ಶಿವಮೊಗ್ಗ: ಎಂಎಲ್ಸಿ ಪ್ರಸನ್ನಕುಮಾರ್ ಪುತ್ರ ಸುಹಾಸ್ ಹೃದಯಾಘಾತದಿಂದ ಮೃತ
ಶಿವಮೊಗ್ಗ, ಅಕ್ಟೋಬರ್ 18: ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರ ಪುತ್ರ ಸುಹಾಸ್ (31) ಭಾನುವಾರ ಹೃದಯಾಘಾತದಿಂದ ಮೃತರಾಗಿದ್ದಾರೆ.
ಮುಂಜಾನೆ ಎದೆನೋವಿನಿಂದ ನಿತ್ರಾಣರಾಗಿ ಕುಸಿದು ಬಿದ್ದ ಸುಹಾಸ್ ರನ್ನು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಎಂಎಲ್ಸಿ ಪುತ್ರ ಸುಹಾಸ್ ಕೊನೆಯುಸಿರೆಳೆದಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಎಂಎಲ್ಸಿ ಪ್ರಸನ್ನ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡುತ್ತಿದ್ದಾರೆ. ಸುಹಾಸ್ ಅಂತಿಮ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ಪ್ರಸನ್ನ ಕುಮಾರ್ ಗೆ ಇಬ್ಬರು ಮಕ್ಕಳು ಸೂರಜ್ ಹಾಗೂ ಸುಹಾಸ್. ಮೂವತ್ತೊಂದು ವರ್ಷದ ಸುಹಾಸ್ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದರು. ಕುಟುಂಬದ ವ್ಯವಹಾರ ನೋಡಿಕೊಳ್ಳುತ್ತಿದ್ದ ಸುಹಾಸ್ ಸರಳ ಸ್ನೇಹಜೀವಿಯಾಗಿದ್ದರು ಎಂದು ಅವರ ಸಂಬಂಧಿಗಳು ಸ್ನೇಹಿತರು ಹೇಳುತ್ತಾರೆ.
ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರಿಗೆ ಕಳೆದ ಆಗಸ್ಟ್ ತಿಂಗಳು ಕೋವಿಡ್-19 ಪಾಸಿಟಿವ್ ಪತ್ತೆಯಾಗಿತ್ತು. Rapid ಆ್ಯಂಟಿಜೆನ್ ಟೆಸ್ಟ್ ನಲ್ಲಿ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿತ್ತು.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದ ಪ್ರಸನ್ನ ಕುಮಾರ್ ಅವರಿಗೆ ರೋಗ ಲಕ್ಷಣಗಳಿಲ್ಲದ ಕಾರಣ ಮನೆಯಲ್ಲೆ ಚಿಕಿತ್ಸೆ ವ್ಯವಸ್ಥೆ ಮಾಡಿಕೊಂಡಿದ್ದರು.












Click it and Unblock the Notifications