KS Eshwarappa V/s BY Raghavendra: ಒಂದೇ ಕಾರ್ಯಕ್ರಮದಲ್ಲಿ ಮುಖಾಮುಖಿಯಾದ ಈಶ್ವರಪ್ಪ, ರಾಘವೇಂದ್ರ; ಮುಂದೆನಾಯ್ತು?
ಶಿವಮೊಗ್ಗ, ಏಪ್ರಿಲ್. 10: ಮಂಡ್ಯ ನಂತರ ರಾಜ್ಯದಲ್ಲಿ ಭಾರೀ ಸುದ್ದಿಯಾಗುತ್ತಿರುವ ಮತ್ತು ಕುತೂಹಕ ಕೆರಳಿಸುತ್ತಿರುವ ಲೋಕಸಭಾ ಕ್ಷೇತ್ರ ಎಂದರೆ ಅದು ಶಿವಮೊಗ್ಗ. ರಾಜ್ಯ ಬಿಜೆಪಿಯಲ್ಲಿನ ಕುಟುಂಬ ರಾಜಕಾರಣದ ವಿರುದ್ಧ ಹೋರಾಡುತ್ತೇನೆ ಎಂದು ಟೊಂಕ ಕಟ್ಟಿ ಚುನಾವಣೆಗೆ ನಿಲ್ಲುತ್ತಿದ್ದಾರೆ ಕೆ ಎಸ್ ಈಶ್ವರಪ್ಪ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನನ್ನನ್ನು ನಂಬಿಸಿ ಮೋಸ ಮಾಡಿದ್ದಾರೆ ಎಂದು ಅವರ ಮಗ, ಹಾಲಿ ಸಂಸದ ಬಿ ವೈ ರಾಘವೇಂದ್ರ ವಿರುದ್ಧ ಶಿವಮೊಗ್ಗದಿಂದ ಕಣಕ್ಕಿಳಿಯುತ್ತಿದ್ದಾರೆ. ಪ್ರಧಾನಿ ಮೋದಿ ಅವರ ಫೋಟೋಗಳನ್ನು ಚುನಾವಣಾ ಪ್ರಚಾರಕ್ಕೆ ಬಳಸುತ್ತಿದ್ದಾರೆ. ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗುತ್ತಿದ್ದಾರೆ. ಪಕ್ಷದ ವಿರುದ್ಧವೇ ಬಂಡಾಯವೆದ್ದಿರುವ ಅವರು ಈ ಮೂಲಕ ತಾನು ಇನ್ನೂ ಬಿಜೆಪಿಯವನೇ ಎಂದು ತೋರಿಸಿಕೊಳ್ಳುತ್ತಿದ್ದಾರೆ.

ಯುಗಾದಿ ಹಬ್ಬದ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಾ ಸಂಘದ (ಆರ್‌ಎಸ್‌ಎಸ್) ಶಿವಮೊಗ್ಗದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರಾಗಿರುವ ಕೆ ಎಸ್ ಈಶ್ವರಪ್ಪ ಮತ್ತು ಬಿ ವೈ ರಾಘವೇಂದ್ರ ಭಾಗಿಯಾಗಿಯಾಗಿದ್ದರು. ಶಿವಮೊಗ್ಗದ ಆದಿಚುಂಚನಗಿರಿ ಶಾಲಾ ಅವರಣದಲ್ಲಿ ಕಾರ್ಯಕ್ರಮ ನಡೆದಿದೆ.
ಕಾರ್ಯಕ್ರಮದಲ್ಲಿ ಇಬ್ಬರು ನಾಯಕರು ಮುಖಾಮುಖಿಯಾದರೂ ಕೂಡ ಪರಸ್ಪರ ಮಾತನಾಡಿದ್ದ. ಕನಿಷ್ಠ ಶುಭಾಶಯಗಳನ್ನು ಕೂಡ ವಿನಿಮಯ ಮಾಡಿಕೊಂಡಿಲ್ಲ. ಹಾಲಿ ಸಂಸದ ಬಿವೈ ರಾಘವೇಂದ್ರ ಮುಂಭಾಗದ ಸಾಲಿನಲ್ಲಿ ಕುಳಿತಿದ್ದರು. ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಹಿಂಭಾಗದ ಸಾಲಿನಲ್ಲಿ ಕುಳಿತಿದ್ದರು.

ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಎಸ್ ಈಶ್ವರಪ್ಪ, "ರಾಷ್ಟೀಯ ಸ್ವಯಂ ಸೇವಕ ಸಂಘದ ವತಿಯಿಂದ ಹೊಸ ಸಂವತ್ಸರ ಆರಂಭದ ಅಂಗವಾಗಿ ಯುಗಾದಿ ಉತ್ಸವ ಕಾರ್ಯಕ್ರಮವನ್ನು ನಗರದ ಆದಿ ಚುಂಚನಗಿರಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಆರ್.ಎಸ್.ಎಸ್. ಪ್ರಮುಖರು ಹಾಗು ಸ್ವಯಂ ಸೇವಕರು ಉತ್ಸವದಲ್ಲಿ ಉಪಸ್ಥಿತರಿದ್ದರು" ಎಂದಿದ್ದಾರೆ. ತಮ್ಮ ನೋಟ್‌ನಲ್ಲಿ ರಾಘವೇಂದ್ರ ಅವರ ಹೆಸರನ್ನು ಉಲ್ಲೇಖಿಸಿಲ್ಲ.
ಇತ್ತ, ಬಿವೈ ರಾಘವೇಂದ್ರ ಕೂಡ ಕಾರ್ಯಕ್ರಮದ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಜೊತೆಗೆ "ಯುಗಾದಿ ಹಬ್ಬದ ಪ್ರಯುಕ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಗರದ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ "ಯುಗಾದಿ ಸಂಭ್ರಮ" ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು" ಎಂದು ಹೇಳಿದ್ದಾರೆ.
ಕೆಎಸ್ ಈಶ್ವರಪ್ಪ ತಮ್ಮ ಮಗ ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡದ ಕಾರಣ ಬಿಜೆಪಿ ನಾಯಕತ್ವದ ವಿರುದ್ಧ ಸಿಡಿದೆದ್ದಿದ್ದಾರೆ. ಅದರಲ್ಲೂ ಟಿಕೆಟಿ ಕೊಡಿಸುವುದಾಗಿ ಹೇಳಿ ಮಾತು ತಪ್ಪಿದ್ದಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಕಿಡಿಕಾರುತ್ತಿದ್ದಾರೆ. ಹೀಗಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್ ಶಾ ಅವರು ಕೆಎಸ್ ಈಶ್ವರಪ್ಪ ಅವರಿಗೆ ಕರೆ ಮಾಡಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಹೇಳಿದ್ದರು. ಆದರೆ, ಅವರ ಮಾತನ್ನು ನಯವಾಗಿ ನಿರಾಕರಿಸಿದ್ದೇನೆ ಎಂದು ಈಶ್ವರಪ್ಪ ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದರು. ಬಿಜೆಪಿಯಲ್ಲಿರುವ ಕುಟುಂಬ ರಾಜಕಾರಣವನ್ನು ನಿರ್ನಾಮ ಮಾಡಬೇಕು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಬದಲಾಯಿಸಿದರೇ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದಾರೆ.












Click it and Unblock the Notifications