M.B Shivanna Gowda: ದೇವೇಗೌಡರೇ ಮೆಚ್ಚಿದ್ದ ನಾಟಿ ವೈದ್ಯ ಎಂ.ಬಿ ಶಿವಣ್ಣಗೌಡ ನಿಧನ
ಜನಪದ ವೈದ್ಯರತ್ನ, ನಾಟಿ ವೈದ್ಯ ಎಂದೇ ಖ್ಯಾತಿ ಪಡೆದಿದ್ದ ಶಿವಮೊಗ್ಗದ ಎಂ.ಬಿ.ಶಿವಣ್ಣ ಗೌಡ ಇಂದು( ಫೆಬ್ರವರಿ 06) ವಿಧಿವಶರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಮಂಗಳ ಗ್ರಾಮದ ತಮ್ಮ ಸ್ವಗೃಹದಲ್ಲಿ ಎಂ.ಬಿ ಶಿವಣ್ಣಗೌಡ ನಿಧನರಾಗಿದ್ದಾರೆ. ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಸುಮಾರು ನೆಲವತ್ತು ವರ್ಷಗಳಿಂದ ಪಾರಂಪರಿಕ ನಾಟಿ ವೈದ್ಯ ವೃತ್ತಿಯಲ್ಲಿ ಎಂ.ಬಿ ಶಿವಣ್ಣಗೌಡ ಯಾವುದೇ ಪ್ರಚಾರವಿಲ್ಲದೇ ಯಶಸ್ಸು ಕಂಡಿದ್ದರು. ಜನ ಸಾಮಾನ್ಯರು ಮಾತ್ರವಲ್ಲದೇ ಅನೇಕ ಗಣ್ಯರು ಕೂಡ ಇವರನ್ನು ಹುಡುಕಿ ಬಂದು ಔಷಧಿ ಪಡೆಯುತ್ತಿದ್ದರು. ಸಾಹಿತಿ ಚಂದ್ರಶೇಖರ್ ಕಂಬಾರ್, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಸಚಿವೆ ಮನೋರಮ ಮಧ್ವರಾಜ್ ಹಾಗೂ ಪತ್ರಕರ್ತೆ ಗೌರಿ ಲಂಕೇಶ್ ಸೇರಿದಂತೆ ಅನೇಕರು ವಿದೇಶದಿಂದ ಕೂಡ ಬಂದು ಇವರಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಅಲ್ಲದೇ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಶಿವಣ್ಣ ಗೌಡರ ಸೇವೆಯನ್ನು ಮೆಚ್ಚಿ ಶ್ಲಾಘಿಸಿದ್ದರು.
ಮಲೆನಾಡಿನ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನ ಸಮೀಪದ ರಾಮನಸರ ಮಂಗಳ ಎಂ.ಬಿ.ಶಿವಣ್ಣ ಗೌಡ ಅವರ ಸ್ವಗ್ರಾಮವಾಗಿದ್ದು, ಇಂದು ರಾಜ್ಯಾದ್ಯಂತ ಪಾರಂಪರಿಕ ನಾಟಿ ಔಷಧಿಗೆ ಈ ಊರು ಹೆಸರುವಾಸಿಯಾಗಿದೆ. ಕೈಕಾಲು ಮುರಿತ, ಬೆನ್ನು ನೋವು, ಮೂಳೆ ನೋವುಗಳಿಗೆ ಹಾಗೂ ಸಂಧಿ ನೋವುಗಳಿಗೆ ಇವರು ವಿಶೇಷವಾಗಿ ಚಿಕಿತ್ಸೆ ನೀಡುತ್ತಿದ್ದರು. ಇವರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರೇ ಇವರಿಗೆ ಪ್ರಚಾರ ನೀಡುತ್ತಿದ್ದರು.
ಸುಮಾರು ನೆಲವತ್ತು ವರ್ಷ ನಾಟಿ ಔಷಧಿಯನ್ನು ನೀಡಿ ಈ ಕ್ಷೇತ್ರದಲ್ಲಿ ಯಶಸ್ಸು ಕಂಡಿರುವ ಎಂ.ಬಿ.ಶಿವಣ್ಣ ಗೌಡ ಅವರಿಗೆ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್‌ನಿಂದ ಜಾನಪದ ವೈದ್ಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಜ್ಯದ ಬಹಳಷ್ಟು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದೆ. ಇದೀಗ ಶಿವಣ್ಣ ಗೌಡ ಅವರನ್ನು ಕಳೆದುಕೊಂಡ ಮಂಗಳ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಅವರ ಅಂತ್ಯಕ್ರಿಯೆ ಬಗ್ಗೆ ಕುಟುಂಬಸ್ಥರು ಇನ್ನಷ್ಟೇ ಮಾಹಿತಿ ನೀಡಬೇಕಿದೆ.












Click it and Unblock the Notifications