊಸನಗರ ತಾಲೂಕಿನವರಾಗಿದ್ದು, ವಿದ್ಯಾರ್ಥಿಯಾಗಿರುವಾಗಲೇ ಪತ್ರಿಕೋದ್ಯಮದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು. ಬಳಿಕ ವಿಶ್ವವಾಣಿ ಪತ್ರಿಕೆಯ ಹೊಸನಗರ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದರು. ಆ ಬಳಿಕ ಸಂವಾದ ಡಿಜಿಟಲ್ ಮಾಧ್ಯಮದಲ್ಲಿ ಸೇವೆ ಸಲ್ಲಿಸಿದ್ದರು.

ಫೋಟೋಗ್ರಫಿ, ವಿಡಿಯೋಗ್ರಫಿಯಲ್ಲಿ ನಿಪುಣರಾಗಿದ್ದ ಪ್ರಸನ್ನ ಭಟ್ ಅವರು, ಕೆಲ ವರ್ಷದಿಂದ ಸಂಸದ ಬಿ.ವೈ.ರಾಘವೇಂದ್ರ ಅವರ ಫೋಟೋಗ್ರಾಫರ್ ಆಗಿ ಕಾರ್ಯ ನಿರ್ಹಿಸುತ್ತಿದ್ದರು. ಸಂಸದ ರಾಘವೇಂದ್ರ ಅವರ ಸಾಮಾಜಿಕ ಜಾಲತಾಣಗಳು, ಮೀಡಿಯಾ ವಿಭಾಗವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದರು. ಅವರ ಕೆಲಸದಿಂದಾಗಿಯೇ ಪ್ರಸನ್ನ ಭಟ್ ಸಂಸದ ರಾಘವೇಂದ್ರ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬದವರಿಗೆ ಆಪ್ತರಾಗಿದ್ದರು.
ಪ್ರಸನ್ನ ಭಟ್ ಅವರ ನಿಧನಕ್ಕೆ ಸಂಸದ ರಾಘವೇಂದ್ರ ಸಂತಾಪ ಸೂಚಿಸಿದ್ದಾರೆ. "ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರೀಯರಾಗಿ ಪಾಲ್ಗೊಳ್ಳುತ್ತಿದ್ದ ಸ್ನೇಹಜೀವಿ ಹಾಗೂ ನನ್ನ ಫೋಟೋಗ್ರಾಫರ್ ಆಗಿದ್ದ ಪ್ರಸನ್ನ ಭಟ್ ಅವರ ಅಕಾಲಿಕ ನಿಧನದ ಸುದ್ದಿಯಿಂದ ದುಃಖಿತನಾಗಿದ್ದೇನೆ. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು" ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications