ಮಂಗಳೂರಿನಲ್ಲಿ ಆಟೋ ಸ್ಫೋಟ ಪ್ರಕರಣ: ತೀರ್ಥಹಳ್ಳಿಯಲ್ಲಿ ಪೊಲೀಸರ ದಾಳಿ, ಹಲವರ ವಿಚಾರಣೆ
ಶಿವಮೊಗ್ಗ, ನವೆಂಬರ್ 21: ಮಂಗಳೂರಿನ ಆಟೋದಲ್ಲಿ ಕುಕ್ಕರ್ ಸ್ಫೋಟ ಪ್ರಕರಣ ಹಿನ್ನೆಲೆ ಪೊಲೀಸರು ತೀರ್ಥಹಳ್ಳಿಯ ವಿವಿಧೆಡೆ ಪರಿಶೀಲನೆ ನಡೆಸಿದ್ದು, ಹಲವರ ವಿಚಾರಣೆ ಮಾಡಿದರು. ತೀರ್ಥಹಳ್ಳಿ ಪೊಲೀಸರು ಸೋಮವಾರ ಬೆಳಗ್ಗೆಯಿಂದ ವಿವಿಧೆಡೆ ಪರಿಶೀಲನೆ ನಡೆಸಿ, 15ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದರು.
ವಿವಿಧೆಡೆ ಪರಿಶೀಲನೆ ನಡೆಸಿದ ಪೊಲೀಸ್
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಹಿನ್ನೆಲೆ ತೀರ್ಥಹಳ್ಳಿಯಲ್ಲಿರುವ ಶಂಕಿತ ಶಾರೀಕ್, ಮಾಜ್ ಮನೆಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು. ಬಾಳೆಬೈಲು, ಸೊಪ್ಪುಗುಡ್ಡೆಯ 3 ಮನೆಗಳಲ್ಲಿ ತಪಾಸಣೆ ನಡೆಸಿದರು. ಈ ವೇಳೆ 15ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿ, ಅವರಿಂದ ಮಾಹಿತಿ ಪಡೆಯಲಾಗಿದೆ. ತೀರ್ಥಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಅಶ್ವತ್ಥ್‌ಗೌಡ, ಮಾಳೂರು ಠಾಣೆ ಇನ್ಸ್‌ಪೆಕ್ಟರ್ ಪ್ರವೀಣ್ ನೀಲಮ್ಮನವರ್ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು.
ಮಂಗಳೂರಿಗೆ ತೆರಳಿದ ಶಾರೀಕ್ ಕುಟುಂಬ
ಕುಕ್ಕರ್ ಸ್ಫೋಟ ಪ್ರಕರಣದಲ್ಲಿ ಶಂಕಿತ ಶಾರೀಕ್ ಗಾಯಗೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಗುರುತು ಪತ್ತೆಗಾಗಿ ಶಾರೀಕ್ ಕುಟುಂಬಕ್ಕೆ ಪೊಲೀಸರು ಬುಲಾವ್ ನೀಡಿದ್ದರು. ಆದ್ದರಿಂದ ಶಾರೀಕ್ ಕುಟುಂಬದವರು ಮಂಗಳೂರಿಗೆ ತೆರಳಿದ್ದಾರೆ. ಶಾರೀಕ್ ತಾಯಿ, ಸಹೋದರಿಯರು ಮಂಗಳೂರಿನಲ್ಲಿದ್ದಾರೆ. ತೀರ್ಥಹಳ್ಳಿಯ ಯುವಕ ಶಾರೀಕ್ ಕೈವಾಡದ ಕುರಿತು ಮಾಹಿತಿ ಲಭಿಸುತ್ತಿದ್ದಂತೆ ತಾಲೂಕಿನಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಹಿಂದೆ ಶಾರೀಕ್ ಸಹಚರ ತೀರ್ಥಹಳ್ಳಿಯ ಮಾಜ್ ಮುನೀರ್ ಎಂಬಾತನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದು, ತೀರ್ಥಹಳ್ಳಿ ಪಟ್ಟಣದ ಜನರಲ್ಲಿ ಭಯ ಹುಟ್ಟಿಸಿತ್ತು.

