ಸಾಲ ತೀರಿಸಲು ಮನೆ ಕಳವು ಮಾಡಿದ; ಸಾಲ ತೀರಿಸಿ ಸಿಕ್ಕಿಬಿದ್ದ!
ಶಿವಮೊಗ್ಗ, ಜುಲೈ 05; ಸ್ವಸಹಾಯ ಸಂಘದಲ್ಲಿ ಮಾಡಿದ ಸಾಲ ತೀರಿಸಲು ಮನೆಯ ಬೀಗ ಒಡೆದು ಕಳವು ಮಾಡಿದ್ದ ಆರೋಪಿಯನ್ನು ಚಿನ್ನಾಭರಣ ಸಮೇತ ಸೊರಬ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸೊರಬ ತಾಲ್ಲೂಕಿನ ಛತ್ರದಹಳ್ಳಿ ಗ್ರಾಮದ ಚಂದ್ರಪ್ಪ ಗಣೇಶಪ್ಪ (30) ಬಂಧಿತ ಆರೋಪಿ. ಸಾಲ ತೀರಿಸಲು ಕಳವು ಮಾಡಿದ್ದ ಚಂದ್ರಪ್ಪ, ಅದೇ ಸಾಲ ತೀರಿಸಿ ಪೊಲೀಸರ ಅತಿಥಿಯಾಗಿದ್ದಾನೆ.
ಜೂನ್ 29ರಂದು ಛತ್ರದಹಳ್ಳಿಯ ರಮೇಶ್ ಕುಟುಂಬ ಸಮೇತ ಆರಿದ್ರಾ ಮಳೆ ಹಬ್ಬಕ್ಕೆಂದು ನೆರೆಯ ಗ್ರಾಮಕ್ಕೆ ತೆರಳಿದ್ದರು. ಈ ಬಗ್ಗೆ ಮಾಹಿತಿ ಹೊಂದಿದ್ದ ಆರೋಪಿ ಚಂದ್ರಪ್ಪ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು, ಮನೆಯ ಬೀಗ ಒಡದು ಕಳವು ಮಾಡಿದ್ದ.

ಸಾಲ ತೀರಿಸಿದ; ಮನೆ ಕಳ್ಳತನ ಮಾಡಿದ್ದ ಚಂದ್ರಪ್ಪ ಯಾರಿಗೂ ಗೊತ್ತಾಗದೆ ಹಾಗೆ ಸಹಜವಾಗಿದ್ದ. ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಚಂದ್ರಪ್ಪ, ಸ್ವಸಹಾಯ ಸಂಘದ 60 ಸಾವಿರ ಸಾಲವನ್ನು ಒಮ್ಮೆಗೆ ತೀರಿಸಿದ್ದು ಗೊತ್ತಾಗಿತ್ತು. ವಿಚಾರಣೆ ನಡೆಸಿದಾಗ ಕಳ್ಳತನ ವಿಚಾರ ಬಾಯಿಬಿಟ್ಟಿದ್ದಾನೆ.
ಆರೋಪಿ ಚಂದ್ರಪ್ಪನಿಂದ 10 ಗ್ರಾಂ ತೂಕದ ಚೈನ್, 8 ಗ್ರಾಂ ತೂಕದ ಎರಡು ಕೆನ್ನೆ ಸರಪಳಿ, 6 ಗ್ರಾಂ ತೂಕದ ಉಂಗುರ ಹಾಗೂ 2 ಗ್ರಾಂ ತೂಕದ ಒಂದು ಬಟನ್ ಅಂದಾಜು 92 ಸಾವಿರ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಡಿವೈಎಸ್ಪಿ ಶಿವಾನಂದ ಮದರಕಂಡಿ, ಇನ್‌ಸ್ಪೆಕ್ಟರ್ ಆರ್. ಡಿ. ಮರುಳಸಿದ್ದಪ್ಪ ಮಾರ್ಗದರ್ಶನದಲ್ಲಿ ಪಿಎಸ್ಐ ಟಿ. ಬಿ. ಪ್ರಶಾಂತ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಚಿನ್ನಾಭರಣ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications