POCSO: ಶಿಕ್ಷಕನಿಂದ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ: ಪೋಕ್ಸೊ ಕೇಸ್ ದಾಖಲು
ಶಿವಮೊಗ್ಗ ಆಗಸ್ಟ್ 22: ತಾಯಿಯ ನಂತರ ಶಿಕ್ಷಕನಿಗೆ ದೇವರ ಸ್ಥಾನವನ್ನು ನೀಡಲಾಗುತ್ತದೆ. ಆದರೆ ಇಲ್ಲೊಬ್ಬ ಪಾಪಿ ಶಿಕ್ಷಕರ ವೃತ್ತಿಗೆ ಮಸಿ ಬಡಿದಿದ್ದಾನೆ. ವಿದ್ಯಾರ್ಥಿಗಳ ಮೇಲೆ ತನ್ನ ಕಾಮುಕ ಕಣ್ಣು ಹಾಕಿ ಅಸಭ್ಯ ವರ್ತನೆ ತೋರಿದ್ದಾನೆ. ಈ ನಾಚಿಕೆಗೇಡಿನ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಸರ್ಕಾರಿ ವಸತಿ ಶಾಲೆಯೊಂದರಲ್ಲಿ ನಡೆದಿದೆ.
ಇಮ್ತಿಯಾಜ್ ಹೆಸರಿನ ಸಂಗೀತ ಶಿಕ್ಷಕನ ಮೇಲೆ ಇಂತಹದೊಂದು ಗಂಭೀರ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ತೋರಿರುವುದಾಗಿ ಶಿಕ್ಷಕ ಇಮ್ತಿಯಾಜ್ ಮೇಲೆ ಆರೋಪ ಮಾಡಲಾಗಿದೆ. ಹೀಗಾಗಿ ಸರ್ಕಾರಿ ವಸತಿ ಶಾಲೆಯ ಈ ಶಿಕ್ಷಕನ ವಿರುದ್ಧ ಪೋಕ್ಸೋ ಕೇಸ್ ದಾಖಲು ಮಾಡಲಾಗಿದ್ದು ಶಿಕ್ಷಕನ್ನನ್ನು ಬಂಧಿಸಲಾಗಿದೆ.

ಈ ಶಿಕ್ಷಕ ಶಾಲೆಯಲ್ಲಿ ಹಾಗೂ ಪ್ರವಾಸಕ್ಕೆ ತೆರಳಿದ್ದ ವೇಳೆ ವಿದ್ಯಾರ್ಥಿಗಳ ಜೊತೆ ಅಸಭ್ಯ ವರ್ತನೆ ತೋರಿದ್ದಾರೆಂದು ಆರೋಪಿಸಿ, ವಸತಿ ಶಾಲೆಯ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ವಸತಿಶಾಲೆಯ ಪ್ರಾಂಶುಪಾಲರು ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ. ದೂರು ನೀಡಿದ್ದ ಹಿನ್ನೆಲೆ ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ತೀರ್ಥಹಳ್ಳಿ ಪೊಲೀಸರು ಠಾಣೆಯಲ್ಲಿ ಶಿಕ್ಷಕನ ಮೇಲೆ ಪೋಕ್ಸೊ ಕೇಸ್ ದಾಖಲಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ವೃದ್ಧೆಯ ಮೇಲೆ ಅತ್ಯಾಚಾರ
ಚಿಕ್ಕಬಳ್ಳಾಪುರ: 65 ವರ್ಷದ ವೃದ್ಧೆಯೊಬ್ಬರ ಮೇಲೆ ಕಾಮಪಿಶಾಚಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ. 24 ವರ್ಷದ ಇರ್ಫಾನ್ ಎಂಬಾತ ವೃದ್ಧೆಯ ಮೇಲೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ ಅತ್ಯಾಚಾರ ಎಸಗಿದ್ದಾನೆ.
ಈತ ಹೈದರಲಿ ನಗರದ ನಿವಾಸಿಯಾಗಿದ್ದು, ಚಿಕಿತ್ಸೆಗೆಂದು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ವೃದ್ಧೆಯ ಮೇಲೆ ಕೃತ್ಯ ಎಸಗಿದ್ದಾನೆ. ಆಕ್ಸಿಜನ್ ಪ್ಲಾಂಟ್ ಪಕ್ಕದ ಶೆಡ್‌ನಲ್ಲಿ ಮಲಗಿದ್ದ ಮಹಿಳೆಯ ಮೇಲೆ ಈತ ಅತ್ಯಾಚಾರ ಎಸಗಿದ್ದಾನೆ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್‌ಪಿ ಮುರುಳೀಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೋಲ್ಕತ್ತಾ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ವೈದ್ಯ ವಿದ್ಯಾರ್ಥಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿನ ಸುರಕ್ಷತೆಯ ಬಗ್ಗೆ ಕಳವಳ ಮೂಡಿದ್ದು, ಇದಕ್ಕೆ ಚಿಕ್ಕಬಳ್ಳಾಪುರ ಘಟನೆ ಸೇರ್ಪಡೆಯಾಗಿದೆ.
ಕೋಲ್ಕತ್ತಾ ವೈದ್ಯ ವಿದ್ಯಾರ್ಥಿ ಮೇಲೆ ಅತ್ಯಾಚಾರ
ಕೋಲ್ಕತ್ತಾ ವೈದ್ಯ ವಿದ್ಯಾರ್ಥಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಇಡೀ ದೇಶವೇ ಖಂಡಿಸಿದೆ. ವೈದ್ಯ ವಿದ್ಯಾರ್ಥಿಯ ಮೇಲೆ ಹಲ್ಲೆ, ಅತ್ಯಾಚಾರ ಹಾಗೂ ಕೊಲೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ. ಆರೋಪಿಗಳನ್ನು ಬಂಧಿಸುವಂತೆ ಒತ್ತಾಯ ಹೆಚ್ಚಾಗಿದೆ. ಆದರೆ ಈ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಸಿಎಂ ಮಮತಾ ಬ್ಯಾನರ್ಜಿ ಅವರೇ ಈ ಘಟನೆಯನ್ನು ಖಂಡಿಸಿ ಸಿಎಂ ಮಮತಾ ಬ್ಯಾನರ್ಜಿ ಅವರು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿರುವುದು ವಿಪರ್ಯಾಸ.












Click it and Unblock the Notifications