ಆತಂಕ ಸೃಷ್ಟಿಸಿದ ಸ್ಫೋಟ ಪ್ರಕರಣ
ಇನ್ನು ಶನಿವಾರ ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಇಟ್ಟು ಬ್ಲಾಸ್ ಮಾಡಿದ ಪ್ರಕರಣಕ್ಕೆ ಇದೀಗ ಮೈಸೂರು ನಂಟು ಬೆಸೆದುಕೊಂಡಿದೆ. ಲಘು ಸ್ಫೋಟವು ಭಯೋತ್ಪಾದನೆ ಕೃತ್ಯ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಖಚಿತಪಡಿಸಿದ್ದರು. ಇದೀಗ ಘಟನೆಯಲ್ಲಿ ಗಾಯಗೊಂಡಿರುವ ಪ್ರೇಮ್ ಚಂದ್ ಗುಹಾ ಮೈಸೂರಿನಲ್ಲಿ ನೆಲೆಸಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಮೈಸೂರಿನ ಲೋಕನಾಯಕ ನಗರದಲ್ಲಿ ವಾಸ ಇದ್ದ ಪ್ರೇಮ್ ಚಂದ್ 1,800 ರೂಪಾಯಿ ನೀಡಿ ರೂಂ ಅನ್ನು ಬಾಡಿಗೆ ಪಡೆದಿದ್ದ ಎನ್ನಲಾಗಿದೆ. ಆತ ಕೊಯಂಬತ್ತೂರಿನಿಂದ ಮೈಸೂರಿಗೆ ಬಂದು ನೆಲೆಸಿದ್ದ. ಹುಬ್ಬಳ್ಳಿ ವಿಳಾಸ ಇರುವ ಆಧಾರ್ ಕಾರ್ಡ್ ತೋರಿಸಿ ಮೈಸೂರಿನಲ್ಲಿ ರೂಂ ಬಾಡಿಗೆ ಪಡೆದಿದ್ದ ಎನ್ನಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಇದೊಂದು ಭಯೋತ್ಪಾದನಾ ಕೃತ್ಯ ಎಂದು ದೃಢಪಟ್ಟಿಸಿದ್ದಾರೆ. "ಈ ಘಟನೆ ಆಕಸ್ಮಿಕವಾಗಿ ನಡೆದಿದ್ದಲ್ಲ. ಗಂಭೀರ ಹಾನಿ ಉಂಟು ಮಾಡುವ ಉದ್ದೇಶದಿಂದಲೇ ಈ ಕೃತ್ಯ ನಡೆಸಲಾಗಿದೆ. ರಾಜ್ಯದ ಪೊಲೀಸರು ಕೇಂದ್ರದ ತನಿಖಾ ಏಜೆನ್ಸಿಗಳ ಜೊತೆ ಸೇರಿ ಇದರ ಬಗ್ಗೆ ತನಿಖೆ ನಡೆಸುತ್ತಿವೆ" ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ರಾಜ್ಯ ಪೊಲೀಸರಿಂದ ಮಹತ್ವದ ತನಿಖೆ
ಈ ಕುರಿತು ಮಹತ್ವದ ತನಿಖೆಯನ್ನು ರಾಜ್ಯ ಪೊಲೀಸರು ನಡೆಸುತ್ತಿದ್ದಾರೆ. ಬಾಂಬ್ ತಂದ ಶಾರೀಕ್ ಮಂಗಳೂರಿನ ಹಲವು ಭಾಗಗಳಲ್ಲಿ ಸ್ಫೋಟ ನಡೆಸಲು ಸಂಚು ರೂಪಿಸಿದ್ದ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಕಛೇರಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಸುದ್ದಿಗೋಷ್ಢಿ ನಡೆಸಿ ಮಹತ್ವದ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಘಟನೆಯಲ್ಲಿ ಆಟೋ ಚಾಲಕ ಪುರುಷೋತ್ತಮ್ ಪೂಜಾರಿಯವರಿಗೆ ಸುಟ್ಟ ಗಾಯಗಳಾಗಿವೆ. ಶಂಕಿತ ಉಗ್ರ ಶಾರೀರ್‌ಗೆ 45% ರಷ್ಟು ಸುಟ್ಟ ಗಾಯಗಳಾಗಿವೆ. ಶಾರೀಕ್ ಜೇಬಿನಲ್ಲಿದ್ದ ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ ಫೇಕ್ ಮಾಡಲಾಗಿದೆ. ಪ್ರೇಮ್ ರಾಜ್ ಹೆಸರಿನ ವ್ಯಕ್ತಿಯ ಆಧಾರ್ ಕಾರ್ಡ್ ಅನ್ನು ಹುಬ್ಬಳ್ಳಿ-ಧಾರಾವಾಡದ ವಿಳಾಸದಲ್ಲಿ ಮಾಡಲಾಗಿತ್ತು. ಅದೇ ಪ್ರೇಮ್ ರಾಜ್ ಹುಬ್ಬಳಿ ಬಿಟ್ಟು ಮೂರು ವರ್ಷಗಳಾಗಿವೆ. ನಿಜವಾದ ಪ್ರೇಮ್‌ನನ್ನು ನಾನೇ ಸಂಪರ್ಕ ಮಾಡಿದ್ದೇನೆ. ಆತ ತುಮಕೂರು ರೈಲ್ವೆಯಲ್ಲಿ ಗ್ಯಾಂಗ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತನ ಆಧಾರ್ ಕಾರ್ಡ್ ಆರು ತಿಂಗಳ ಹಿಂದೆ ಮಿಸ್ ಆಗಿದ್ದು, ಆಧಾರ್ ಕಾರ್ಡ್ ಅನ್ನು ಶಾರೀಕ್ ಆಧಾರ್ ಕಾರ್ಡ್ ಫೇಕ್ ಮಾಡಿಸಿ ಫೋಟೋ ಹಾಕಿಸಿಕೊಂಡಿದ್ದಾನೆ ಎನ್ನುವ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.












Click it and Unblock the Notifications