ಮೋದಿ ಕಾರ್ಯಕ್ರಮಕ್ಕೆ ಚಕ್ಕರ್, ಮಠಗಳಿಗೆ ಭೇಟಿ ಕೊಟ್ಟು ಪ್ರಚಾರ ಆರಂಭಿಸಿದ ಕೆಎಸ್ ಈಶ್ವರಪ್ಪ!
ಶಿವಮೊಗ್ಗ, ಮಾರ್ಚ್ 19: ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಪಕ್ಷದ ವಿರುದ್ಧ ಬಂಡಾಯ ಎದ್ದಿರುವುದು ಗೊತ್ತೆ ಇದೆ. ಬಿಜೆಪಿ ನಾಯಕರು ಬಂಡಾಯ ಶಮನಕ್ಕೆ ಯತ್ನಿಸಿದರೂ ಅದು ಪ್ರಯೋಜನವಾಗಿಲ್ಲ. ಯಾರ ಮಾತಿಗೆ ಒಪ್ಪದ ಈಶ್ವರಪ್ಪ ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಹೌದು.. ಕೆ ಎಸ್ ಈಶ್ವರಪ್ಪ ಪಕ್ಷದ ವಿರುದ್ಧವೇ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ. ತಮ್ಮ ಪುತ್ರನಿಗೆ ಟಿಕೆಟ್ ಸಿಗದ ಬಗ್ಗೆ ಅಸಮಾಧಾನ ಹೊಂದಿರುವ ಅವರು ಬಿಜೆಪಿಯಲ್ಲಿ ಯಡಿಯೂರಪ್ಪ ಅಂಡ ಸನ್ಸ್ ಆಳ್ವಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಎಷ್ಟರವರೆಗೆ ತಲುಪಿದೆ ಎಂದರೆ ಪ್ರಧಾನಿ ಮೋದಿ ಶಿವಮೊಗ್ಗಕ್ಕೆ ಬಂದರೂ ಈಶ್ವರಪ್ಪ ಅವರ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ.

ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಬಿಜೆಪಿ ಸಮಾವೇಶಕ್ಕೆ ಚಕ್ಕರ್ ಹಾಕಿದ್ದ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಮೇ 7 ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಕೋರಿ ಜಿಲ್ಲೆಯ ವಿವಿಧ ಮಠಗಳಿಗೆ ಭೇಟಿ ನೀಡಿದ್ದಾರೆ. ಮಠಗಳು ಮತ್ತು ಸ್ವಾಮೀಜಿಗಳ ಆಶೀರ್ವಾದ ಕೋರಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.
ಬಿಳಕಿ, ಗೋಣಿಬೀಡು, ತೊಗರ್ಸಿ, ಹಿರೇಮಾಗಡಿ, ಜಡೆಮುಡಿ, ಶಾಂತಾಪುರ, ಹಾರ್ನಹಳ್ಳಿ, ಚೋಕಿಮಠ, ಮೂಲೆಗದ್ದೆ, ಹೊಸನಗರ ತಾಲೂಕಿನ ಹೊಂಬುಜದ ಜೈನ ಮಠ, ಶಿಕಾರಿಪುರ ತಾಲೂಕಿನ ಸಾಲೂರು ಮಠ ಸೇರಿದಂತೆ ವಿವಿಧ ಮಠಗಳಿಗೆ ಒಂದೇ ದಿನದಲ್ಲಿ ಕೆಎಸ್ ಈಶ್ವರಪ್ಪ ಭೇಟಿ ನೀಡಿದ್ದಾರೆ.

ಇದಲ್ಲದೆ ವೀರಶೈವ ಲಿಂಗಾಯತ ಮಠಗಳು ಮತ್ತು ಜೈನ ಮಠಗಳ ಮಠಾಧೀಶರಿಂದ ಬೆಂಬಲ ಕೋರಿದರು. ಈ ಮೂಲಕ ಯಾವ ಹೈಕಮಾಂಡ್ ಬಂದು ತನ್ನ ಮನವೊಲಿಸಲು ಪ್ರಯತ್ನಿಸಿದರು ತಾನು ಬಗ್ಗುವುದಿಲ್ಲ ಎಂಬುದನ್ನು ಈಶ್ವರಪ್ಪ ಸಾಬೀತು ಮಾಡಿದ್ದಾರೆ. ಹೀಗಾಗಿ ಚುನಾವಣೆಗೆ ನಿಲ್ಲುವುದು ಫಿಕ್ಸ್ ಆಗಿದೆ.
ಸೋಮವಾರ ಶಿವಮೊಗ್ಗ ನಗರದ ಅಲ್ಲಮಪ್ರಭು ಪಾರ್ಕ್‌ನಲ್ಲಿ ಪ್ರಧಾನಿ ಮೋದಿ ಸಮಾವೇಶ ನಡೆದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಕಿತ್ತುಹಾಕಲು ಬಿಜೆಪಿಗೆ ಮತ ಹಾಕಿ ಎಂದು ಪ್ರಧಾನಿ ಮನವಿ ಮಾಡಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಎಲ್‌ಇಡಿ ಪರದೆಯಲ್ಲಿ ಯಡಿಯೂರಪ್ಪ ಅವರೊಂದಿಗೆ ಈಶ್ವರಪ್ಪ ಇರುವ ಫೋಟೋವನ್ನು ತೋರಿಸಲಾಗಿದೆ.
ನರೇಂದ್ರ ಮೋದಿ ಸಮಾವೇಶದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ದಕ್ಷಿಣ ಕನ್ನಡ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ, ಬಿಜೆಪಿ ರಾಷ್ಟ್ರೀಯ ನಾಯಕ, ಮಾಜಿ ಸಚಿವ ಸಿ.ಟಿ.ರವಿ, ಶಿವಮೊಗ್ಗ ನಾಮನಿರ್ದೇಶಿತ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಾರಾಯಣಸ್ವಾಮಿ?
ಇನ್ನು, ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಬಿಜೆಪಿ ಇನ್ನೂ ಘೋಷಿಸದಿದ್ದರೂ, ಕೇಂದ್ರ ಸಚಿವರು ಮತ್ತು ಹಾಲಿ ಸಂಸದ ಎ ನಾರಾಯಣಸ್ವಾಮಿ ನರೇಂದ್ರ ಮೋದಿ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೀಗಾಗಿ, ಅವರು ಚಿತ್ರದುರ್ಗಕ್ಕೆ ಬಿಜೆಪಿ ಅಭ್ಯರ್ಥಿಯಾಗಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications