ತೀರ್ಥಹಳ್ಳಿ; ಮಧ್ಯರಾತ್ರಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ ದುಷ್ಕರ್ಮಿಗಳು
ಶಿವಮೊಗ್ಗ, ಅಕ್ಟೋಬರ್ 13: ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿಯ ಮೇಗರವಳ್ಳಿಯಲ್ಲಿ ನಿನ್ನೆ, ಅ.12ರ ಮಧ್ಯರಾತ್ರಿ ಇನೋವಾ ಕಾರಿನಲ್ಲಿ ಬಂದ ಆರೇಳು ಮಂದಿ ಮನೆಯೊಂದಕ್ಕೆ ನುಗ್ಗಿ ಮೂವರ ಮೇಲೆ ಹಲ್ಲೆ ನಡೆಸಿ ಕಳ್ಳತನಕ್ಕೆ ಯತ್ನಿಸಿರುವುದಾಗಿ ತಿಳಿದುಬಂದಿದೆ.
ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಮೇಗರವಳ್ಳಿ ಗ್ರಾಮದಲ್ಲಿ ಗಣೇಶ ಹೆಗಡೆ ಎಂಬುವರ ಮನೆಗೆ ಮಧ್ಯರಾತ್ರಿ 12.30ರ ಸುಮಾರಿಗೆ ಆರೇಳು ಮಂದಿ ನುಗ್ಗಿದ್ದು, ದರೋಡೆಗೆ ಯತ್ನಿಸಿದ್ದಾರೆ. ಕುಟುಂಬದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ಇಬ್ಬರಿಗೆ ಗಾಯವಾಗಿದೆ.
ಮನೆಯವರ ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರು ಕೋವಿ ತಂದು ಹೆದರಿಸಿ ಕೂಗಾಡಿದ್ದರಿಂದ ಅಲ್ಲಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ಬಳಿಕ ಆಗುಂಬೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಳ್ಳರ ಪತ್ತೆಗೆ ಮುಂದಾಗಿದ್ದಾರೆ. ಆದರೆ ಪೊಲೀಸ್ ಇಲಾಖೆಯ ವೈಫಲ್ಯವೇ ಪದೇ ಪದೇ ಇಂತಹ ಘಟನೆಗಳು ನಡೆಯಲು ಕಾರಣ ಎಂಬ ಆರೋಪವೂ ಕೇಳಿ ಬಂದಿದೆ.

ಮೇಗರವಳ್ಳಿ ಸೇರಿದಂತೆ ತೀರ್ಥಹಳ್ಳಿ ಕ್ಷೇತ್ರದ ಹಲವಡೆ ಕಳ್ಳತನ, ದರೋಡೆ ಪ್ರಕರಣಗಳು ಪದೇ ಪದೇ ನಡೆಯುತ್ತಿರುವುದು ಆತಂಕ ತಂದಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಘಟನೆ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಮೇಗರವಳ್ಳಿ ಘಟನೆ ತಿಳಿದ ತಕ್ಷಣವೇ ಜಿಲ್ಲಾ ರಕ್ಷಣಾಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಘಟನೆ ಕುರಿತು ಚರ್ಚಿಸಿದ್ದಾರೆ.
ಮಲೆನಾಡಿನಲ್ಲಿ ಒಂದೊಂದೇ ಮನೆಗಳು ಇವೆ. ಇಂತಹ ಘಟನೆಗಳಿಂದ ಜನರಲ್ಲಿ ಭಯ ಹೆಚ್ಚಿದೆ. ಜೊತೆಗೆ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಕಡಿಮೆಯಾಗಿದೆ. ಎಲ್ಲಾ ಪ್ರಕರಣದಲ್ಲಿ ಅಪರಾಧಿಗಳನ್ನು ಹಿಡಿದು ಜನತೆಗೆ ಧೈರ್ಯ ತುಂಬಬೇಕು. ವಿಶೇಷ ಪೊಲೀಸ್ ಕಾರ್ಯಪಡೆ ರಚಿಸಲು ಗೃಹ ಮಂತ್ರಿಗಳ ಜತೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ. ದರೋಡೆ ಯತ್ನ ನಡೆದ ಮನೆಗೆ ಇಂದು ಬೆಳಿಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಭೇಟಿ ನೀಡಿ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ.












Click it and Unblock the Notifications