ಕೊರೊನಾ ಸೋಂಕು ತಗುಲಿದರೂ ಪಾಲಿಕೆಗೆ ಬಂದ ಶಿವಮೊಗ್ಗ ಮೇಯರ್; ದೂರು, ಬಂಧನಕ್ಕೆ ಆಗ್ರಹ
ಶಿವಮೊಗ್ಗ, ಡಿಸೆಂಬರ್ 23: ಕೊರೊನಾ ವೈರಸ್ ಪಾಸಿಟಿವ್ ಬಂದರೂ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಅವರು ಕಚೇರಿಗೆ ಬಂದು ಫೈಲ್ ಪರಿಶೀಲನೆ ನಡೆಸಿದ್ದಲ್ಲದೆ, ಜನರನ್ನು ಭೇಟಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಮಧ್ಯೆ ಮೇಯರ್ ಸುನೀತಾ ಅಣ್ಣಪ್ಪ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಅವರನ್ನು ಬಂಧಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪರಿಗೆ ಕೊರೊನಾ ಸೋಂಕು ತಗುಲಿದೆ. ಕ್ವಾರಂಟೈನ್‌ಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಕೊರೊನಾ ಸೋಂಕು ತಗುಲಿರುವ ವಿಚಾರ ಗೊತ್ತಿದ್ದರೂ ಸುನೀತಾ ಅಣ್ಣಪ್ಪ ಪಾಲಿಕೆಗೆ ಬಂದಿರುವುದು ವಿವಾದಕ್ಕೆ ಕಾರಣವಾಗಿದೆ.
ಮೇಯರ್ ವಿರುದ್ಧ ಪೊಲೀಸ್ ಠಾಣೆಗೆ ದೂರು
ಶಿವಮೊಗ್ಗ ಮೇಯರ್ ಸುನೀತಾ ಅಣ್ಣಪ್ಪ ತಮ್ಮ ಜವಾಬ್ದಾರಿ ಮರೆತಿದ್ದಾರೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷದ ಶಿವಮೊಗ್ಗ ಘಟಕ ದೂರು ನೀಡಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಎಎಪಿ ಪಕ್ಷದ ಕಾರ್ಯಕರ್ತರು ದೂರು ನೀಡಿದ್ದಾರೆ. ಕೂಡಲೇ ಸುನೀತಾ ಅಣ್ಣಪ್ಪರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಆರೋಗ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
ಇನ್ನು ದೂರು ನೀಡಿದ ಬಳಿಕ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಮುಂದೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೇಯರ್ ಅವರಿಗೆ ಡಿಸೆಂಬರ್ 12ರಂದು ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ. ಆದರೂ ಪಾಲಿಕೆಯ ಕಾರಿನಲ್ಲಿ ಪ್ರಯಾಣಿಸಿದ್ದಾರೆ. ಪಾಲಿಕೆ ಕಚೇರಿಗೆ ಬಂದು ಫೈಲ್‌ಗಳನ್ನು ತರಿಸಿ ಪರಿಶೀಲಿಸಿದ್ದಾರೆ. ಕೊರೊನಾ ವೈರಸ್ ಪಾಸಿಟಿವ್ ಎಂದು ಗೊತ್ತಿದ್ದರೂ, ಮೇಯರ್ ತಮ್ಮ ಜವಾಬ್ದಾರಿ ಮರೆತಿದ್ದಾರೆ. ಪಾಲಿಕೆ ಸಿಬ್ಬಂದಿಗಳಿಗೆ ಇದರಿಂದ ಆತಂಕವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಕಾರ್ಯಕ್ರಮಕ್ಕೆ ಹೋಗಬೇಕಿತ್ತು
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಕಾಶಿಗೆ ಭೇಟಿ ನೀಡಿದ್ದರು. ಈ ಸಂದರ್ಭ ವಿವಿಧ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಿದ್ದರು. ಅದೇ ಮಾದರಿಯಲ್ಲಿ ದೇಶದ ವಿವಿಧೆಡೆಯ ಪಾಲಿಕೆ ಮೇಯರ್‌ಗಳು, ಸ್ಥಳೀಯ ನಗರ ಪಾಲಿಕೆ ಅಧ್ಯಕ್ಷರ ಸಮಾವೇಶ ಆಯೋಜಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗ ಮೇಯರ್ ಸುನೀತಾ ಅಣ್ಣಪ್ಪ ತೆರಳಬೇಕಿತ್ತು. ಆದರೆ ಕೊರೊನಾ ವೈರಸ್ ಪಾಸಿಟಿವ್ ಬಂದ ಹಿನ್ನೆಲೆ ಅವರು ಪ್ರವಾಸ ರದ್ದುಗೊಳಿಸಿದ್ದರು.

ಎಎಪಿ ವಿರುದ್ಧ ಬಿಜೆಪಿ ಆಕ್ರೋಶ
ಇತ್ತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ದೂರು ನೀಡುತ್ತದ್ದಂತೆ, ಶಿವಮೊಗ್ಗ ಬಿಜೆಪಿ ಮುಖಂಡರು ಮೇಯರ್ ಬೆಂಬಲಕ್ಕೆ ನಿಂತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ""ಕೊರೊನಾ ಪಾಸಿಟಿವ್ ಬರುತ್ತಿದ್ದಂತೆ ಮೇಯರ್ ಸುನೀತಾ ಅಣ್ಣಪ್ಪ ಕ್ವಾರಂಟೈನ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆಮ್ ಆದ್ಮಿ ಪಕ್ಷದವರಿಗೆ ಕೆಲಸವಿಲ್ಲ. ಹಾಗಾಗಿ ದೂರು, ಪ್ರತಿಭಟನೆಗಳನ್ನು ಆಯೋಜಿಸುತ್ತಿದ್ದಾರೆ,'' ಎಂದು ಆರೋಪಿಸಿದರು.
ಮೇಯರ್ ಸುನೀತಾ ಅಣ್ಣಪ್ಪ ತಮ್ಮ ಮೇಲಿನ ವಿವಾದ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಅಲ್ಲದೆ ಚಿಕಿತ್ಸೆ ಮುಂದುವರೆಸಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.

ಶಿವಮೊಗ್ಗದಲ್ಲಿ ಕೊರೊನಾ ಆತಂಕ
ಶಿವಮೊಗ್ಗ ಜಿಲ್ಲೆಯಲ್ಲಿ ಈಗಲೂ ಕೊರೊನಾ ಭೀತಿ ಇದ್ದು, ಡಿಸೆಂಬರ್ 23ರ ವರದಿ ಪ್ರಕಾರ ಜಿಲ್ಲೆಯಲ್ಲಿ 51 ಸಕ್ರಿಯ ಪ್ರಕರಣಗಳಿವೆ. ಈ ಮಧ್ಯೆ ಭದ್ರಾವತಿ ತಾಲೂಕಿನ ನರ್ಸಿಂಗ್ ಕಾಲೇಜು ವಿದ್ಯಾರ್ಥಿಯೊಬ್ಬರಲ್ಲಿ ಓಮಿಕ್ರಾನ್ ರೂಪಾಂತರ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿತ್ತು.
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೋವಿಡ್ ನಿಯಮ ಪಾಲಿಸುವಂತೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಮನವಿ ಮಾಡುತ್ತಿದೆ. ಈ ಮಧ್ಯೆ ಮೇಯರ್ ತಮ್ಮ ಜವಾಬ್ದಾರಿ ಮರೆತಿದ್ದಾರೆ ಎಂಬ ಆಪಾದನೆ ಚರ್ಚೆಗೆ ಕಾರಣವಾಗಿದೆ.












Click it and Unblock the Notifications